ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ದೇವದುರ್ಗ ಶಾಸಕರ ನಿಧಿ ದೇವಸ್ಥಾನ ನಿರ್ಮಾಣಕ್ಕೆ ಬಳಕೆ

2021–22 ನೇ ಸಾಲಿಗೆ ಪ್ರತಿ ಕ್ಷೇತ್ರಕ್ಕೂ ₹1 ಕೋಟಿ ಅನುದಾನ ಬಿಡುಗಡೆ
Last Updated 13 ಅಕ್ಟೋಬರ್ 2021, 14:29 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದಲ್ಲೇ ಅತಿ ಹಿಂದುಳಿದ ತಾಲ್ಲೂಕು ಎನ್ನುವ ಅಪಖ್ಯಾತಿ ದೇವದುರ್ಗ ತಾಲ್ಲೂಕಿನದ್ದಾಗಿದೆ. ಈ ವಿಧಾನಸಭೆ ಕ್ಷೇತ್ರಕ್ಕೆ 2018 ರಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಶಿವನಗೌಡ ನಾಯಕ ಅವರಿಗೆ ರಾಜ್ಯ ಸರ್ಕಾರವು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ₹2 ಕೋಟಿ ಪ್ರತಿವರ್ಷ ಒದಗಿಸಿದೆ. ಶಾಸಕರು ಬಹುತೇಕ ನಿಧಿಯನ್ನು ದೇವಸ್ಥಾನದ ನಿರ್ಮಾಣಕ್ಕಾಗಿ ಬಳಕೆ ಮಾಡುತ್ತಾ ಬರುತ್ತಿರುವುದು ಗಮನಾರ್ಹ.

2017–18ನೇ ಸಾಲಿನಿಂದ ಇದುವರೆಗೂ ನಾಲ್ಕು ವರ್ಷಗಳಲ್ಲಿ ಒಟ್ಟು ₹8 ಕೋಟಿ ಶಾಸಕರ ನಿಧಿಯನ್ನು ಸರ್ಕಾರ ಒದಗಿಸಿದೆ. ಒಟ್ಟು ಅನುದಾನದಲ್ಲಿ ದೇವಸ್ಥಾನಗಳ ನಿರ್ಮಾಣ, ಮಸೀದಿ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣ ಸೇರಿ ಒಟ್ಟು 165 ಕಾಮಗಾರಿಗಳಿಗೆ ಶಾಸಕರು ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು ಹಂಚಿಕೆ ಮಾಡಿದ್ದಾರೆ. ಅದರಲ್ಲಿ ಇದುವರೆಗೂ ₹6.93 ಕೋಟಿ ಬಿಡುಗಡೆ ಮಾಡಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ದೇವದುರ್ಗ ವಿಧಾನಸಭೆ ಕ್ಷೇತ್ರದಾದ್ಯಂತ ಒಟ್ಟು 151 ದೇವಸ್ಥಾನಗಳ ವಿವಿಧ ನಿರ್ಮಾಣ ಕಾಮಗಾರಿಗೆ ಅನುದಾನ ಒದಗಿಸಿದ್ದಾರೆ. ಅದರಲ್ಲಿ ದೇವಸ್ಥಾನದ ಮುಂದುವರಿದ ಕಾಮಗಾರಿಗಳು ಸೇರ್ಪಡೆಯಾಗಿವೆ. ಹಿರೇರಾಯನಕುಂಪಿ ಮಸೀದಿಗೆ ₹4 ಲಕ್ಷ, ಹುನೂರು ಗ್ರಾಮದ ಮಸೀದಿಗೆ ₹1 ಲಕ್ಷ ಸೇರಿ ಮೂರು ಗ್ರಾಮಗಳಿಗೆ ಮಸೀದಿ ನಿರ್ಮಾಣಕ್ಕೂ ಶಾಸಕರ ನಿಧಿ ಒದಗಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ದೇವದುರ್ಗ ಪಟ್ಟಣದಲ್ಲಿ ಏಕೈಕ ಶಾಲಾ ಕೊಠಡಿ ನಿರ್ಮಾಣಕ್ಕೆ ₹5 ಲಕ್ಷ ಒದಗಿಸಿದ್ದಾರೆ. ವಿವಿಧೆಡೆ ಎಂಟು ಸಮುದಾಯ ಭವನ ಕಟ್ಟಡಗಳಿಗೆ ಒಟ್ಟು ₹22 ಲಕ್ಷ ಅನುದಾನ ಕೊಟ್ಟಿದ್ದರೆ, ದೇವದುರ್ಗದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಒದಗಿಸಿರುವುದು ವಿಶೇಷ.

2017–18ನೇ ಸಾಲಿನ ₹2 ಕೋಟಿ ಶಾಸಕರ ನಿಧಿಯನ್ನು ₹1.18 ಕೋಟಿ ದೇವಸ್ಥಾನಗಳ ಕಾಮಗಾರಿಗೆ, ₹17 ಲಕ್ಷ ಸಮುದಾಯ ಭವನಗಳ ಕಾಮಗಾರಿಗೆ, ₹5 ಲಕ್ಷ ಶಾಲಾ ಕೊಠಡಿ ನಿರ್ಮಾಣಕ್ಕಾಗಿ, ₹5 ಲಕ್ಷ ಮಸೀದಿ ನಿರ್ಮಾಣಕ್ಕಾಗಿ, ₹50 ಲಕ್ಷ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಹಾಗೂ ₹5 ಲಕ್ಷ ಮಠದ ಕಾಮಗಾರಿಗೆ ಶಾಸಕರು ಹಂಚಿಕೆ ಮಾಡಿದ್ದಾರೆ. ಒಟ್ಟು 35 ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ.

2018–19ನೇ ಸಾಲಿನಲ್ಲಿ ಶಾಸಕರ ನಿಧಿ ₹2 ಕೋಟಿಯಲ್ಲಿ, ₹1.98 ಕೋಟಿ ವಿವಿಧ ದೇವಸ್ಥಾನಗಳ ಕಾಮಗಾರಿಗಳಿಗೆ ಹಾಗೂ ₹2 ಲಕ್ಷ ಅನುದಾನವನ್ನು ಸಮುದಾಯ ಭವನಕ್ಕೆ ಹಂಚಿಕೆ ಮಾಡಿದ್ದಾರೆ. ಇದುವರೆಗೂ ಒಟ್ಟು ₹182 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. 2019–20ನೇ ಸಾಲಿನಲ್ಲಿ ₹1.91 ಕೋಟಿ ಅನುದಾನವನ್ನು ದೇವಸ್ಥಾನಗಳ ಕಾಮಗಾರಿಗಳಿಗೆ, ₹4 ಲಕ್ಷ ಮಸೀದಿಗೆ ಹಾಗೂ ₹5 ಲಕ್ಷ ಸಮುದಾಯ ಭವನಕ್ಕೆ ಶಾಸಕರು ಒದಗಿಸಿದ್ದಾರೆ. ಒಟ್ಟು 37 ಕಾಮಗಾರಿಗಳನ್ನು ಮಾಡಲಾಗಿದೆ.

2020–21ನೇ ಸಾಲಿನ ₹2 ಕೋಟಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹1.92 ಕೋಟಿ ಅನುದಾನ ದೇವಸ್ಥಾನಗಳಿಗೆ ಹಾಗೂ ₹8 ಲಕ್ಷ ಸಮುದಾಯ ಭವನಕ್ಕೆ ಹಂಚಿಕೆ ಮಾಡಿದ್ದಾರೆ. ಇದುವರೆಗೂ ₹1.41 ಕೋಟಿ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ.

ಶಾಸಕರ ನಿಧಿಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳ ಉಸ್ತುವಾರಿಯನ್ನು ಪಂಚಾಯತ್‌ರಾಜ್‌ ಇಲಾಖೆ ವಹಿಸಿಕೊಂಡು ಕೆಲಸ ಮಾಡಿಸಿದೆ. ಯುಸಿ ನೀಡುವುದು ಬಹುತೇಕ ಕಾಮಗಾರಿಗಳದ್ದು ಬಾಕಿ ಇದೆ. 2021–22ನೇ ಸಾಲಿಗಾಗಿ ರಾಜ್ಯ ಸರ್ಕಾರವು ಈಗಾಗಲೇ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಶಾಸಕರು ಇನ್ನೂ ಅನುದಾನ ಹಂಚಿಕೆ ಆರಂಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT