ಶನಿವಾರ, ಜುಲೈ 2, 2022
24 °C

ವೆಂಕಟಾಪೂರ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಕಲ್ಮಲಾ ಹೋಬಳಿಯ ಜಾಗೀರ ವೆಂಕಟಾಪೂರ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರು ’ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ‘ ಕಾರ್ಯಕ್ರಮದಡಿ ಮೇ 27 ರಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್ ಹೇಳಿದರು.

ಅಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆವರೆಗೆ ಗ್ರಾಮವಾಸ್ತವ್ಯ ನಡೆಸಲಿದ್ದು, ಪ್ರಮುಖವಾಗಿ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ಜಿಲ್ಲಾಧಿಕಾರಿಯೊಂದಿಗೆ ವಿವಿಧ ಇಲಾಖೆಗಳ ಜಿಲ್ಲ ಮಟ್ಟದ ಅಧಿಕಾರಿಗಳು ಭಾಗವಹಿಸುವರು. ಇನ್ನುಳಿದ ತಾಲ್ಲೂಕುಗಳಲ್ಲಿ ತಹಶೀಲ್ದಾರರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು. 

ಪಹಣಿಯಲ್ಲಿನ ಲೋಪದೋಷಗಳ ಸರಿಪಡಿಸುವಿಕೆ, ಆಕಾರ ಬಂದ್ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಪೌತಿ ಖಾತೆಯಲ್ಲಿ ನೈಜ ವಾರಸುದಾರರ ಹೆಸರು ಸೇರ್ಪಡೆ, ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ, ಸ್ಮಶಾನ ಜಾಗ ಲಭ್ಯತೆ ಬಗ್ಗೆ ಪರಿಶೀಲಿಸುವುದು. ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನಿನ ಕಾಯ್ದಿರಿಸಲು ಕ್ರಮವಹಿಸುವುದು.

ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸುವುದು, ಆಧಾರ್ ಕಾರ್ಡಿನ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ಅರ್ಹ ಅಂಗವಿಕಲರಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. 

ಹದ್ದುಬಸ್ತು, ಪೋಡಿ, ಪೋಡಿಮುಕ್ತ ಗ್ರಾಮ, ದರಕಾಸ್ತು ಪೋಡಿ ಕಂದಾಯ ಗ್ರಾಮಗಳ ರಚನೆ ಮುಂತಾದ ಕಂದಾಯ ಇಲಾಖೆಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸಲಾಗುವುದು ಎಂದರು.

ಎಲ್ಲೆಲ್ಲಿ ಗ್ರಾಮ ವಾಸ್ತವ್ಯ: ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೋಬಳಿಯ ಬಂಡೆಬಾವಿ ಗ್ರಾಮದಲ್ಲಿ ಲಿಂಗಸೂಗೂರು ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಮಸ್ಕಿ ತಾಲ್ಲೂಕಿನ ಹಾಲಾಪೂರ ಹೋಬಳಿಯ ಸುಂಕನೂರು ಗ್ರಾಮದಲ್ಲಿ ಮಸ್ಕಿ ತಹಶೀಲ್ದಾರ್ ಕವಿತಾ.ಆರ್, ಸಿಂಧನೂರು ತಾಲ್ಲೂಕಿನ ವಲ್ಕಂದಿನ್ನಿ ಹೋಬಳಿಯ ರಾಗಲಪರ್ವಿ ಗ್ರಾಮದಲ್ಲಿ ತಹಶೀಲ್ದಾರ್ ಮಂಜುನಾಥ ಬೋಗಾವತಿ, ಮಾನ್ವಿ ತಾಲೂಕಿನ ಕುರ್ಡಿ ಹೋಬಳಿಯ ಸೀಕಲ್ ಗ್ರಾಮದಲ್ಲಿ ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ, ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಹೇಮನಾಳ ಗ್ರಾಮದಲ್ಲಿ ತಹಶೀಲ್ದಾರ್ ಶ್ರೀನಿವಾಸ ಚಾಪಲ್, ಸಿರವಾರ ತಾಲೂಕಿನ ಮಲ್ಲಟ ಹೋಬಳಿಯ ಕುರುಕುಂದಾ ಗ್ರಾಮದಲ್ಲಿ ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.