ಹೂವು– ಹಣ್ಣು ಖರೀದಿಗೆ ಮುಗಿ ಬಿದ್ದ ಜನ

ಮಸ್ಕಿ: ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೂ ಬಂದಿರುವ ಬೆಳಕಿನ ಹಬ್ಬ ದೀಪಾವಳಿಯನ್ನು ಪಟ್ಟಣದಲ್ಲಿ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಗುರುವಾರ ಅಮಾವಾಸ್ಯೆ ಆಗಿದ್ದರಿಂದ ಸಂಜೆ 6-30 ರಿಂದ ಪಟ್ಟಣದ ಬಹುತೇಕ ದಲಾಲಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತಿದೆ. ಮತ್ತೆ ಕೆಲವರು ಬಲಿ ಪಾಡ್ಯಮಿ ದಿನವಾದ ಶುಕ್ರವಾರ ಬೆಳಿಗ್ಗೆ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಎರಡು ದಿನ ನಡೆಯುವ ದೀಪಾವಳಿ ಪೂಜಾ ಕಾರ್ಯಕ್ರಮಕ್ಕಾಗಿ ಹಳೆಯ ಬಸ್ ನಿಲ್ದಾಣದ ಬಳಿ ಹೂವಿನ ಹಾಗೂ ಹಣ್ಣಿನ ಅಂಗಡಿಗಳ ತಲೆ ಎತ್ತಿವೆ.
ಹೆದ್ದಾರಿ ಪಕ್ಕದ ಎರಡೂ ಬದಿಯಲ್ಲಿಯೂ ಹೂವು, ಕುಂಬಳ ಕಾಯಿ, ಬಾಳೆ ಹಣ್ಣು ಸೇರಿದಂತೆ ವಿವಿಧ ಅಂಗಡಿಗಳು ತಲೆ ಎತ್ತಿದ್ದು ಖರೀದಿಗಾಗಿ ಅಂಗಡಿಗಳ ಮುಂದೆ ಜನದಟ್ಟಣೆ ಹೆಚ್ಚಾಗಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಣ್ಣು ಹಾಗೂ ಹೂವಿನ ಬೆಲೆಯೂ ಗಗನಕ್ಕೆ ಏರಿದೆ.
ಒಂದು ಕುಂಬಳಕಾಯಿ ₹ 100 ರಿಂದ ₹ 200ಕ್ಕೆ ಮಾರಾಟವಾಗುತ್ತಿದೆ. ಚೆಂಡು ಹೂವು ಒಂದು ಮಳಕ್ಕೆ ₹ 80 ರವರೆಗೆ ನಿಗದಿ ಮಾಡಲಾಗಿದೆ. ಬಾಳೆ ಹಣ್ಣು ಸೇರಿದಂತೆ ಇತರೆ ಹಣ್ಣುಗಳ ಬೆಲೆಯೂ ಕೈಗೆ ಸಿಗದಂತೆ ಏರಿದ್ದರೂ ಸಹ ದೀಪಾವಳಿ ಆಚರಣೆಯನ್ನು ಸಂಭ್ರಮದಿಂದ ಆಚರಿಸಲು ಜನ ಖರೀದಿಗಾಗಿ ಮುಗಿಬಿದ್ದಿದ್ದ ದೃಶ್ಯ ಗುರುವಾರ ಪಟ್ಟಣದಲ್ಲಿ ಕಂಡು ಬಂತು.
ಗುರುವಾರ ಸಂಜೆಯೇ ಹಬ್ಬದ ಅಧಿಕೃತ ಪೂಜಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದರಿಂದ ಹಳೆ ಬಸ್ ನಿಲ್ದಾಣ, ಅಶೋಕ ವೃತ್ತ, ಮುಖ್ಯ ಬಜಾರ ಹಾಗೂ ಕನಕ ವೃತ್ತ ಸೇರಿದಂತೆ ಅನೇಕ ಪ್ರದೇಶಗಳು ಜನ ದಟ್ಟಣೆಯಿಂದ ತುಂಬಿತ್ತು.
ದೀಪಾವಳಿ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಜೂಜಾಟಕ್ಕೆ ಪೋಲಿಸ್ ಇಲಾಖೆ ಕಡಿವಾಣ ಹಾಕಿದೆ. ಧ್ವನಿ ವರ್ಧಕದ ಮೂಲಕ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದೆ. ಸಿಪಿಐ ಸಂಜೀವ್ ಬಳಿಗಾರ, ಪಿಎಸ್‌ಐ ಸಿದ್ಧರಾಮ ಸೇರಿದಂತೆ ಪೊಲೀಸ್ ಸಿಬ್ಬಂದಿ ವೃತ್ತ ಹಾಗೂ ರಸ್ತೆಗಳಲ್ಲಿ ಗಸ್ತು ತಿರುಗುತ್ತಿದ್ದು ಕಂಡು ಬಂತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.