ಅಂಬೇಡ್ಕರ್‌ರಿಂದ ಕ್ರಾಂತಿಕಾರಿ ಹೋರಾಟ: ಪ್ರೊ.ಎನ್.ಚಿನ್ನಸ್ವಾಮಿ

ಭಾನುವಾರ, ಏಪ್ರಿಲ್ 21, 2019
26 °C
ಅಂಬೇಡ್ಕರ್ ಜಯಂತಿ

ಅಂಬೇಡ್ಕರ್‌ರಿಂದ ಕ್ರಾಂತಿಕಾರಿ ಹೋರಾಟ: ಪ್ರೊ.ಎನ್.ಚಿನ್ನಸ್ವಾಮಿ

Published:
Updated:
Prajavani

ರಾಯಚೂರು: 12ನೇ ಶತಮಾನದ ಬಸವಣ್ಣನವರಂತೆ 20ನೇ ಶತಮಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಾತಿ ವ್ಯವಸ್ಥೆಯ ವಿರುದ್ಧ ಬಂಡೆಯಂತೆ ನಿಂತು ಕ್ರಾಂತಿಕಾರಿ ಹೋರಾಟ ಮಾಡಿದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಎನ್.ಚಿನ್ನಸ್ವಾಮಿ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ 128ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ದೇಶದಲ್ಲಿ ಎಲ್ಲ ವ್ಯವಸ್ಥೆಗಳು ಬದಲಾದರೂ ಜಾತಿ ವ್ಯವಸ್ಥೆ ಬದಲಾಗಿಲ್ಲ. ಜಾತಿ ವ್ಯವಸ್ಥೆ ಪೆಡಂಭೂತವಾಗಿ ಮಾರ್ಪಟ್ಟಿದ್ದು, ಅಂಬೇಡ್ಕರ್ ಕನಸು ಸಾಕಾರಗೊಳಿಸಲು ದಲಿತ ಸಂಘಟನೆಗಳು ಸೇರಿದಂತೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.

ಅಂಬೇಡ್ಕರ್ ಬರೆದ ಲಿಖಿತ ಸಂವಿಧಾನದಲ್ಲಿ ಜಾತಿ ತಾರತಮ್ಯವಿಲ್ಲ. ಆದರೆ, ಅಲಿಖಿತ ಧಾರ್ಮಿಕ ಸಂವಿಧಾನ ದೇಶವನ್ನು ಆಳುತ್ತಿದ್ದು, ಅಂಬೇಡ್ಕರ್‌ ವಿಚಾರಗಳನ್ನು ಜಾತಿಗೆ ಸೀಮಿತಗೊಳಿಸಿ ಕಾಣುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಕೊಟ್ಟಿರುವ ಶಿಕ್ಷಣ ವ್ಯವಸ್ಥೆ ಚಾರಿತ್ರಿಕವಾದುದು. ಎಲ್ಲರೂ ಸಮಾನವಾಗಿ ಬಾಳುವ ಅವಕಾಶವನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಪ್ರಗತಿಪರವಾದ ಸಾಮಾಜಿಕ ಚಿಂತನೆಗಳು ಗಟ್ಟಿಗೊಳ್ಳಲು ಅಂಬೇಡ್ಕರ್ ತತ್ವ ಸಿದ್ಧಾಂತ ಅಗತ್ಯವಾಗಿದೆ ಎಂದರು.

ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಬೇಕು ಎಂಬುದು ಅಂಬೇಡ್ಕರ್ ಪ್ರಮುಖ ಧ್ಯೇಯವಾಗಿತ್ತು. ಆದ್ದರಿಂದ ಅವರನ್ನು ದಲಿತರ ಸೂರ್ಯ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ವಿಚಾರಗಳನ್ನು ಜಾರಿಗೊಳಿಸಲು ದಲಿತ ಸಂಘಟನೆಗಳೆಲ್ಲ ಒಗ್ಗೂಡಿ ಹೋರಾಡಬೇಕು ಎಂದು ಸಲಹೆ ನೀಡಿದರು.

ಬೀದರ್ ಜಿಲ್ಲೆಯ ಯಾಕತ್‌ಪುರ ಬುದ್ಧವಿಹಾರದ ದಮ್ಮದೀಪ ಬಂತೇಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಪೌರಾಯುಕ್ತ ರಮೇಶ ನಾಯಕ, ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ಇದ್ದರು.

ಪುತ್ಥಳಿಗೆ ಗಣ್ಯರ ನಮನ:

ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಜಿಲ್ಲಾಧಿಕಾರಿ ಬಿ.ಶರತ್ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಹಾಗೂ ಸಂಘಟನೆಗಳ ಪ್ರಮುಖರು ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿದರು.

ನಂತರ ರಂಗಮಂದಿರದವರೆಗೆ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !