ಗುರುವಾರ , ನವೆಂಬರ್ 14, 2019
19 °C
ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಯುವಘಟಕದಿಂದ ಪ್ರತಿಭಟನೆ

ಮಡಿವಾಳ ಸಮಾಜದ ಬಾಲಕಿಯ ಅತ್ಯಾಚಾರ, ಕೊಲೆಗೆ ಖಂಡನೆ

Published:
Updated:
Prajavani

ರಾಯಚೂರು: ಮಡಿವಾಳ ಸಮಾಜದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಯುವಘಟಕ ನೇತೃತ್ವದಲ್ಲಿ ಸಮಾಜದವರು ಸೋಮವಾರ ಪ್ರತಿಭಟನೆ ನಡೆಸಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಗೇರಿ ದಂಪತಿ ಜೀವನ ನಿರ್ವಹಣೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ವಡ್ಡು ಗ್ರಾಮಕ್ಕೆ ವಲಸೆ ಹೋಗಿದ್ದರು. ಆ ದಂಪತಿಯ ಪುತ್ರಿ 1ನೇ ತರಗತಿ ಓದುತ್ತಿದ್ದು, ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದಾಗ, ಕಾಣೆಯಾಗಿರುವ ಬಗ್ಗೆ ತೋರಣಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಮರುದಿನ ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಬಾಲಕಿಯ ಮೃತದೇಹವನ್ನು ಗೋಣಿಚೀಲದಲ್ಲಿ ತಂದು ಹಾಕಲಾಗಿದೆ. ಬಾಲಕಿಯ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದು, ಅತ್ಯಾಚಾರದ ಅನುಮಾನ ಮೂಡುವಂತೆ ಮಾಡಿದೆ ಎಂದರು.

ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆಯಿದೆ. ಈ ನೀಚ ಕೃತ್ಯ ಖಂಡನೀಯವಾಗಿದ್ದು, ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಯುವ ಘಟಕ ಅಧ್ಯಕ್ಷ ಪರಶುರಾಮ, ಸಮಾಜದ ಅಧ್ಯಕ್ಷ ಜಿ.ಸುರೇಶ, ಎನ್.ಶಂಕ್ರಪ್ಪ, ಯು.ಆಂಜನೇಯ, ಪಿ.ಧರ್ಮೇಂದ್ರ, ಟಿ.ಮಲ್ಲೇಶ, ಎಚ್.ರಾಜೇಶ, ಎನ್.ಸುರೇಶ, ಶಿವರಾಜ ಕುಮಾರ, ಬಿ.ಆನಂದ, ಚಂದ್ರಶೇಖರ ಇದ್ದರು.

ಪ್ರತಿಕ್ರಿಯಿಸಿ (+)