ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ
Last Updated 25 ಫೆಬ್ರುವರಿ 2020, 14:04 IST
ಅಕ್ಷರ ಗಾತ್ರ

ರಾಯಚೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯದ ನೂತನ ಕಟ್ಟಡಗಳು, ದುರಸ್ತಿ ಕಾಮಗಾರಿ ಹಾಗೂ ಮೂಲಸೌಕರ್ಯ ಒದಗಿಸುವುದನ್ನು ಗುತ್ತಿಗೆ ಪಡೆದ ಲೋಕೋಪಯೋಗಿ ಹಾಗೂ ಪಿಆರ್‌ಇಡಿ ಸಂಸ್ಥೆಗಳು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಬರೀ ಬೋಧನೆ ಮಾಡಿದರೆ ಸಾಕಾಗುವುದಿಲ್ಲ. ಶೇ 100 ರಷ್ಟು ಫಲಿತಾಂಶ ಸಾಧಿಸಬೇಕು. ಲೋಕೋಪಯೋಗಿ ಮತ್ತು ಪಿಆರ್‌ಇಡಿ ಎಂಜಿನಿಯರುಗಳು ಬಾಕಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 2017–18 ರಿಂದ 2019–20 ರವರೆಗಿನ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಮ್‌ ಸಮುದಾಯ ಭವನ ನಿರ್ಮಾಣಕ್ಕೆ ₹1,400 ಕೋಟಿ ಬಿಡುಗಡೆಯಾದರೂ ಕೂಡ ಕಾಮಗಾರಿ ಶೇ 25 ರಷ್ಟು ಮಾತ್ರ ಪ್ರಗತಿಯಾಗಿದೆ. ಇಷ್ಟು ವಿಳಂಬಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪರಿಶಿಷ್ಟರು ವಾಸಿಸುವ ಕಾಲೋನಿಗಳಲ್ಲಿ ಮೂಲಸೌಕರ್ಯ ಒದಗಿಸಲು ವಿಶೇಷ ಅನುದಾನ ಬಿಡುಗಡೆ ಮಾಡಿದ್ದರೂ ಸಮರ್ಪಕವಾಗಿ ಕೆಲಸವಾಗಿಲ್ಲ. 2018–19ನೇ ಸಾಲಿನ 211 ಕಾಮಗಾರಿಗಳ ಪೈಕಿ 170 ಕಾಮಗಾರಿ ಇನ್ನೂ ಪ್ರಗತಿಯಲ್ಲಿವೆ, 27 ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು ಮತ್ತೆಷ್ಟು ಸಮಯಾವಕಾಶಬೇಕು. ₹15.20 ಕೋಟಿ ಮಂಜೂರಾದ ಅನುದಾನದ ಪೈಕಿ ₹13.46 ಕೊಟಿ ಬಿಡುಗಡೆಯಾದರೆ ₹7.40ಕೋಟಿ ಮಾತ್ರ ಖರ್ಚು ಮಾಡಿರುವ ಬಗ್ಗೆಮಾಹಿತಿ ಪಡೆದು ಅಸಮಾಧಾನ ವ್ಯಕ್ತಪಡಿಸಿದರು.

ಅನುದಾನ ಬಳಸಿಕೊಂಡು ಕಾಮಗಾರಿ ಮಾಡದೇ ಯಾಕೆ ವಿಳಂಬ ಮಾಡಲಾಗಿದೆ. ಅಲ್ಲದೇ ಪರಿಶಿಷ್ಟರ ದೌರ್ಜನ್ಯ ಪ್ರಕರಣಗಳು ದಾಖಲಿಸದೇ ಲೋಪ ಎಸಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಲಿಂಗಸುಗೂರಿನ ಗ್ರಾಮವನ್ನು ಶೇ 45 ರಷ್ಟು ಜನ ಪರಿಶಿಷ್ಟರು ವಾಸವಾಗಿರುವ ನಿಯಮದ ಪ್ರಕಾರಮುಖ್ಯಮಂತ್ರಿ ಗ್ರಾಮ ಅಭಿವೃದ್ಧಿ ಯೋಜನೆಗೆ ಅಯ್ಕೆಮಾಡಿದ್ದು, 2016–17 ನೇ ಸಾಲಿನ ಕಾಮಗಾರಿಗಳನ್ನು ಇದುವರೆಗೆ ಪೂರ್ಣಗೊಂಡಿಲ್ಲ. ಪ್ರಧಾನಮಂತ್ರಿ ಅದರ್ಶ ಗ್ರಾಮದಡಿ ₹150 ಕೋಟಿ ಅನುದಾನ ಬಿಡುಗಡೆಯಾದರೂ ಶೂನ್ಯ ಸಾಧನೆಯಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಕೆಂಡಮಂಡಲರಾಗಿ, ಈ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸ್ಮಶಾನ ಸ್ಥಳದ ಬಗ್ಗೆ ಸೂಕ್ತ ಮಾಹಿತಿ ನೀಡದ್ದಕ್ಕೆ ಸಚಿವ ಕಾರಜೋಳ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಲಿತರಿಗೆ ಮೀಸಲಾದ ಸ್ಮಶಾನ ಜಾಗದ ಬಗ್ಗೆ ಮಾಹಿತಿ ಪಡೆದು ಕೂಡಲೇ ಕಳುಹಿಸಿ ಎಂದು ಸೂಚಿಸಿದರು.

ಸರಿಯಾಗಿ ಕೆಲಸ ಮಾಡದಿದ್ದರೆ ಕೋಲಾರಕ್ಕೆ ವರ್ಗಾವಣೆ ಮಾಡುತ್ತೇನೆ ಅಂತ ರಾಯಚೂರಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಂಸದ ರಾಜಾ ಅರಮೇಶ್ವರ ನಾಯಕ, ಶಾಕರಾದ ಡಾ.ಶಿವರಾಜ ಪಾಟೀಲ, ರಾಜಾ ವೆಂಕಟಪ್ಪ ನಾಟಕ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT