ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಥೋತ್ಸವದಲ್ಲಿ ನೆರೆದ ಭಕ್ತಸಾಗರ

ಶ್ರೀ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಸಂಪನ್ನ
Last Updated 18 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸದ ಕೊನೆಯ ದಿನ ಉತ್ತರಾರಾಧನೆಯಂದು ಮಹಾರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ರಾಯರ ಅನುಗ್ರಹ ಪಡೆಯುವುದಕ್ಕಾಗಿ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ರರು ನೆರೆದಿದ್ದರು. ಆರಾಧನೆ ಆರಂಭವಾದ ದಿನದಿಂದಲೂ ಬೀಡುಬಿಟ್ಟಿದ್ದ ಭಕ್ತರಿಗಿಂತಲೂ ದುಪ್ಪಟ್ಟು ಸಂಖ್ಯೆಯಲ್ಲಿ ಜನರು ರಥೋತ್ಸವ ಕಣ್ತುಂಬಿಕೊಳ್ಳುವುದಕ್ಕಾಗಿ ಬಂದಿದ್ದರು. ಪೂರ್ವಾವತಾರ ಪ್ರಹ್ಲಾದರಾಜರ ರೂಪದಲ್ಲಿ ರಾಯರು ಭಕ್ತರನ್ನು ಆಶೀರ್ವದಿಸುವುದಕ್ಕಾಗಿ ರಥಾರೂಢವಾಗಿ ಪುರದಲ್ಲಿ ಸಂಚರಿಸುತ್ತಾರೆ ಎನ್ನುವ ನಂಬಿಕೆ ಇದೆ.

ಹೀಗಾಗಿ ರಾಯರ ನೇರ ಅನುಗ್ರಹಕ್ಕೆ ಪಾತ್ರರಾಗಲು ಭಕ್ತರು ಜಮಾಯಿಸಿದ್ದರು. ಮಠದ ಪ್ರಾಂಗಣ ಹಾಗೂ ಸುತ್ತಮುತ್ತಲೂ ನಡೆಯುವ ಉತ್ಸವದ ವಿಧಿವಿಧಾನಗಳನ್ನು ಭಕ್ತರು ಹೊರಭಾಗದಿಂದಲೂ ವೀಕ್ಷಿಸುವುದಕ್ಕೆ ಸಾಧ್ಯವಾಗುವಂತೆ ದೊಡ್ಡದೊಡ್ಡ ಎಲ್‌ಸಿಡಿ ಪರಧೆಗಳನ್ನು ಅಳವಡಿಸಲಾಗಿತ್ತು.

ಬೆಳಿಗ್ಗೆ ನಿರ್ಮಾಲ್ಯ, ಮೂಲರಾಮದೇವರ ಸಂಸ್ಥಾನ ಪ್ರತಿಮೆಗಳಿಗೆ ಪೂಜೆ, ಮೂಲ ವೃಂದಾವನ ಪೂಜೆಗಳನ್ನು ನೆರವೇರಿಸಿದ ಬಳಿಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಸಂಸ್ಕೃತ ವಿದ್ಯಾಪೀಠಕ್ಕೆ ತೆಗೆದುಕೊಂಡು ಹೋಗಲಾಯಿತು. ರಾಯರು ವಿದ್ಯಾಪೀಠವನ್ನು ಪರಿಶೀಲಿಸುತ್ತಾರೆ ಎನ್ನುವ ನಂಬಿಕೆ ಇದೆ. ಅಲ್ಲಿಂದ ಮೂಲ ವೃಂದಾವನ ಗರ್ಭಗುಡಿ ಉತ್ಸವ ಮೂರ್ತಿಯನ್ನು ಕರೆತಂದು ವಸಂತೋತ್ಸವ ಆಚರಿಸಲಾಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬಣ್ಣಗಳನ್ನು ಎರಚಿದರು.

ಜಯಘೋಷಗಳೊಂದಿಗೆ ಉತ್ಸವ ಮೂರ್ತಿಯನ್ನು ಮಹಾರಥೋತ್ಸವ ತೆಗೆದುಕೊಂಡು ಬರಲಾಯಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಥದಲ್ಲಿ ಆಸೀನರಾಗಿ ಅನುಗ್ರಹ ಸಂದೇಶ ನೀಡಿದರು.

ಕಾಮಧೇನು ಕಲ್ಪವೃಕ್ಷ ಮಠ: ಪರಮಪವಿತ್ರ ತುಂಗಭದ್ರಾ ತೀರದ ದಿವ್ಯ ಪುಣ್ಯಕ್ಷೇತ್ರ ಮಂತ್ರಾಲಯ. ಕಲಿಯುಗದ ಕಾಮಧೇನು ಕಲ್ಪವೃಕ್ಷ ಎಂದು ಪ್ರಸಿದ್ಧರಾದ, ಭಕ್ತರಿಗೆ ಅತಿ ಸುಲಭವಾಗಿ ಅನುಗ್ರಹಿಸುವಂತಹ ಏಕೈಕ ವಿಶ್ವಗುರುಗಳು ರಾಘವೇಂದ್ರ ಸ್ವಾಮಿಗಳಾಗಿದ್ದಾರೆ. ಎಲ್ಲ ಜನಾಂಗಗಳಿಂದಲೂ ಆರಾಧ್ಯರಾಗಿ, ಸಮಸ್ತ ಜನರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ, ಅನುಗ್ರಹಿಸುತ್ತಿದ್ದಾರೆ ಎಂದು ಹೇಳಿದರು.

ಇವರ ಅನುಗ್ರಹವನ್ನು ಪಡೆಯದೆ ಇರುವವರಿಲ್ಲ. ಇಂತಹ ಗುರು ಸಾರ್ವಭೌಮರ 348ನೇ ಆರಾಧನೆಯು ಸಂಭ್ರಮದಿಂದ ನೆರವೇರಿದೆ. ರಥಾರೂಢರಾಗಿ ಭಕ್ತರ ಮನೋರಥವನ್ನು ಪೂರ್ಣ ಮಾಡಲು ಮಂತ್ರಾಲಯದ ಪುರಬೀದಿಗಳಲ್ಲಿ ಗುರುಸಾರ್ವಭೌಮರು ಪ್ರಸನ್ನಚಿತ್ತರಾಗಿ, ಸಂತೋಷಮನಸ್ಕರಾಗಿ ರಥದಲ್ಲಿ ಆಸೀನರಾಗಿದ್ದಾರೆ ಎಂದರು.

ವರ್ಷವಿಡೀ ಗುರುಗಳು ವೃಂದಾವನದಲ್ಲಿದ್ದು ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ. ಗುರುಗಳಿದ್ದ ಕಡೆಗೆ ಭಕ್ತರೆಲ್ಲರೂ ವರ್ಷವಿಡೀ ಹೊಗುತ್ತೇವೆ. ಆದರೆ, ಇದೊಂದು ದಿನ ಮಾತ್ರ ರಾಯರು ಭಕ್ತರಿದ್ದ ಕಡೆಗೆ ಬರುತ್ತಾರೆ. ರಾಘವೇಂದ್ರ ಸ್ವಾಮಿಗಳಷ್ಟು ಕರಣಾಳುಗಳು ಮತ್ತೊಬ್ಬರು ಸಿಗಲಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

ಕೆಲವು ಗುರುಗಳು ತಂದೆ, ಅಥವಾ ತಾಯಿ, ಅಕ್ಕ, ಅಣ್ಣ ಅಥವಾ ಬಂಧು ಬಳಗ, ಹಿತಚಿಂತಕರಾಗಿರುತ್ತಾರೆ. ಆದರೆ, ಎಲ್ಲವೂ ಆಗಿರುವ ಏಕೈಕ ಗುರು ರಾಘವೇಂದ್ರ ಸ್ವಾಮಿಗಳು. ಅವರ ಕೃಪಾ, ಅನುಗ್ರಹ ಎಷ್ಟು ಎಂದು ಹೇಳಲು ಸಾಧ್ಯವಿಲ್ಲ. ಆರಾಧನಾ ಉತ್ಸವವು ತುಂಬಾ ವಿಶೇಷವಾಗಿದೆ. ಒಂದು ಜನಾಂಗದ, ಒಂದು ಭಾಷೆಯ ಅಥವಾ ಒಂದು ಪ್ರಾಂತದವರು ಮಾಡುವ ಉತ್ಸವ ಇದಲ್ಲ. ಇಡೀ ವಿಶ್ವದ ಉತ್ಸವ ರಾಯರ ಆರಾಧನಾ ಮಹೋತ್ಸವ. ಸನಾತನ ಹಿಂದು ಸಂಸ್ಕೃತಿಯ ಪುನರುತ್ಥಾನದ ಸಲುವಾಗಿ ಅವತರಿಸಿದ ಮಹಾನುಭಾವರು ಎಂದು ತಿಳಿಸಿದರು.

‘ವಿಧರ್ಮೀಯರಿಗೂ ಕೂಡಾ ವಿಶೇಷವಾಗಿ ಅನುಗ್ರಹಿಸುತ್ತಾರೆ. ರಾಯರ ಮಹಿಮೆಯನ್ನು ಹೇಳಲು ಸಾಧ್ಯವಿಲ್ಲ. ಗುರುಸ್ತೋತ್ರದಲ್ಲಿ ಅಪ್ಪಣ್ಣಾಚಾರ್ಯರು ಹೇಳಿದಂತೆ ‘ಅದಮ್ಯ ಮಹಿಮಾ ಲೋಕೆ ರಾಘವೇಂದ್ರೋ ಮಹಾಯಶಾಃ’ ಎಂತಹ ಕವಿಗಳಿಂದ, ವಿಧ್ವಾಂಸರಿಂದ ಮಹಿಮೆಯನ್ನು ಹೇಳಲು ಸಾಧ್ಯವಿಲ್ಲ. ಇಂತಹ ಪ್ರಭುಗಳು ನಮ್ಮ ಸಮಾಜಕ್ಕೆ, ನಮ್ಮ ದೇಶಕ್ಕೆ ದೊರತದ್ದು ಎಲ್ಲರ ಭಾಗ್ಯ’ ಎಂದು ಹೇಳಿದರು.

ಮಂತ್ರಾಲಯದ ಮೂಲ ವೃಂದಾವನದಲ್ಲಿ ನಡೆಯುವಂತೆ ದೇಶದ ಉದ್ದಗಲಕ್ಕೂ ವಿದೇಶಗಳಲ್ಲಿಯೂ ಮನೆ ಮನೆಗಳಲ್ಲಿಯೂ ರಾಯರ ಭಕ್ತರು ಪರಮಪವಿತ್ರ ಉತ್ಸವ ಆಚರಿಸುತ್ತಿದ್ದಾರೆ. ರಾಯರು ಎಲ್ಲರಿಗೂ ಅನುಗ್ರಹಿಸುತ್ತಿದ್ದಾರೆ ಎಂದು ವಿವರಿಸಿದರು.

ಮಠದಿಂದ ನೆರವು: ಸುಖಶಾಂತಿ, ಸಹಭಾಳ್ವೆಯಿಂದ ಬದುಕುತ್ತಿರುವ ದೇಶದಲ್ಲಿ ಈಚೆಗೆ ಅತಿವಷ್ಟಿಯಿಂದ ಜನರು ಬಳಲುವಂತಾಗಿದೆ. ನಿಜಕ್ಕೂ ಇದು ಶೋಚನೀಯ. ಪ್ರವಾಹದಿಂದ ಬಳಲಿದ ಜೀವಗಳಿಗೆ, ಪ್ರಾಣ ಬಿಟ್ಟವರಿಗೆ ಆತ್ಮಶಾಂತಿಯನ್ನು ಭಗವಂತ ನೀಡಲಿ. ಸಂತ್ರಸ್ತರಿಗೆ ಆತ್ಮಸ್ಥೈರ್ಯ ದೊರಕಲಿ ಎಂದು ಪ್ರಾರ್ಥಿಸುತ್ತೇವೆ.

ಸಮಾಜ ಬೇರೆ ಬೇರೆ ರೀತಿಯಲ್ಲಿ ಮಠ ಮಾನ್ಯಗಳ ಬಗ್ಗೆ ಅಂದುಕೊಂಡಿದ್ದಾರೆ. ಆದರೆ, ಮಂತ್ರಾಲಯ ಮಠವು ಭಕ್ತರಿಗೋಸ್ಕರ ಇರುವ ಮಠವಾಗಿದೆ. ಭಕ್ತರಿಂದ ಸಂಗ್ರಹವಾಗುವ ಪ್ರತಿಯೊಂದು ಪೈಸೆ ಕಾಣಿಕೆಯು ಕೂಡಾ ಎಲ್ಲವೂ ಪಾರದರ್ಶಕವಾಗಿದೆ. ಯಾರೂ ಬೇಕಾದರೂ ಮಠದ ಆಸ್ತಿಪಾಸ್ತಿ, ಆಡಳಿತದ ಬಗ್ಗೆ, ಹಣಕಾಸು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಭಕ್ತರು ಮುಕ್ತವಾಗಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಭಕ್ತರಿಂದ ಸಂಗ್ರಹವಾಗುವ ಕಾಣಿಕೆಯನ್ನು ತಿಜೋರಿಯಲ್ಲಿಟ್ಟುಕೊಳ್ಳುವ ಮಠ ಇದಲ್ಲ. ಭಕ್ತರು ನೀಡಿದ್ದನ್ನು ಭಕ್ತರಿಗಾಗಿಯೇ ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡುವ ಏಕೈಕ ಮಠ ಇದು. ಉತ್ತರ ಕರ್ನಾಟಕ ಹಾಗೂ ಇತರೆ ಭಾಗದ ಪ್ರವಾಹದಿಂದ ಬಳಲಿದ ಜನರ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹25 ಲಕ್ಷ ಜಮಾಗೊಳಿಸಲಾಗುವುದು. ಚಾತುರ್ಮಾಸ್ಯದ ಬಳಿಕ ಸಂತ್ರಸ್ತರಿಗೆ ನೇರವಾಗಿ ಧೈರ್ಯ ಹೇಳುವ ಕೆಲಸ ಮಾಡಲಾಗುವುದು ಎಂದು ನುಡಿದರು.

ಮಂತ್ರಾಲಯದ ಅಭಿವೃದ್ಧಿ ಕಾರ್ಯಗಳು, ಮಠದ ಆಸ್ತಿಪಾಸ್ತಿಗಳು ಹಾಗೂ ಉತ್ಸವಗಳ ಆಯೋಜನೆಯೆಲ್ಲವೂ ಸ್ವಾಮಿಗಳದ್ದಲ್ಲ. ಎಲ್ಲವೂ ಶಿಷ್ಯರದ್ದಾಗಿದೆ. ಮಠವು ಪಾರದರ್ಶಕವಾಗಿದ್ದು, ಭಕ್ತರಿಗೆ ಬೇಕಾಗುವ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಈಗಾಗಲೇ ಮಂತ್ರಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಮಾಡಿರುವ ಮೂಲ ಸೌಕರ್ಯ ಶೇ 10 ರಷ್ಟು ಮಾತ್ರ ಆಗಿದೆ. ಇನ್ನೂ ಶೇ 90 ರಷ್ಟು ಕೆಲಸಗಳಾಗಬೇಕಿದೆ. ರಾಯರ ಅನುಗ್ರಹ ಮತ್ತು ಭಕ್ತರ ಸಹಕಾರದಿಂದ ಇನ್ನು ಮುಂದೆಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಅತಿವೃಷ್ಟಿ ಪರಿಹಾರವಾಗಲಿ, ಮಳೆಯ ಅಭಾವ ಇರುವ ಕಡೆಗಳಲ್ಲಿ ಮಳೆಯಾಗಲಿ, ಎಲ್ಲ ಜನರಿಗೆ ಸಕಾಲದಲ್ಲಿ ಸಿಗಬೇಕಾದ ಸುಖ, ಶಾಂತಿ, ಆಯುಷ್ಯ, ಆರೋಗ್ಯವನ್ನು ರಾಘವೇಂದ್ರ ಸ್ವಾಮಿಗಳ ಆಂತರ್ಯಾಮಿಯಾದಂತಹ ಭಗವಂತ ವಿಶೇಷವಾಗಿ ಅನುಗ್ರಹಿಸಲಿ ಎಂದು ಬೇಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT