ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲರೂ ಬಳಸುವ ಕೃಷಿಯಂತ್ರ ಶೋಧಿಸಿ’

ಕೃಷಿ ತಾಂತ್ರಿಕ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸಮ್ಮೇಳನ
Last Updated 12 ಮಾರ್ಚ್ 2020, 15:25 IST
ಅಕ್ಷರ ಗಾತ್ರ

ರಾಯಚೂರು: ಮಹಿಳಾ ಕೃಷಿ ಕಾರ್ಮಿಕರ ಸಂಖ್ಯೆ ಮೊದಲಿಗಿಂತಲೂ ಹೆಚ್ಚಾಗಿದ್ದು, ಈ ಪ್ರಮಾಣ ಇನ್ನೂ ಬೆಳವಣಿಗೆಯಾಗಲಿದೆ. ಮುಂದಿನ ದಿನಗಳಲ್ಲಿ ಕೃಷಿ ಪರಿಕರಗಳನ್ನು ಎಲ್ಲರೂ ಬಳಸುವ ರೀತಿಯಲ್ಲಿ ಅಭಿವೃದ್ದಿ ಮಾಡಬೇಕು ಎಂದು ಭೋಪಾಲದ ಕೃಷಿ ತಾಂತ್ರಿಕ ಕೇಂದ್ರೀಯ ಸಂಸ್ಥೆಯ ನಿರ್ದೇಶಕ ಡಾ.ಸಿ.ಆರ್.ಮೇಹ್ತಾ ಸಲಹೆ ನೀಡಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ನಿಮಿತ್ತ ಗುರುವಾರ ಏರ್ಪಡಿಸಿದ್ದ ‘ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೃಷಿ ತಾಂತ್ರಿಕ ಸಂಶೋಧನೆಗಳ ಪಾತ್ರ’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಅನೇಕ ಸಂಶೋಧನೆಗಳನ್ನು ರೈತರಿಗೆ ತಲುಪಿಸಿದೆ. ವಿಶ್ವದ ರೈತರ ಅನುಕೂಲಕ್ಕಾಗಿ ಇನ್ನೂ ಅನೇಕ ಸಂಶೋಧನೆಗಳು ಈ ಕಾಲೇಜಿನಲ್ಲಿ ನಡೆಯಲಿ ಎಂದು ಆಶಿಸಿದರು.

ದೇಶದ ಜನರು ಸರಾಸರಿ 1.08 ಹೆಕ್ಟೇರ್‌ ಕೃಷಿ ಹೊಂದಿದ್ದು, ಅದರಲ್ಲಿ ಶೇ 86 ರಷ್ಟು ಭೂಮಿಯು ಸಣ್ಣ ಮತ್ತು ಮಧ್ಯಮ ರೈತರಲ್ಲಿದೆ. ಶೇ 4 ರಷ್ಟು ಭೂಮಿ ದೊಡ್ಡ ರೈತರಲ್ಲಿದೆ. ಕೃಷಿ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. 2011 ರಲ್ಲಿ ಶೇ 55 ರಷ್ಟು ಯುವಕರು ಕೃಷಿಯಲ್ಲಿದ್ದರು. 2020 ರಲ್ಲಿ ಅದು ಶೇ 41 ಕ್ಕೆ ಕಡಿಮೆಯಾಗಿದೆ. ಈ ಪ್ರಮಾಣ ಇನ್ನೂ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಕೃಷಿ ಆದಾಯ ದ್ವಿಗುಣ ಮಾಡುವುದು ಎರಡು ವಿಧಾನದಲ್ಲಿ ಸಾಧ್ಯವಿದೆ. ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಮಾಡುವುದು ಹಾಗೂ ನೀರಾವರಿ ಭೂಮಿಯನ್ನು ಹೆಚ್ಚಳ ಮಾಡುವುದು. ಬೀಜ, ರಾಸಾಯನಿಕ ಗೊಬ್ಬರ ಬಳಕೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕೃಷಿ ವೆಚ್ಚವನ್ನು ಕಡಿಮೆ ಮಾಡುವುದರಿಂದ ಕೃಷಿ ಆದಾಯ ಹೆಚ್ಚಳ ಮಾಡುವುದು. ಸೂಕ್ಷ್ಮ ನೀರಾವರಿ ಪದ್ಧತಿ ಮೂಲಕ ಸರ್ಕಾರವು ಹೆಚ್ಚು ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರುತ್ತಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡುವ ವಿಧಾನದಿಂದಲೂ ಆದಾಯ ಪಡೆಯಬಹುದು. ಕೃಷಿ ತ್ಯಾಜ್ಯವನ್ನು ಬೆಂಕಿ ಹಾಕಲಾಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರೈತರ ಆದಾಯ ದ್ವಿಗುಣ ಮಾಡುವಲ್ಲಿ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ಅಮೆರಿಕದ ಮೆರಿಲೆಂಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಘು ಎಂ. ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಉತ್ತಮವಾಗಿದೆ. ಇದರೊಂದಿಗೆ ಭಾರತವು ಭೂಮಿಯ ತಾಪಮಾನ ಕಡಿಮೆಗೊಳಿಸಲು ಮರಗಳನ್ನು ಬೆಳಸಬೇಕಿದೆ. ಕಾರ್ಬನ್‌ ಡೈ ಆಕ್ಸೈಡ್‌ ಕಡಿಮೆ ಮಾಡಬೇಕಾದ ಸವಾಲುಗಳಿವೆ ಎಂದು ಹೇಳಿದರು.

ಕೃಷಿ ಉತ್ಪನ್ನ ಹೆಚ್ಚಳ ಮಾಡುವುದರಿಂದ ಆದಾಯ ದ್ವಿಗುಣ ಸಂಪೂರ್ಣ ಸಾಧ್ಯವಿಲ್ಲ. ಹವಾಮಾನ ವೈಪರಿತ್ಯವು ಎಲ್ಲವನ್ನು ಬದಲಾಯಿಸುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಇದನ್ನು ಎದುರಿಸುವ ವಿಧಾನವನ್ನು ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ತ್ರಿವಿಕ್ರಮ ಜೋಷಿ ಮಾತನಾಡಿ, ರೈತರಿಗೆ ಕೈಗೆಟುವ ದರದಲ್ಲಿ ಕೃಷಿ ಯಂತ್ರಗಳನ್ನು ಒದಗಿಸುವ ಬಗ್ಗೆ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಮಾತನಾಡಿ, ದೇಶದಲ್ಲಿ 124 ಕೃಷಿ ಹವಾಮಾನ ವಲಯಗಳಿವೆ. ವಲಯದ ಹವಾಮಾನ ಆಧರಿಸಿ ಬೆಳೆಗಳನ್ನು ಬೆಳೆಯಬೇಕು. ಸಮಗ್ರ ಕೃಷಿ ಪದ್ಧತಿ ಮಾಡಬೇಕು. ಪ್ರತಿ ಹೆಕ್ಟೇರ್‌ನಿಂದ ರೈತರು ಪ್ರತಿನಿತ್ಯ ಒಂದು ಸಾವಿರ ಆದಾಯ ಪಡೆಯಬೇಕು. ಪ್ರತಿ ಹೆಕ್ಟೇರ್‌ ನೀರಾವರಿ ಜಮೀನಿನಿಂದ ನಿತ್ಯ ₹2,500 ಆದಾಯ ಪಡೆಯಬೇಕು. ಸುಧಾರಿತ ಮಾರುಕಟ್ಟೆ ಅಗತ್ಯ. ಕೃಷಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾಡುವ ಪ್ರತಿಯೊಂದು ಸಂಶೋಧನೆಗಳನ್ನು ರೈತರಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಮರ್ಪಕವಾಗಿದ್ದು, ವ್ಯವಸ್ಥಿತವಾಗಿ ಸಂಶೋಧನೆಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಸ್‌.ಕೆ.ಮೇಟಿ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ. ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಬಿ.ಎಂ. ಚಿತ್ತಾಪುರ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ವೀರನಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಾ.ಶರಣಗೌಡ ಎಚ್‌., ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT