ರೈತರ ದಾರಿ ತಪ್ಪಿಸಬಾರದು: ಡಾ. ಕೆ.ಎನ್.ಕಟ್ಟಿಮನಿ

7
ಕೃಷಿ ಪರಿಕರಗಳ ಮಾರಾಟಗಾರರಿಗೆ ಡಿಪ್ಲೊಮಾ ಕೋರ್ಸ್‌ನ ಪ್ರಮಾಣ ಪತ್ರ ವಿತರಣೆ

ರೈತರ ದಾರಿ ತಪ್ಪಿಸಬಾರದು: ಡಾ. ಕೆ.ಎನ್.ಕಟ್ಟಿಮನಿ

Published:
Updated:
Deccan Herald

ರಾಯಚೂರು: 'ದೇಶದ ಬೆನ್ನೆಲುಬಾಗಿರುವ ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಕೃಷಿ ಪರಿಕರಗಳ ಮಾರಾಟಗಾರರು ಮಾಡಬಾರದು. ಒಂದುವೇಳೆ ರೈತರ ದಾರಿ ತಪ್ಪಿಸಿದರೆ ನಾವೂ ದಾರಿ ತಪ್ಪಿದಂತೆಯೇ ಸರಿ' ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಎನ್‌.ಕಟ್ಟಿಮನಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ, ವಿಸ್ತರಣಾ ನಿರ್ದೇಶನಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದಿಂದ ಶುಕ್ರವಾರ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ ಕೋರ್ಸ್‌ನ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟದಾಯಕ ಕೆಲಸವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಕ್ರಿಮಿನಾಶಕ ಹಾಗೂ ಗೊಬ್ಬರ ಬಳಕೆ ವಿಷಯದಲ್ಲಿ ಮಾರಾಟಗಾರರು ಸರಿಯಾದ ಮಾಹಿತಿ ನೀಡದೇ ರೈತರ ದಾರಿ ತಪ್ಪಿಸಿದರೆ ಅವರು ಉತ್ಪಾದಿಸುವ ಆಹಾರ ಪದಾರ್ಥಗಳನ್ನು ಸೇವಿಸಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಕೃಷಿ ವಿಜ್ಞಾನದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗಿಂತ ಡಿಪ್ಲೊಮಾ ಕೋರ್ಸಿನ ಪದವಿ ಪಡೆದ ಕೃಷಿ ಪರಿಕರಗಳ ಮಾರಾಟಗಾರರು ಹೆಚ್ಚಿನ ಜ್ಞಾನ ಸಂಪಾದಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಡಿಪ್ಲೋಮಾ ಕೋರ್ಸಿನ ತರಬೇತಿಗಳನ್ನು ಆರಂಭಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ವಿಸ್ತರಣಾ ನಿರ್ದೇಶನಾಲಯದ ನೋಡಲ್ ಅಧಿಕಾರಿ ಮೌಲಾಸಾಬ್ ಪ್ರಾಸ್ತಾವಿಕ ಮಾತನಾಡಿ, ಕೃಷಿ ಪರಿಕರಗಳ ಮಾರಾಟಗಾರರು ರೈತರಿಗೆ ಮೋಸ ಮಾಡಬಾರದು. ಕಡಿಮೆ ಮಾರ್ಜಿನ್ ತೆಗೆದುಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ದೇಶದಲ್ಲಿ 3.5ಲಕ್ಷ ಮಾರಾಟಗಾರರಿದ್ದು, ರಾಜ್ಯದಲ್ಲಿ 2500 ಮಾರಾಟಗಾರರಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 1200 ಮಾರಾಟಗಾರಿದ್ದು, ಇದುವರೆಗೆ 140 ಮಾರಾಟಗಾರರು ಡಿಪ್ಲೊಮಾ ಪದವಿ ಪಡೆದಿದ್ದಾರೆ. ವಿಸ್ತರಣಾ ಕಾರ್ಯ ಬಲಹೀನವಾಗಿ ನಡೆಯುತ್ತಿದ್ದು, ಇನ್ನು ಹೆಚ್ಚಿನ ಮಟ್ಟದಲ್ಲಿ ವಿಸ್ತರಣಾ ಕಾರ್ಯ ನಡೆಯಬೇಕಾಗಿದೆ ಎಂದು ತಿಳಿಸಿದರು.

ಶಿಕ್ಷಣ ನಿರ್ದೇಶಕ ಎಸ್.ಕೆ.ಮೇಟಿ, ಸಂಶೋಧನಾ ನಿರ್ದೇಶಕ ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಬಿ.ಎಂ.ಚಿತ್ತಾಪುರ, ವಿಜ್ಞಾನ ಕೇಂದ್ರದ ವಿಜ್ಞಾನಿ ವೈ.ಎಸ್.ಅಮರೇಶ, ಸಹಾಯಕ ಕೃಷಿ ನಿರ್ದೇಶಕರಾದ ಟಿ.ಸಿ.ಜಯಪ್ರಕಾಶ, ಎಚ್‌.ಎಸ್.ರಕ್ಕಸಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !