ಸೋಮವಾರ, ಆಗಸ್ಟ್ 2, 2021
25 °C
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌.ಎಸ್‌.ಪ್ರಸನ್ನಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ

ಕೋವಿಡ್‌ ಜಾಗೃತಿ ಮೂಡಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ ಕಂಟೈನ್‌ಮೆಂಟ್ ವಲಯಗಳಲ್ಲಿ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಪ್ರತಿ ಸದಸ್ಯರಿಗೂ ಕೋವಿಡ್‌ ಮುನ್ನಚ್ಚರಿಕಾ ಕ್ರಮಗಳನ್ನು ತಿಳಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾಯದರ್ಶಿ ಎನ್.ಎಸ್.ಪ್ರಸನ್ನಕುಮಾರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 19 ಕಂಟೈನ್‌ಮೆಂಟ್ ವಲಯಗಳು ರಚನೆಯಾಗಿವೆ. ಹೋಂ ಕ್ವಾರಂಟೈನ್‌ಗೆ ಒಳಗಾದವರ ವಿವರ ನೀಡುವ ಪೋಸ್ಟರ್‌ಗಳನ್ನು ದೊಡ್ಡದಾಗಿ ಅಥವಾ ಎ-3 ಅಳತೆಯಲ್ಲಿ ಮುದ್ರಿಸಿ ಅಂಟಿಸಬೇಕು. ಎಲ್ಲೆಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಅಲ್ಲಲ್ಲಿ ನಾಗರೀಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ಸಮುದಾಯದಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಬೇಕು ಎಂದು ತಿಳಿಸಿದರು.

ಕ್ವಾರಂಟೈನ್ ಕೇಂದ್ರಗಳನ್ನು ಸ್ವಚ್ಛ ಮಾಡಬೇಕು. ಸ್ವಚ್ಛತೆ ಕಾಪಾಡದಿದ್ದರೆ ಸಮಸ್ಯೆ ಉದ್ಭವಿಸಲಿದೆ. ಚೆಕ್ ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೊಳಪಡಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಇದುವರೆಗೂ ಕೋವಿಡ್-19 ದೃಢಪಟ್ಟ 82 ಜನರು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಕೊರೊನಾಗೆ ಸಂಬಂಧಿಸಿದ ಎಲ್ಲಾ ಅ್ಯಪ್‌ಗಳನ್ನು ಪರಿಶೀಲಿಸಬೇಕು. ಸಂಪರ್ಕ ಪತ್ತೆ, ಹೋಂ ಕ್ವಾರಂಟೈನ್, ಹೌಸ್ ಹೋಲ್ಡ್ ಸರ್ವೇ ಸೇರಿದಂತೆ ಎಲ್ಲಾ ಆ್ಯಪ್‌ಗಳನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.

ಸಮರ್ಪಕ ಗೊಬ್ಬರ, ಬೀಜ: ಇದೀಗ ಮುಂಗಾರು ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಪೂರೈಸಬೇಕು ಹಾಗೂ ಗುಣ ಮಟ್ಟದ ಬಿತ್ತನೆ ಬೀಜ ಪೂರೈಕೆಯಾಗುತ್ತಿರುವುದನ್ನು ಖಾತ್ರಿ ಪಡಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಕೊರೊನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೊರೊನಾ ಜೊತೆಗೆ ಮಲೇರಿಯಾ, ಡೆಂಗಿ ಮತ್ತು ಚಿಕನ್‌ಗುನ್ಯಾ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಜನರಿಗೆ ಶುದ್ದ ಕುಡಿಯು ನೀರು ಪೂರೈಸಬೇಕು. ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಬೇಕು ಮತ್ತು ಪೈಪ್‌ಗಳು ಒಡೆದು ಹೋಗಿದ್ದರೆ ಅವುಗಳನ್ನು ದುರಸ್ತಿಗೊಳಿಸಬೇಕು ಎಂದು ತಿಳಿಸಿದರು. 

ಆರ್.ಡಿ.ಸಿ. ಬ್ಯಾಂಕ್ ಅಧಿಕಾರಿ ಗಿರೆಡ್ಡಿ ಮಾತನಾಡಿ, ಜಿಲ್ಲೆಯ 1,0052 ಜನರಿಗೆ ₹47 ಕೋಟಿ ಸಾಲ ವಿತರಿಸಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ರಾಮಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಕೊroನಾ ದೃಢಪಟ್ಟ ಅತಿ ಹೆಚ್ಚು ವಯಸ್ಸಾದ 72 ಮತ್ತು 65 ವರ್ಷದದ ವ್ಯಕ್ತಿಗಳು ಮಾನ್ವಿ ತಾಲ್ಲೂಕಿನವರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ, 6 ವರ್ಷದೊಳಗಿನ 33 ಮಕ್ಕಳಿದ್ದು, ಅವರ ಆರೋಗ್ಯವು ಉತ್ತಮವಾಗಿದೆ. 277 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರ ಮಾತನಾಡಿ, ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿರುವ ಆರ್‌ಟಿ-ಪಿಎಸ್‌ಆರ್ ಪ್ರಾಯೋಗಲಯ ಕೇಂದ್ರದಿಂದ 1,692 ಸ್ಯಾಂಪ್‌ಲ್‌ಗಳ ಫಲಿತಾಂಶ ಬರಬೇಕಿದೆ. ಮಂಗಳವಾರ 565 ಸ್ಯಾಂಪಲ್‌ಗಳ ವರದಿ ಬರಲಿದೆ ಎಂದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ದುರ್ಗೇಶ, ರಾಯಚೂರು ಸಹಾಯಕ ಆಯುಕ್ತ ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು, ಲಿಂಗಸೂಗೂರು ಸಹಾಯಕ ಆಯುಕ್ತ ಡಾ.ರಾಜೇಶ ಡಂಬಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್, ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗಣಪತಿ ಸಾಕರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು