ರಾಯಚೂರು: 'ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ರಚನೆಯಾದ ಕಲ್ಯಾಣ ಮಂಡಳಿಯ ಹಣ ಕಾರ್ಮಿಕರಿಗೆ ಖರ್ಚು ಮಾಡಬೇಕು. ಇತರೆ ಕಾರ್ಯಗಳಿಗೆ ಬಳಕೆ ಮಾಡುವುದನ್ನು ರಾಜ್ಯ ಸರ್ಕಾರ ತಡೆಗಟ್ಟಬೇಕು" ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು ಸಂಯೋಜಿತ) ರಾಜ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಟ್ಟಡ ಕಾರ್ಮಿಕರ ಸಂಘದ 7ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಮಿಕರ ಸತತ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರ ಕಾರ್ಮಿಕ ಮಂಡಳಿ ರಚನೆ ಮಾಡಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ಕಾರ್ಮಿಕರ ಮಂಡಳಿಯ ಹಣ ಇತರೆ ಯೋಜನೆಗಳಿಗೆ ಬಳಸುವ ಮೂಲಕ ಹಣ ದುರುಪಯೋಗ ಮಾಡಿತ್ತು. ಕೋವಿಡ್ ವೇಳೆಯಲ್ಲಿ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡುವಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿತ್ತು. ಕಾರ್ಮಿಕ ಮಂಡಳಿಯ ಹಣ ದುರುಪಯೋಗ ಮಾಡಿಕೊಂಡಿತ್ತು’ ಎಂದು ಆರೋಪಿಸಿದರು.
‘ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಮಿಕರು ಬಿಜೆಪಿಯನ್ನು ಸೋಲಿಸಿ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ಪ್ರಸ್ತುತ ರಾಜ್ಯ ಸರ್ಕಾರ ಕಾರ್ಮಿಕ ಕಲ್ಯಾಣಕ್ಕೆ ಅಧಿಕ ಅನುದಾನ ಬಿಡುಗಡೆ ಮಾಡಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ನಕಲಿ ಕಾರ್ಡ್ ತಡೆಗಟ್ಟಬೇಕು. ಕಟ್ಟಡ ಸಾಮಾಗ್ರಿಗಳ ದರ ಏರಿಕೆಯ ವಿರುದ್ಧ ಮುಂಬರುವ ಆಗಸ್ಟ್ ತಿಂಗಳಲ್ಲಿ ರಾಜ್ಯದ ಎಲ್ಲ ಕಾರ್ಮಿಕ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಕಾರ್ಮಿಕರು ಒಗ್ಗಟ್ಟಿನ ಹೋರಾಟ ಮಾಡಬೇಕು’ ಎಂದು ಮನವಿ ಮಾಡಿದರು.
ಸಂಘದ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಮಾತನಾಡಿ, ‘ನಕಲಿ ಫಲಾನುಭವಿಗಳಿಂದಾಗಿ ನಿಜವಾದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ದೊರಕುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ₹ 26 ಸಾವಿರ ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಯೋಜನೆಗೆ ಒಳಪಡಿಸಬೇಕು’ ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ಪದ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಕೆಪಿಆರ್ ಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಜಿ ವೀರೇಶ, ಮುಖಂಡರಾದ ಶಬ್ಬೀರ್ ಜಾಲಹಳ್ಳಿ, ಶರ್ಫುದ್ದೀನ್, ರುದ್ರಪ್ಪ ನಾಯಕ, ಅನ್ವರ್ ಪಾಶಾ, ವೆಂಕಟೇಶ, ಯುಸೂಫ್ ಖಾನ್, ಲಿಂಗಪ್ಪ, ಸುರೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.