ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಚಿಕಿತ್ಸೆಗೆ ವಿಶೇಷ ಗಮನವಿರಲಿ

ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚನೆ
Last Updated 3 ಜೂನ್ 2021, 17:19 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್ ಮೂರನೇ ಅಲೆ ಮಕ್ಕಳಲ್ಲಿ ಬಾಧಿಸಲಿದೆ ಎಂಬುದು ಈಗಾಗಲೇ ವರದಿಯಾಗುತ್ತಿದೆ. ಅದಕ್ಕಾಗಿ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಚಿಕಿತ್ಸೆಗಾಗಿ ವಿಶೇಷ ಗಮನಹರಿಸಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರ ಮತ್ತು ಇತರೆ ಅಧಿಕಾರಿಗಳ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಲು 150 ಹಾಸಿಗೆಗಳ ವಾರ್ಡ್ ಹಾಗೂ 50 ಐಸಿಯು ಹಾಸಿಗೆಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ಮಕ್ಕಳ ಚಿಕಿತ್ಸೆಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು. ಚಿಕಿತ್ಸೆಗಾಗಿ ಅಗತ್ಯ ಔಷಧಿ, ಮಾತ್ರೆಗಳ ಸಂಗ್ರಹವಿರಬೇಕು. ವೈದ್ಯಕೀಯ ಆಮ್ಲಜನಕದ ಕೊರತೆ ಕಂಡುಬರಬಾರದು. ಮುಖ್ಯವಾಗಿ ಆಮ್ಲಜನಕ ಸರಬರಾಜಿನಲ್ಲಿ ಕೊರತೆ ಎದುರಾಗಬಾರದು. ಈಗಾಗಲೇ ನಿರ್ಮಿಸಲು ಉದ್ದೇಶಿಸಲಾಗಿರುವ ಐಸಿಯು ಬಸ್‌ಗಳನ್ನು ಮತ್ತಷ್ಟು ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡರೆ, ಅಗತ್ಯ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯನ್ನು ಅಲ್ಲಿಯೇ ನೀಡಬಹುದು. ಈ ದಿಸೆಯಲ್ಲಿ ಜಿಲ್ಲಾಡಳಿತ ಸಿದ್ದವಾಗಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ನಕಲಿ ವೈದ್ಯರ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಕೆಮ್ಮು, ಜ್ವರ, ನೆಗಡಿ ಇತ್ಯಾದಿ ಕಾಯಿಲೆಗಳ ಚಿಕಿತ್ಸೆಗಾಗಿ ತೆರಳುವ ಗ್ರಾಮೀಣರನ್ನು ಕೋವಿಡ್ ಸೋಂಕು ತಪಾಸಣೆ ಮಾಡದೇ ಅವರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಕೊರೊನಾ ಸೋಂಕಿತರು ಅವರ ಬಳಿ ತೆರಳಿ ಚಿಕಿತ್ಸೆ ಪಡೆದು, ಫಲಕಾರಿಯಾಗದೇ ಅಂತಿಮ ಹಂತದಲ್ಲಿ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ತಿಳಿಸಿದರು.
ಕೊನೆಯ ಹಂತದ ಚಿಕಿತ್ಸೆ ಹಲವು ರೋಗಿಗಳಿಗೆ ಫಲಿಸುತ್ತಿಲ್ಲ. ಹಾಗಾಗಿ ಕೋವಿಡ್ ಸೋಂಕಿತರು ಮೃತಪಟ್ಟಲ್ಲೀ ನೇರವಾಗಿ ನಕಲಿ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡುವಂತೆ ತಿಳಿಸಿದರು.

ಕೋವಿಡ್ ಸೋಂಕಿತರ ಆರೈಕೆಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಉತ್ತಮ ಊಟ, ಉಪಹಾರ, ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕು. ಶೌಚಾಲಯಗಳು ಸ್ಪಚ್ಚವಾಗಿರಬೇಕು, ಮುಖ್ಯವಾಗಿ ರೋಗಿಗಳಿಗೆ ತಮ್ಮ ಮನೆಗಿಂತಲೂ ಇದು ಉತ್ತಮವಾಗಿದೆ ಎಂಬ ಭಾವನೆ ಮೂಡಬೇಕು. ಆ ರೀತಿ ಆರೈಕೆ ಕೇಂದ್ರಗಳಿರಬೇಕು. ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಔಷಧ, ಮಾತ್ರೆಗಳನ್ನು ವಿತರಿಸಬೇಕು, ವೈದ್ಯರು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನರಂಜನೆಗೆ, ಒಳಾಂಗಣ ಕ್ರೀಡೆಗಳಿಗೆ ಸಾಮಗ್ರಿಗಳನ್ನು ಪೂರೈಸಬೇಕು. ಯಾವುದೇ ರೀತಿಯ ಅವ್ಯವಸ್ಥೆಗಳು ಅಲ್ಲಿ ಕಂಡುಬರಬಾರದು ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್. ವೆಂಕಟೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್, ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರಬಾಬು, ಡಿಎಸ್‌ಒ ಡಾ. ನಾಗರಾಜ್, ಆರ್‌ಸಿಎಚ್ ಡಾ. ವಿಜಯ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ವಿಜಯ ಶಂಕರ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT