ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ ಡಾ.ಮಣಿದೀಪ ಸಾವು; ಗ್ರಾಮಕ್ಕೆ ಪಾರ್ಥಿವ ಶರೀರ

ಶನಿವಾರ, ಏಪ್ರಿಲ್ 20, 2019
28 °C

ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ ಡಾ.ಮಣಿದೀಪ ಸಾವು; ಗ್ರಾಮಕ್ಕೆ ಪಾರ್ಥಿವ ಶರೀರ

Published:
Updated:
Prajavani

ಸಿಂಧನೂರು (ರಾಯಚೂರು): ಅಮೆರಿಕದ ನ್ಯೂಜೇರ್ಸಿಯಲ್ಲಿ ಈಚೆಗೆ ಮೃತಪಟ್ಟ ಜಿಲ್ಲೆಯ ಸಿಂಧನೂರು ತಾಲ್ಲೂಕು ಗಾಂಧಿನಗರದ ಡಾ. ನಂದಿಗಮ್‌ ಮಣಿದೀಪ ಶವ ಸೋಮವಾರ ಬೆಳಗಿನ ಜಾವ ಗ್ರಾಮಕ್ಕೆ ತಲುಪಿತು. ಪುತ್ರನ ಅಕಾಲಿಕ ಮರಣದಿಂದ ನೊಂದಿರುವ ಪಾಲಕರು ಮತ್ತು ಸಂಬಂಧಿಗಳು ಕಣ್ಣೀರು ಸುರಿಸಿದರು. ಧಾರ್ಮಿಕ ವಿಧಿವಿಧಾನಗಳ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

‘ಜೂನ್‌ನಲ್ಲಿ ನಡೆಯುವ ಘಟಿಕೋತ್ಸವ ಸಮಾರಂಭಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ. ಆ ಸಮಯ ಬರುವ ಮೊದಲೇ ನಮ್ಮಿಂದ ದೂರವಾದ’ ಎಂದು ತಂದೆ ಶ್ರೀನಿವಾಸ ಅವರು ದುಃಖಿಸಿದರು.

‘ನನ್ನ ಮಗ ಜೀವನದಲ್ಲಿ ಎಂದೂ ಬೇಸರ ಆಗುವಂತೆ ನಡೆದುಕೊಂಡಿಲ್ಲ. ಮೊದಲಿನಿಂದಲೂ ಕ್ಲಾಸ್‌ನಲ್ಲಿ ಫಸ್ಟ್‌. ಓದಿನಲ್ಲಿ ಮುಂದೆ ಇರುವುದನ್ನು ನೋಡಿ ನಾವೆಲ್ಲರೂ ಸಂಭ್ರಮ ಪಡುತ್ತಾ ಬಂದಿದ್ದೇವೆ. ನಮ್ಮೆಲ್ಲರ ಮೇಲೂ ಬಹಳ ಪ್ರೀತಿ ಇಟ್ಟುಕೊಂಡಿದ್ದ. ಫೋನ್‌ ಮಾಡಿದಾಗೊಮ್ಮ ತಾಯಿ ಹಾಗೂ ತಮ್ಮನ ಬಗ್ಗೆಯೂ ವಿಚಾರಿಸಿಕೊಳ್ಳುತ್ತಿದ್ದ. ಈಗ ನಾನು ಯಾರಿಗೆ ಫೋನ್‌ ಮಾಡಿಲಿ, ಯಾರ ಕ್ಷೇಮ ವಿಚಾರಿಸಲಿ’ ಎಂದು ಗದ್ಗದಿತರಾದರು.

ತಾಯಿ ಪದ್ಮಾ ಅವರು ಪುತ್ರನ ಶವ ನೋಡಿ ಮೂರ್ಛೆ ಹೋದರು. ಕೂಡಲೇ ಅವರನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಉಪಚರಿಸಲಾಯಿತು.

ಮಣಿದೀಪ್‌ ಜೊತೆಯಲ್ಲಿ ಎಂಬಿಬಿಎಸ್‌ ಓದಿದ್ದ ವೈದ್ಯರು ವಿವಿಧ ಕಡೆಗಳಿಂದ ಬಂದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಸುತ್ತಮುತ್ತಲಿನ ಕ್ಯಾಂಪ್‌ಗಳಿಂದಲೂ ಜನರು ನೆರೆದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಗೌಡ ವೀರೂಪಾಪುರ, ಮುಖಂಡ ಹಂಪನಗೌಡ ಬಾದರ್ಲಿ ಸೇರಿದಂತೆ ಹಲವು ಗಣ್ಯರು ಬಂದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಉತ್ತರ ಅಮೆರಿಕದ ತೆಲುಗು ಒಕ್ಕೂಟವು (ಟಿಎಎನ್‌ಎ) ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ, ಶವವನ್ನು ಬೇಗನೆ ಕಳುಹಿಸುವುದಕ್ಕೆ ವ್ಯವಸ್ಥೆ ಮಾಡಿತ್ತು. ಭಾನುವಾರ ರಾತ್ರಿ 8.45 ಕ್ಕೆ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ತಲುಪಿದ ಶವವನ್ನು, ಸಿಂಧನೂರಿನಿಂದ ತೆರಳಿದ್ದ ಸಂಬಂಧಿಗಳು ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದರು.

ಸಾವಿಗೆ ಕಾರಣ?

ನ್ಯೂಜೇರ್ಸಿ ರಾಜ್ಯದ ಎಡಿಸನ್‌ ನಗರದಲ್ಲಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ರಾಮಮನೋಹರ್‌ ರಾವ್‌ ಅವರ ಮನೆಯಲ್ಲಿ ಡಾ. ಮಣಿದೀಪ ವಾಸವಾಗಿದ್ದರು. ಸೇಂಟ್‌ ಪೀಟರ್ಸ್‌ ಯುನಿವರ್ಸಿ‌ಟಿಯಲ್ಲಿ ವೈದ್ಯಕೀಯ ಸ್ನಾತಕೋತ್ತರದ ಕೊನೆಯ ವರ್ಷದ್ದಲ್ಲಿದ್ದರು. ವೈದ್ಯರಾಗಿಯೂ ಕಾರ್ಯ ಆರಂಭಿಸಿದ್ದರು.

‘ರಾಮ್‌  ಮನೋಹರ್‌ ರಾವ್‌ ಅವರ ಮನೆಯಿಂದ ಎಂದಿನಂತೆ ಬುಧವಾರ ಆಸ್ಪತ್ರೆ ಕಡೆಗೆ ಡಾ. ಮಣಿದೀಪ ಹೋಗಿದ್ದರು. ಆದರೆ, ಆಸ್ಪತ್ರೆ ಆವರಣಕ್ಕೆ ಹೋಗುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಶ್ವಾಸಕೋಶದಲ್ಲಿ ರಕ್ತ ಹೆಪ್ಪು ಗಟ್ಟಿರುವುದು ಸಾವಿಗೆ ಕಾರಣ ಎಂಬುದನ್ನು ಅಮೆರಿಕದ ವೈದ್ಯರು ತಿಳಿಸಿದ್ದಾರೆ’ ಎಂದು ಡಾ. ಮಣಿದೀಪ ಸಂಬಂಧಿ ಸಿಂಧನೂರಿನ ಲಕ್ಷ್ಮೀನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆತನು ಅಮೆರಿಕದಲ್ಲಿ ಇರುವುದಕ್ಕೆ ನನ್ನ ಸಂಬಂಧಿ ರಾಮ್‌ ಮನೋಹರ್‌ ಅವರಿಗೆ ಹೇಳಿಕೊಂಡು ವ್ಯವಸ್ಥೆ ಮಾಡಿದ್ದೆ’ ಎಂದರು.

ಪುತ್ಥಳಿ ನಿರ್ಮಾಣ

ಡಾ. ಮಣಿದೀಪ ಅವರು ವಿವಿಧೆಡೆ ನಡೆದ ವೈದ್ಯಕೀಯ ಸಮ್ಮೇಳನಗಳಲ್ಲಿ 29 ಪ್ರಬಂಧಗಳನ್ನು ಮಂಡಿಸಿ ಗಮನ ಸೆಳೆದಿದ್ದರು. ಸೇಂಟ್‌ ಪೀಟರ್ಸ್‌ ಯುನಿವರಿಸಿಟಿಯಲ್ಲಿ ಈ ಸಾಧನೆಯನ್ನು ಗುರುತಿಸಿ ‘ಆದರ್ಶ ವೈದ್ಯ’ ಎನ್ನುವ ಪ್ರಶಸ್ತಿಯನ್ನು ನೀಡಲಾಗಿತ್ತು. ಪ್ರತಿಭಾನ್ವಿತರಾಗಿದ್ದ ಡಾ. ಮಣಿದೀಪ ಸ್ಮರಣಾರ್ಥವಾಗಿ ಯುನಿವರ್ಸಿಟಿಯ ಸ್ನೇಹಿತರೆಲ್ಲ ಸೇರಿ ಪುತ್ಥಳಿಯೊಂದನ್ನು ನಿರ್ಮಿಸಲು ಯೋಜಿಸಿದ್ದಾರೆ. ಇದಕ್ಕಾಗಿ ₹25 ಸಾವಿರ ಡಾಲರ್‌ ಹಣದ ಅಗತ್ಯ ಎಂಬುದನ್ನು ಮನಗಂಡು ಸ್ನೇಹಿತರೆಲ್ಲರೂ ಹಣ ಸಂಗ್ರಹಿಸಿಕೊಂಡಿದ್ದಾರೆ ಎಂದು ಅಮೆರಿಕದಲ್ಲಿರುವ ರಾಮ್‌ಮನೋಹರ್‌ ಅವರು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !