ಗುರುವಾರ , ಮಾರ್ಚ್ 30, 2023
23 °C

ಮಾರುಕಟ್ಟೆಯಲ್ಲಿ ಕಾಣದ ಗ್ರಾಹಕರ ದಟ್ಟಣೆ

ಮಂಜುನಾಥ ಎನ್. ಬಳ್ಳಾರಿ Updated:

ಅಕ್ಷರ ಗಾತ್ರ : | |

Prajavani

ಕವಿತಾಳ: ಮನೆ ಮನಗಳಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದರೂ ಇಲ್ಲಿನ ಮಾರುಕಟ್ಟೆಯಲ್ಲಿ ಗ್ರಾಹಕರ ದಟ್ಟಣೆ ಅಷ್ಟಾಗಿ ಕಂಡು ಬರಲಿಲ್ಲ. ಇಲ್ಲಿನ ಮುಖ್ಯ ರಸ್ತೆ ಬದಿ ಹೂವು, ಹಣ್ಣು ಮತ್ತು ಆಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಗುರುವಾರ ಸಾಧಾರಣ ವ್ಯವಹಾರ ಕಂಡು ಬಂತು.

ಬಟ್ಟೆ ಅಂಗಡಿ, ಕಿರಾಣಿ, ಮೊಬೈಲ್‍, ಎಲೆಕ್ಟ್ರಾನಿಕ್‍ ವಸ್ತುಗಳು ಮತ್ತು ವಾಹನ ಮಾರಾಟದ ಕೆಲವು ಮಳಿಗೆಗಳ ಬಳಿ ಕೆಲ ಗ್ರಾಹಕರು ಕಂಡು ಬಂದರು.

ಮಲ್ಲಿಗೆ, ಸೇವಂತಿಗೆ ಹೂವು ಒಂದು ಮೊಳಕ್ಕೆ ₹ 20 ರಿಂದ ₹ 30, ಚೆಂಡು ಹೂವು ಒಂದು ಕೆ.ಜಿ.ಗೆ ₹ 30 ಮತ್ತು ಬಾಳೆಹಣ್ಣು ಒಂದು ಡಜನ್‍ಗೆ ₹ 30 ರಂತೆ ಮಾರಾಟ ನಡೆಯುತ್ತಿತ್ತು.

‘ಅತ್ತ ಹಳ್ಳಿಯೂ ಅಲ್ಲದ ಇತ್ತ ಪೂರ್ಣ ಪ್ರಮಾಣದ ಪಟ್ಟಣವೂ ಅಲ್ಲದ ಇಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರು ಲಿಂಗಸುಗೂರು, ರಾಯಚೂರು ಮತ್ತು ಮಸ್ಕಿ ಮತ್ತಿತರ ಪಟ್ಟಣಗಳಿಗೆ ಹೋಗಿ ಖರೀದಿಸುವ ಪರಿಣಾಮ ನಮ್ಮಲ್ಲಿ ವ್ಯಾಪಾರ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ವಹಿವಾಟು ಕಡಿಮೆಯಾಗಿದೆ’ ಎಂದು ಹೂವಿನ ವ್ಯಾಪಾರಿ ನರಸಪ್ಪ ಹೂಗಾರ ಹೇಳಿದರು.

‘ಮನೆ ಮತ್ತು ಅಂಗಡಿಗಳಲ್ಲಿ ಲಕ್ಷ್ಮಿ ದೇವಿ ಪೂಜೆಗಳು ನಡೆಯುತ್ತಿದ್ದರೂ ವ್ಯಾಪಾರ ಅಷ್ಟಾಗಿ ನಡೆಯುತ್ತಿಲ್ಲ. ಬೆಳಿಗ್ಗೆಯಿಂದ ಸಾಧಾರಣ ವ್ಯವಹಾರ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರ ಕನಿಷ್ಟ ಮಟ್ಟದಲ್ಲಿದೆ’ ಎಂದು ಚೆಂಡು ಹೂವಿನ ವ್ಯಾಪಾರಿ ಶೇಖ್‍ ರಿಜ್ವಾನ್‍ ಹೇಳಿದರು.

‘ದರ ಏರಿಕೆ ಪರಿಣಾಮ ಗ್ರಾಹಕರಲ್ಲಿ ಖರೀದಿ ಉತ್ಸಾಹ ಅಷ್ಟಾಗಿ ಕಂಡು ಬರುತ್ತಿಲ್ಲ. ಸಗಟು ದರ ಏರಿಕೆಯಾಗಿದ್ದು ಹಣ್ಣುಗಳ ಚಿಲ್ಲರೆ ಮಾರಾಟ ದರ ಏರಿಕೆ ಅನಿವಾರ್ಯವಾಗಿದೆ. ಹೀಗಾಗಿ ಗ್ರಾಹಕರು ಖರೀದಿಗೆ ಹಿಂದು ಮುಂದು ನೋಡುತ್ತಿದ್ದಾರೆ. ಪೂಜೆಗೆ ತೀರಾ ಅಗತ್ಯವಾದಷ್ಟನ್ನು ಮಾತ್ರ ಖರೀದಿಸುತ್ತಿದ್ದಾರೆ. ಹೀಗಾಗಿ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ಇಲ್ಲ’ ಎಂದು ಹಣ್ಣಿನ ವ್ಯಾಪಾರಿ ಯಮನೂರು ತಿಳಿಸಿದರು.

‘ಪೆಟ್ರೋಲ್‍, ಡಿಸೇಲ್‍ ಮತ್ತಿತರ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಉತ್ಸಾಹ ತೋರುತ್ತಿಲ್ಲ. ದರದಲ್ಲಿ ರಿಯಾಯಿತಿ, ₹ 2 ಸಾವಿರ ಮೊತ್ತದ ಉಚಿತ ಕೊಡುಗೆಗಳು, ಸಾಲ ಸೌಲಭ್ಯ ಮತ್ತು ಹಳೇ ಬೈಕ್‌ಗಳ ವಿನಿಮಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿದ್ದರೂ ಬೈಕ್‌ಗಳ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಆದರೂ ಗುರುವಾರ 3 ಬೈಕ್‍ ಮಾರಾಟ ಮಾಡಿದ್ದು 7 ಬೈಕ್‍ ಖರೀದಿಗೆ ಗ್ರಾಹಕರು ಮುಂಗಡ ಹಣ ನೀಡಿದ್ದಾರೆ’ ಎಂದು ಬೈಕ್ ಮಾರಾಟ ಮಳಿಗೆಯ ಮಾಲೀಕ ಲಿಂಗಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.