ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹ

ಲಿಂಗಸುಗೂರು: ತಾಲ್ಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶದ ಗ್ರಾಮಗಳು ಹಾಗೂ ದೊಡ್ಡಿ ಪ್ರದೇಶಗಳಿಗೆ ಇಂದಿಗೂ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಫಲವಾಗಿರುವ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ನಾಗರಿಕರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತ ಜೆಸ್ಕಾಂ ಕಚೇರಿಗೆ ತೆರಳಿ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಕೆಂಚಪ್ಪ ಭಾವಿಮನಿಗೆ ಮನವಿ ಸಲ್ಲಿಸಿ, ಪೈದೊಡ್ಡಿ ಗ್ರಾಮ ಪಂಚಾಯಿತಿ ಗ್ರಾಮಗಳು ದೊಡ್ಡಿ ಪ್ರದೇಶಗಳು ಭಾಗಶಃ ಕಲ್ಲುಗುಂಡುಗಳ ಗುಡ್ಡದಲ್ಲಿ ವ್ಯಾಪಿಸಿವೆ. ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗಮನ ಸೆಳೆದರು.
ಪರಿಶಿಷ್ಟ ಪಂಗಡದವರಿಗೆ ಸರ್ಕಾರಗಳು ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು ಕೂಡ ನಮ್ಮ ಬದುಕು ಕತ್ತಲು ಕವಿದಿದೆ. ಶಾಲಾ ಕಾಲೇಜುಗಳ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕರಿನೆರಳು ಹಾವರಿಸಿದೆ. ನಮಗೆ ಏನೊಂದು ಸೌಲಭ್ಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದೇವೆ. ಇತರೆ ಸೌಲಭ್ಯಕ್ಕಿಂತ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಒತ್ತಾಯಿಸಿದರು.
ಹಟ್ಟಿ ಸುತ್ತಮುತ್ತಲ ದೊಡ್ಡಿ ಪ್ರದೇಶಗಳಿಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವ ಹೆಸರಲ್ಲಿ ಕೋಟ್ಯಾಂತರ ಹಣ ಲೂಟಿ ಹೊಡೆದು ನಮ್ಮನ್ನು ಕತ್ತಲೆಯಲ್ಲಿ ಇರಿಸಿದ್ದಾರೆ. ಕೆಲಸ ನಿರ್ವಹಿಸದ ಗುತ್ತಿಗೆದಾರರು ಕೆಲಸಕ್ಕೆ ಜಮಾಯಿಸಿದ ಸಾಮಗ್ರಿಗಳ ಕಳ್ಳತನವಾಗಿವೆ ಎಂದು ದೂರು ನೀಡಿ ಸರ್ಕಾರಕ್ಕೆ ಮತ್ತು ಜನತೆ ವಂಚಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ನಮಗೆ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಜಿಲಾನಿಪಾಷ. ಮುಖಂಡರಾದ ಅಮರೇಶ ಛಾವಣಿ, ರವಿಕುಮಾರ ಬರಗುಡಿ, ಅಜೀಜ್‍ಪಾಷ, ಶಿವರಾಜ ನಾಯಕ, ಪ್ರಭುಗೌಡ, ಮುದಕಪ್ಪ, ಬಾಬಾ ಅಲ್ಲಾವುದ್ದೀನ್, ನಿರುಪಾದಿ, ಚಂದು ನಾಯ್ಕ, ಜಾಫರ್, ಅಮರೇಶ, ಬಸವರಾಜ, ಯಂಕೋಬ, ಮಹಾಂತೇಶ ನೇತೃತ್ವ ವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.