ಸೋಮವಾರ, ಸೆಪ್ಟೆಂಬರ್ 27, 2021
21 °C
ಕಾಂಗ್ರೆಸ್‌–ಬಿಜೆಪಿ ಬೆಂಬಲಿಗರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹಗ್ಗಜಗ್ಗಾಟ

ಮಸ್ಕಿ: ಚರ್ಚೆಗೀಡು ಮಾಡಿದ ಕಾಮಗಾರಿಗಳ ಭೂಮಿಪೂಜೆ!

ಪ್ರಕಾಶ ಮಸ್ಕಿ Updated:

ಅಕ್ಷರ ಗಾತ್ರ : | |

ಮಸ್ಕಿ: ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದು, ಭೂಮಿಪೂಜೆ ಮಾಡುತ್ತಿರುವ ವಿಷಯವು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರ ಮಧ್ಯೆ ಚರ್ಚಾಸ್ಪದ ವಿಷಯವಾಗಿ ಮಾರ್ಪಟ್ಟಿದೆ.

ಒಂದೇ ಕಾಮಗಾರಿಗೆ ಎರಡನೇ ಬಾರಿ ಹಾಲಿ ಶಾಸಕರು ಶಂಕುಸ್ಥಾಪನೆ ನೆರವೇರಿಸುತ್ತಿರುವುದನ್ನು ಬಿಜೆಪಿ ಕಾರ್ಯಕರ್ತರು ಟೀಕಿಸುತ್ತಿದ್ದಾರೆ. ಕಾರ್ಯಾದೇಶ ಈಗ ಬಂದಿರುವುದರಿಂದ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ನೀಡಿದ್ದ ಅನುದಾನದಲ್ಲಿ ತಾಲ್ಲೂಕಿನ ವ್ಯಾಸನಂದಿಹಾಳ – ಕನ್ನಾಳ ಹಳ್ಳದ ಸೇತುವೆ ಕಾಮಗಾರಿಗೆ ಉಪ ಚುನಾವಣೆಗೂ ಮೊದಲು ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದ್ದರು. ಇದೀಗ ಶಾಸಕ ಆರ್. ಬಸನಗೌಡ ಅವರು ಅದೇ ಕಾಮಗಾರಿಗೆ ಮತ್ತೊಮ್ಮೆ ಚಾಲನೆ ನೀಡುವ ಮೂಲಕ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

₹ 6 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಉಪ ಚುನಾವಣೆ ಘೋಷಣೆಗೂ ಮುಂಚೆಯೆ ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದ್ದರು. ಆದರೆ ಈಗಿನ ಶಾಸಕರು ಅದೇ ಕಾಮಗಾರಿಗೆ ಮತ್ತೊಮ್ಮೆ ಚಾಲನೆ ನೀಡಿದ್ದಲ್ಲದೆ, ತಾವೇ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿದ್ದೇವೆ ಎಂದು ಬಿಟ್ಟಿ ಪ್ರಚಾರ ಪಡೆಯಲು ಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಅವರು, ‘ಕ್ಷೇತ್ರದಲ್ಲಿ ಆರ್. ಬಸನಗೌಡ ಶಾಸಕರಾದ ನಂತರ ಸೇತುವೆ ಕಾಮಗಾರಿಗೆ ಕಾರ್ಯಾದೇಶ ಬಂದಿವೆ. ಈ ಕಾರಣದಿಂದ ಅಧಿಕೃತವಾಗಿ ಭೂಮಿಪೂಜೆ ನಡೆಸಲಾಯಿತೆ ಹೊರತು ಯಾವುದೇ ಪ್ರಚಾರಕ್ಕಾಗಿ ಅಲ್ಲ. ಸಂಸದ ಕರಡಿ ಸಂಗಣ್ಣ ಭೂಮಿಪೂಜೆ ಮಾಡಿದಾಗ ಅಧಿಕೃತವಾಗಿ ಸೇತುವೆ ಕಾಮಗಾರಿಗೆ ವರ್ಕ್ ಆರ್ಡರ್ ಆಗಿರಲಿಲ್ಲ‘ ಎಂದರು.

‘ಈ ಹಿಂದೆ ಚಾಲನೆ ನೀಡಿದ್ದ ಕಾಮಗಾರಿಗೆ ಈಗ ಹಾಲಿ ಶಾಸಕರು ಮತ್ತೊಮ್ಮೆ ಭೂಮಿಪೂಜೆ ಮಾಡುವ ಮೂಲಕ ಕ್ಷೇತ್ರದ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ‘ ಎಂದು ಮಸ್ಕಿ ಬಿಜೆಪಿ ಮಂಡಲದ ಅಧ್ಯಕ್ಷ ಶಿವಪುತ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು