ಗುರುವಾರ , ಸೆಪ್ಟೆಂಬರ್ 24, 2020
27 °C

ರಾಯಚೂರು: ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಚುರುಕಿನಿಂದ ಕೆಲಸ ಮಾಡಬೇಕು. ಒಪೆಕ್‌, ರಿಮ್ಸ್‌ ಆಸ್ಪತ್ರೆಗಳಲ್ಲಿ ಉಂಟಾದ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಶುಚಿತ್ವ ಪರಿಸರ, ಸೂಕ್ತ ಚಿಕಿತ್ಸೆ ಹಾಗೂ ಶುಚಿಯಾದ ಊಟ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೋವಿಡ್‌ ಮತ್ತು ಪ್ರವಾಹ ನಿರ್ವಹಣೆ ಸಂಬಂಧ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಆಸ್ಪತ್ರೆ‌ಯ ಅವ್ಯವಸ್ಥೆ ‌ನೋಡಿ ಮೃತಪಟ್ಟಿರುವ ಉದಾಹರಣೆಗಳು ನಡೆಯುತ್ತಿವೆ. ಕೋವಿಡ್ ದೃಢವಾದವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕು. ಎಷ್ಟೇ ಒತ್ತಡ ಆಗುತ್ತಿದ್ದರೂ ಮಾನವೀಯತೆ ಆಧಾರದಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ. ಸಮಸ್ಯೆ ಇದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾದ ನಂತರವೇ ಕೆಲಸ ಮಾಡುವ ಪ್ರವೃತ್ತಿ ಬೇಡ ಎಂದು ಹೇಳಿದರು.

ಆಹಾರ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ನೋಡಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಕೋವಿಡ್‌ಗೆ ಔಷಧಿ ಇಲ್ಲ. ಹೀಗಾಗಿ ಕೋವಿಡ್ ದೃಢವಾದವರನ್ನು ಇರಿಸುವ ಕಡೆಗಳಲ್ಲಿ ಧೈರ್ಯ ಹೇಳುವ ಕೆಲಸವನ್ನಾದರೂ ಮಾಡಬೇಕು ಎಂದರು.

ನೆಗಡಿ, ಜ್ವರ, ಕಫ ಆದವರಿಗೆಲ್ಲ ಪರೀಕ್ಷೆ ಮಾಡಿಸಿದರೆ ಕೋವಿಡ್‌ ಪಾಜಿಟಿವ್ ವರದಿ ಬರುತ್ತಿವೆ. ಈ ಬಗ್ಗೆಯೂ ವೈದ್ಯರು ಪರಿಶೀಲಿಸಬೇಕು. ರೋಗದ ಲಕ್ಷಣಗಳು ಇಲ್ಲದವರು ಆಸ್ಪತ್ರೆಯಲ್ಲಿ ಹಾಗೇ ಇದ್ದು, ಬರುವುದಿದ್ದರೆ ಅಲ್ಲಿಗೆ ಏಕೆ ಹೋಗಬೇಕು? ಒಂದು ವೇಳೆ, ಆಸ್ಪತ್ರೆಗೆ ಕರೆದೊಯ್ದರೆ, ಏನಾದರೂ ಬದಲಾವಣೆ ಪಡೆದ ಭರವಸೆ ಸೋಂಕಿತರಲ್ಲಿ ಬರಬೇಕು. ಅಂಥಹ ಪರಿಸರ ನಿರ್ಮಿಸುವ ಹೊಣೆಗಾರಿಕೆ ಎಲ್ಲ ಅಧಿಕಾರಳದ್ದಾಗಿದೆ ಎಂದು ತಿಳಿಸಿದರು.

ಕೃಷ್ಣಾನದಿ ಪ್ರವಾಹ ನಿರ್ವಹಣೆಗಾಗಿ ಮಹಾರಾಷ್ಟ್ರದ ಸತಾರಾ, ಕರಾಡಾ ಹಾಗೂ ಮಹಾಬಲೇಶ್ವರದಲ್ಲಿ ಮಳೆ ಬೀಳುತ್ತಿರುವ ಮಾಹಿತಿ ಪಡೆದುಕೊಳ್ಳಬೇಕು. 'ಆಶ್ಲೇಷ ಮಳೆ‌ ಬಂದರೆ ಹೊಳೆ‌ ಸೂಸಲಾಡಿತು' ಎನ್ನುವ ಮಾತಿದೆ. ಆಗಸ್ಟ್ ನಲ್ಲಿಯೇ ಹೆಚ್ಚು ಮಳೆ ಸುರಿಯುತ್ತದೆ. ಮಾಹಿತಿ ಪಡೆದು, ಪೂರ್ವದಲ್ಲಿಯೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರೈತರಿಗೆ ಕಳಪೆ ಬೀಜ, ಮಣ್ಣುಮಿಶ್ರಿತ ರಾಸಾಯನಿಕ ಗೊಬ್ಬರ ಪೂರೈಸುವ ಕಂಪೆನಿಗಳ ವಿರುದ್ಧ ಕೃಷಿ ಅಧಿಕಾರಿಗಳು ತನಿಖೆ ಮಾಡಬೇಕು. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಸೂಚಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ರಿಮ್ಸ್‌ನಲ್ಲಿ ವೈದ್ಯರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ. ಜಿಲ್ಲಾಧಿಕಾರಿ, ಶಾಸಕರು ಒತ್ತಡ ಹಾಕಿ ಕೆಲಸ ಮಾಡಿಸುವ ಪರಿಸ್ಥಿತಿ ಬರಬಾರದು‌ ಎಂದರು.

ಜಲದುರ್ಗ, ಶೀಲಹಳ್ಳಿ ಸೇತುವೆಗಳಿಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಾಣ ಮಾಡಲು ಕೆಬಿಜೆಎನ್ಎಲ್ ನಿಂದ ಅನುದಾನ ಕೊಡಬೇಕು. ಇದರಿಂದ ಸುಮಾರು 10 ಗ್ರಾಮಗಳಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಓಪೆಕ್ ಆಸ್ಪತ್ರೆಗೆ ದಾಖಲಾಗುವುದು ನರಕಕ್ಕೆ ಹೋದ ಅನುಭವ ಆಗುತ್ತಿದೆ ಎಂದು ಕೋವಿಡ್‌ ದೃಢವಾದವರು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ನದಿತೀರದ ಪ್ರದೇಶ, ಹಳ್ಳ ತೀರದ ಪ್ರದೇಶಕ್ಕೆ 7 ತಾಸು ವಿದ್ಯುತ್ ಕೊಡಲಾಗುತ್ತಿದೆ. ಬಹಳ ತೊಂದರೆ ಆಗುತ್ತಿದೆ ಎಂದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಕೋವಿಡ್ ವಾರ್ಡ್‌ಗಳಿಗೆ ವೈದ್ಯರು ಭೇಟಿ ನೀಡುತ್ತಿಲ್ಲ. ಇದರಿಂದಾಗಿಯೇ ಕೋವಿಡ್ ದೃಢವಾದವರು ಆಸ್ಪತ್ರೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ಕನಿಷ್ಠಪಕ್ಷ ವೈದ್ಯರು ವಾರ್ಡ್ ಗೆ ಬಂದು ನೋಡುತ್ತಾರೆ ಎನ್ನುವ ಭಾವನೆ ಬರಬೇಕಾಗಿದೆ ಎಂದು ಗಮನ ಸೆಳೆದರು.

ಸಿಂಧನೂರಿಗೆ ಹಂಚಿಕೆ ಆಗಿರುವಷ್ಟು ಯೂರಿಯಾ ಕೊಟ್ಟಿಲ್ಲ. ರಾಯಚೂರಿನಲ್ಲಿಯೇ ಎಲ್ಲವೂ ತೆಗೆದುಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿ ಸರಿಯಲ್ಲ.ಜಿಲ್ಲಾಧಿಕಾರಿ ಗಮನ ಹರಿಸಿ, ಯೂರಿಯಾ ಒದಗಿಸಬೇಕು ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ರಾಯಚೂರು- ಮಾನ್ವಿ. ರಾಯಚೂರು- ಲಿಂಗಸುಗೂರು ರಸ್ತೆ ಪಡಿಸಬೇಕು ಎಂದು ಲೋಕೋ‍ಪಯೋಗಿ ಎಂಜಿನಿಯರ್‌ಗೆ ತಿಳಿಸಿದರು. 

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿ, ಪ್ರವಾಹ ನಿರ್ವಹಣೆಗಾಗಿ ಅಗ್ನಿಶಾಮಕ ದಳದಲ್ಲಿ ಮೂರು ರಬ್ಬರ್ ಬೋಟ್ ಗಳಿವೆ. ಇನ್ನು ಐದು ಬೋಟ್ ಗಳನ್ನು ಖರೀದಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಪ್ರವಾಹದ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಕೋವಿಡ್‌ ನಿರ್ವಹಣೆ ಮಾಹಿತಿ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬೀದ್‌ ಅವರು ಬಿತ್ತನೆ ಹಾಗೂ ಮಳೆ ಮಾಹಿತಿ ಒದಗಿಸಿದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಚನಬಸಪ್ಪ ಮೇಕಾಳೆ ಅವರು ರಸ್ತೆ ದುರಸ್ತಿ ಬಗ್ಗೆ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಸಭೆಗೆ ಸ್ವಾಗತಿಸಿದರು.

ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಟಿಎಲ್‌ಬಿಸಿ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಜಿಲ್ಲಾಧಿಕಾರಿ ಅರ್.ವೆಂಕಟೇಶಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು