ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಾಮಿ ಸ್ಪೀಕರ್‌, ಬಿಜೆಪಿ ಶಾಸಕರಿಂದ ರಾಷ್ಟ್ರಗೀತೆಗೆ ಅಗೌರವ

Last Updated 19 ಮೇ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿ, ಬಿಜೆಪಿ ನೇತೃತ್ವದ ಸರ್ಕಾರ ಪತನಗೊಳ್ಳುತ್ತಿದ್ದಂತೆ ಪಕ್ಷದ ಶಾಸಕರು ಮತ್ತು ಹಂಗಾಮಿ ಸ್ಪೀಕರ್‌ ರಾಷ್ಟ್ರಗೀತೆಗೂ ಗೌರವ ನೀಡದೆ ನಿರ್ಗಮಿಸಿದರು.

ಯಡಿಯೂರಪ್ಪ ವಿದಾಯ ಭಾಷಣ ಮುಗಿಸಿ ಹೊರಡುತ್ತಿದ್ದಂತೆ ಅವರ ಹಿಂದೆಯೇ ಹೊರಟ ಬಿಜೆಪಿ ಶಾಸಕರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ‘ಶೇಮ್‌ ಶೇಮ್‌’ ಎಂದು ಛೇಡಿಸಿದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಸಹ ‘ಹೋಗಿ... ಹೋಗಿ...’ ಎಂದು ಬಿಜೆಪಿ ಶಾಸಕರನ್ನು ಮೂದಲಿಸಿದರು.

ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಕೆ.ಜಿ.ಬೋಪಯ್ಯ ರಾಷ್ಟ್ರಗೀತೆ ಮೊಳಗುವ ಮೊದಲೇ ಪೀಠದಿಂದ ನಿರ್ಗಮಿಸಿದರು. ಶಾಸಕ ಎಂ.ಬಿ.ಪಾಟೀಲ ‘ಕನಿಷ್ಠ ಪಕ್ಷ ರಾಷ್ಟ್ರಗೀತೆಗಾದರೂ ಗೌರವ ಕೊಡಿ’ ಎಂದರೂ ಅವರು ಕಿವಿ ಮೇಲೆ ಹಾಕಿಕೊಳ್ಳದೆ ಹೋದರು. ರಾಷ್ಟ್ರಗೀತೆ ಮುಗಿಯುವವರೆಗೂ ಬಿಜೆಪಿಯ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಸದನದಲ್ಲಿ ನಿಂತಿದ್ದರು.

ರಾಷ್ಟ್ರಗೀತೆ ಮೊಳಗುತ್ತಿರುವಾಗಲೇ ಮಾರ್ಷಲ್‌ಗಳು ಬೋಪಯ್ಯ ಅವರನ್ನು ವಾಪಸ್‌ ಕರೆದುಕೊಂಡು ಬಂದರು. ಪೀಠದ ಹಿಂದೆಯೇ ನಿಂತುಕೊಂಡ ಬೋಪಯ್ಯ, ರಾಷ್ಟ್ರಗೀತೆ ಮುಗಿದ ನಂತರ ಅಲ್ಲಿಂದ ಹೊರಟರು.

‘ಆಡಳಿತ ಪಕ್ಷದವರು ಸರ್ಕಾರಕ್ಕೆ ಸೋಲಾಗುತ್ತಿದ್ದಂತೆ ರಾಷ್ಟ್ರಗೀತೆಗೂ ಗೌರವ ನೀಡದೆ ಹೋದರು. ರಾಷ್ಟ್ರಗೀತೆಗೆ ಬಿಜೆಪಿಯವರು ಎಷ್ಟು ಗೌರವ ಕೊಡುತ್ತಾರೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಕನಿಷ್ಠ ಪಕ್ಷ ಸ್ಪೀಕರ್‌ ಕೂಡ ಪೀಠದಲ್ಲಿ ಇರಲಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಆರ್‌.ವಿ.ದೇಶಪಾಂಡೆ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT