ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮೇಲಿನ ಹಲ್ಲೆ: ಕಠಿಣ ಕ್ರಮಕ್ಕೆ ಆಗ್ರಹ

Last Updated 14 ಜೂನ್ 2019, 13:25 IST
ಅಕ್ಷರ ಗಾತ್ರ

ರಾಯಚೂರು: ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಟಿಪ್ಪು ಸುಲ್ತಾನ ಉದ್ಯಾನವನದಿಂದ ಮೆರವಣಿಗೆ ಆರಂಭಿಸಿ ವೀರಶೈವ ಕಲ್ಯಾಣ ಮಂಟಪ, ಈದ್ಗಾ ಮೈದಾನ, ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೋಲ್ಕತ್ತಾದ ಎನ್‌ಆರ್‌ಎನ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಡಾ.ಪರಿಬಾಹ ಮುಖರ್ಜಿ ಅವರ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ. ಚಿಕಿತ್ಸೆಗಾಗಿ ದಾಖಲಾಗಿದ್ದ 85 ವರ್ಷದ ವೃದ್ಧನ ಸಾವಿಗೆ ವೈದ್ಯರೇ ಕಾರಣ ಎಂದು ಸಂಬಂಧಿಗಳು ಹಲ್ಲೆ ನಡೆಸಿದ್ದಾರೆ. ದಾಳಿಯಿಂದಾಗಿ ಗಂಭೀರ ಗಾಯಗೊಂಡ ವೈದ್ಯ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ರೋಗಿಗಳ ಜೀವ ಉಳಿಸಲು ಶ್ರಮಿಸುತ್ತಿರುವ ವೈದ್ಯರಿಗೆ ರಕ್ಷಣೆ ಇಲ್ಲದಿದ್ದರೆ ನಿರ್ಭಯದಿಂದ ಕೆಲಸ ಮಾಡುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ವೈದ್ಯರ ಮೇಲೆ ಎಲ್ಲಿಯಾದರೂ ಒಂದು ಕಡೆ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಯಾವುದೇ ವೈದ್ಯರು ಜೀವ ತೆಗೆಯುವ ಕಠೋರತ ತೋರಿಸುವುದಿಲ್ಲ ಎಂಬುದನ್ನು ಜನರು ಮನಗಾಣಬೇಕು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ವೈದ್ಯರ ಮೇಲೆ ದಾಳಿಗಳನ್ನು ಮಾಡಿದರೆ ವೈದ್ಯ ವೃತ್ತಿಗೆ ಸೇರಿದ ಯುವ ಸಮುದಾಯ ಆತಂಕಕ್ಕೊಳಗಾಗಿ ವೃತ್ತಿಗೆ ವಿದಾಯ ಹೇಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ದೂರಿದರು.

ಈ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೊಳಿಸಿ ಕರ್ತವ್ಯದಲ್ಲಿರುವ ವೈದ್ಯರ ರಕ್ಷಣೆಗೆ ಮುಂದಾಗಬೇಕು. ಈಗ ರಾಜ್ಯದಲ್ಲಿರುವ ಕಾನೂನಿನ ಪ್ರಕಾರ ಇಂಥ ತಪ್ಪಿಗೆ ಮೂರು ವರ್ಷ ಶಿಕ್ಷೆ ಇದೆ. ಅದನ್ನು ತಿದ್ದುಪಡಿ ಮಾಡಿ ಏಳು ವರ್ಷ ಕಠಿಣ ಶಿಕ್ಷೆಗೆ ಹೆಚ್ಚಿಸಬೇಕು. ಇಲ್ಲದಿದ್ದರೆ ವೈದ್ಯರೆಲ್ಲರೂ ಹೋರಾಟ ಮುಂದುವರಿಸುವುದು ನಿವಾರ್ಯವಾಗುತ್ತದೆ ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಹಾಲಿಂಗಪ್ಪ ಬಿ., ಕಾರ್ಯದರ್ಶಿ ಡಾ.ಅನಿರುದ್ಧ ಸಿ. ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯರಾದ ಡಾ.ಸುರೇಶ ಸಗರದ, ವೈದ್ಯರಾದ ಡಾ.ಶ್ರೀಧರ ರೆಡ್ಡಿ, ಡಾ.ನಾಗರಾಜ ಬಾಲ್ಕಿ, ಡಾ.ವಿ.ಎ.ಮಾಲಿಪಾಟೀಲ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT