ಶನಿವಾರ, ಮಾರ್ಚ್ 25, 2023
30 °C
ರಾಯಚೂರಿನ ಮಾರ್ವಾಡಿ ವ್ಯಾಪಾರಿಗಳ ವಿಶಿಷ್ಟ ಸಂಪ್ರದಾಯ

ರಾಯಚೂರು: ಲಕ್ಷ್ಮಿ ಕೃಪಾಕಟಾಕ್ಷಕ್ಕಾಗಿ ಗಾದಿಪೂಜೆ ವಿಶೇಷ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಆರ್ಥಿಕ ವ್ಯವಹಾರ ವೃದ್ಧಿಗಾಗಿ ವ್ಯಾಪಾರಿಗಳು ಲಕ್ಷ್ಮಿ ಪೂಜೆ ನೆರವೇರಿಸಲು ದೀಪಾವಳಿ ಹಬ್ಬವು ವಿಶೇಷ ಸಂದರ್ಭ ಎನ್ನುವ ನಂಬಿಕೆ ವ್ಯಾಪಕವಾಗಿದೆ. ಮಳಿಗೆದಾರರು ಲಕ್ಷ್ಮಿ ಪೂಜೆಯನ್ನು ಶಕ್ತ್ಯಾನುಸಾರ ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ರಾಯಚೂರಿನಲ್ಲಿಯೂ ಮಾರ್ವಾಡಿ ಗಳು ಲಕ್ಷ್ಮಿ ಪೂಜೆಯ ದಿನದಂದು ಪುಟ್ಟ ಗಾದಿ, ದಿಂಬುಗಳಿಗೂ ಪೂಜೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯ ಪಾಲಿಸುತ್ತಾರೆ.

ಲಕ್ಷ್ಮಿ ಭಾವಚಿತ್ರವನ್ನಿಟ್ಟು ಪೂಜೆ, ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಇದರೊಂದಿಗೆ ಲಕ್ಷ್ಮಿದೇವಿಗಾಗಿಯೇ ಪುಟ್ಟದಾದ ಹೊಸ ಗಾದಿ, ದಿಂಬುಗಳನ್ನು ಸಮರ್ಪಿಸುತ್ತಾರೆ. ದೀಪಾವಳಿ ಪೂಜಾ ವಿಧಿವಿಧಾನ ಪೂರ್ಣವಾದ ಬಳಿಕ, ಮಳಿಗೆಯಲ್ಲಿ ನಿರ್ಮಿಸಿದ ಜಗುಲಿಯಲ್ಲಿ ಗಾದಿ ಹಾಗೂ ದಿಂಬುಗಳನ್ನು ಇರಿಸಲಾಗುತ್ತದೆ.
ಅದರ ಮೇಲೆ ಲಕ್ಷ್ಮಿದೇವಿ ಭಾವಚಿತ್ರವನ್ನು ಇರಿಸಿ, ವರ್ಷದುದ್ದಕ್ಕೂ ಪೂಜಿಸುವುದು ವಾಡಿಕೆ. ಪ್ರತಿವರ್ಷ ದೀಪಾವಳಿಗೊಮ್ಮೆ ಗಾದಿ, ದಿಂಬು ಬದಲಿಸಲಾಗುತ್ತದೆ.

ವ್ಯಾಪಾರದಲ್ಲಿ ಸದಾ ಲಾಭ ದೊರಕಲಿ ಎನ್ನುವ ಆಶಾಭಾವದೊಂದಿಗೆ ಲಕ್ಷ್ಮಿ ಕೃಪಾಕಟಾಕ್ಷ ಕೋರಿ ಈ ವಿಶೇಷ ಆರಾಧನೆ ಮಾಡುತ್ತಾರೆ. ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿಯು ಪೂಜಾಕಾರ್ಯಕ್ಕೆ ಶುಭದಾಯಕ.

ಮಾರ್ವಾಡಿ ಸಮುದಾಯದಲ್ಲೇ ಕೆಲವು ವ್ಯಾಪಾರಿಗಳು ಈ ಸಂಪ್ರದಾಯ ಪಾಲನೆ ಮಾಡುತ್ತಾ ಬರುತ್ತಿದ್ದಾರೆ. ಅದೇ ರೀತಿ ಎಪಿಎಂಸಿಗಳಲ್ಲಿ ಮಳಿಗೆ ಹೊಂದಿರುವ ಕಮಿಷನ್‌ ಏಜೆಂಟರು, ಸಗಟು ವ್ಯಾಪಾರಿಗಳು ಕೂಡಾ ಗಾದಿಪೂಜೆ ನೆರವೇರಿಸುತ್ತಾರೆ. ಆದರೆ, ಸ್ವಲ್ಪ ಭಿನ್ನವಾಗಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಲೆಕ್ಕ ಬರೆಯುವುದಾಗ ತಾವು ಕುಳಿತುಕೊಳ್ಳುವ ಬಳಸುವ ಗಾದಿಗೆ ಪೂಜೆ ಸಲ್ಲಿಸುತ್ತಾರೆ.

ಸರಾಫ್‌ ಬಜಾರ್‌ನಲ್ಲಿರುವ ಚಿನ್ನಾಭರಣ ವ್ಯಾಪಾರಿಗಳು ಕೂಡಾ ತಾವು ಅಂಗಡಿಗಳಲ್ಲಿ ಬಳಕೆ ಮಾಡುವ ಗಾದಿ, ದಿಂಬುಗಳಿಗೆ ಪೂಜೆ ಸಲ್ಲಿಸುತ್ತಾರೆ. ಎಲ್ಲ ವ್ಯಾಪಾರಿಗಳು ಲಕ್ಷ್ಮಿಯನ್ನು ಆರಾಧಿಸಿ, ಶುಭ–ಲಾಭ ಕೋರುವುದು ಮಾತ್ರ ಸಾಮಾನ್ಯ ಸಂಪ್ರದಾಯ.

ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದಾಗಿ ಸಂಭ್ರಮಾಚರಣೆಯೊಂದಿಗೆ ದೀಪಾವಳಿ ಆಚರಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ವರ್ಷ ಪೂಜಾ ಕಾರ್ಯಗಳನ್ನು ಸಡಗರದಿಂದ ನೆರವೇರಿಸುವುದಕ್ಕಾಗಿ ಈಗಾಗಲೇ ಪೂರ್ವಸಿದ್ಧತೆಯನ್ನು ವ್ಯಾಪಾರಿಗಳು ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು