ಜಾತಿ, ಧರ್ಮ, ಲಿಂಗ ಹೆಸರಿನಲ್ಲಿ ಮತಯಾಚಿಸಬೇಡಿ: ಶರತ್‌ ಬಿ. ಸೂಚನೆ

ಶುಕ್ರವಾರ, ಏಪ್ರಿಲ್ 19, 2019
27 °C
ಮುಖಂಡರ ಸಭೆ

ಜಾತಿ, ಧರ್ಮ, ಲಿಂಗ ಹೆಸರಿನಲ್ಲಿ ಮತಯಾಚಿಸಬೇಡಿ: ಶರತ್‌ ಬಿ. ಸೂಚನೆ

Published:
Updated:
Prajavani

ರಾಯಚೂರು: ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆಯಲ್ಲಿ ಜಾತಿ, ಧರ್ಮ ಹಾಗೂ ಲಿಂಗದ ಹೆಸರಿನಲ್ಲಿ ನಿಯಮಾನುಸಾರ ಮತಯಾಚನೆ ಮಾಡುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಶರತ್‌ ಬಿ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಖರ್ಚು ವೆಚ್ಚದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತದಾರರನ್ನು ಸೆಳೆಯುವಾಗ ನಿಯಮಗಳನ್ನು ಅನುಸರಿಸದ ಅಭ್ಯರ್ಥಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಕೋಮು ಗಲಭೆಗೆ ಎಡೆ ಮಾಡುವ ಹೇಳಿಕೆಗಳನ್ನು ನೀಡುವವರ ಬಗ್ಗೆ ನಿಗಾ ವಹಿಸಲಾಗುವುದು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಹೇಳಿಕೆಗಳನ್ನು ಕೊಡಬಾರದು ಎಂದು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಹೊಸ ಕಾಮಗಾರಿಗಳನ್ನು ಆರಂಭಿಸುವುದಕ್ಕೆ ಅವಕಾಶವಿಲ್ಲ. ಆದರೆ, ಈ ಮೊದಲೇ ಆರಂಭಿಸಿರುವ ಕಾಮಗಾರಿಗಳನ್ನು ಮುಂದುವರಿಸುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಹೊಸ ಕಾಮಗಾರಿ ಕೈಗೊಂಡರೆ ಮಾತ್ರ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದರು.

ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ 32 ಚೆಕ್‌ಪೋಸ್ಟ್‌ಗಳಲ್ಲಿ ಖಾಸಗಿ ಮತ್ತು ಸರ್ಕಾರಿ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಬಿಡಲಾಗುತ್ತಿದೆ. ಸರ್ಕಾರಿ ಕಚೇರಿಗಳು ಅಥವಾ ಕಟ್ಟಡಗಳ ಮೇಲೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರ ಭಾವಚಿತ್ರಗಳು ಅಥವಾ ಸ್ಟೀಕರ್‌ಗಳನ್ನು ಅಂಟಿಸಬಾರದು. ಭಿತ್ತಿಪತ್ರ ಹಚ್ಚುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಹೇಳಿದರು.

ವಹಿಸಿರುವ ಚುನಾವಣೆ ಕಾರ್ತವ್ಯ ನಿಭಾಯಿಸಲು ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ಆಯೋಗದಿಂದ ಬರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಬಹಿರಂಗ ಸಭೆ, ಸಮಾರಂಭಗಳನ್ನು ಆಯೋಜಿಸುವ ಪಕ್ಷಗಳಿಗೆ 10 ವಾಹನಗಳನ್ನು ಮಾತ್ರ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿದೆ. ಏ‍ಪ್ರಿಲ್‌ 23 ರಂದು ಮತದಾನ ನಡೆಯುತ್ತದೆ. ಮತದಾರರನ್ನು ಕರೆದುಕೊಂಡು ಬರುವುದಕ್ಕೆ ಅಭ್ಯರ್ಥಿಗಳು ಖಾಸಗಿ ವಾಹನ ಬಳಸಿಕೊಳ್ಳಲು ನಿರ್ಬಂಧವಿದೆ. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಳಕೆಯಾಗುವ ಸಾಮಗ್ರಿಗಳ ವಿವರ ಸಲ್ಲಿಸಿ, ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಚುನಾವಣೆ ವೆಚ್ಚ ವೀಕ್ಷಕರಾದ ಶೈಲಜಾ.,ಬಿ.ಎ. ಚಕ್ರವರ್ತಿ,  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌, ಮುಖಂಡರಾದ ಮಹಾಂತೇಶಗೌಡ ಪಾಟೀಲ, ಎನ್.ಎಸ್‌. ವಿರೇಶ, ವೆಂಕನಗೌಡ, ರಾಘವೇಂದ್ರ ವಕೀಲ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !