ಲಿಂಗಸುಗೂರು: ‘ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರ ನಿರ್ವಹಣೆಯಲ್ಲಿ ಉದಾಸೀನ ಮಾಡಿದರೆ ಶಿಸ್ತು ಕ್ರಮ ಅನಿವಾರ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಉಪವಿಭಾಗ ವ್ಯಾಪ್ತಿಯ ಮಸ್ಕಿ, ಸಿಂಧನೂರು ಹಾಗೂ ಲಿಂಗಸುಗೂರು ತಾಲ್ಲೂಕುಗಳ ಬರ ನಿರ್ವಹಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಪ್ರತಿ ತಾಲ್ಲೂಕಿನಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಕೆಲ ತಾಲ್ಲೂಕುಗಳಲ್ಲಿ ಈವರೆಗೂ ಸಭೆ ನಡೆದಿಲ್ಲ. ಕೂಡಲೇ ಸಭೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಸೂಕ್ತ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಅನುದಾನದಲ್ಲಿ ಕೊಳವೆಬಾವಿ ಕೊರೆಯಿಸಲು ಅವಕಾಶಗಳಿಲ್ಲ. ವಿವಿಧ ಇಲಾಖೆಗಳ ಅನುದಾನ ಅಥವಾ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಅಗತ್ಯತೆ ಆಧರಿಸಿ ಕೊಳವೆಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಬೇಕು. ಜೆಜೆಎಂ ಯೋಜನೆಯಡಿ ಕೈಗೆತ್ತಿಕೊಂಡಿರುವ ಎಲ್ಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಪೂರೈಸಬೇಕು. ಕೆಲಸ ವಿಳಂಬ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇಲ್ಲವಾದರೆ ನಿಮ್ಮನ್ನು ಅಮಾನತುಗೊಳಿಸಲಾಗುವುದು’ ಎಂದರು.
ಶಾಸಕ ಮಾನಪ್ಪ ವಜ್ಜಲ ಮಾತನಾಡಿ, ‘ಕ್ಷೇತ್ರದಲ್ಲಿ ಜೆಜೆಎಂ ಕಾಮಗಾರಿ ಎಲ್ಲಿಯೂ ಮುಗಿದಿಲ್ಲ. ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆಯಡಿ ಐದು ತಿಂಗಳು ಮುಂಚೆಯೇ ನಿಗದಿತ ಗುರಿಗಿಂತ ಹೆಚ್ಚಿನ ಗುರಿ ಸಾಧಿಸಿದ್ದಾರೆ. ದಾಖಲೆಗಳಲ್ಲಿ ಗುರಿ ಸಾಧಿಸಿದ್ದು, ಕೋಟಿ ಕೋಟಿ ಹಣ ದುರ್ಬಳಕೆ ಆಗುತ್ತಿದೆ. ದಾಖಲೆಗಿಂತ ವಾಸ್ತವ ಸತ್ಯದ ಬಗ್ಗೆ ಮುಂದಿನ ದಿನಮಾನಗಳಲ್ಲಿ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಮೂರು ತಾಲ್ಲೂಕುಗಳಲ್ಲಿ ನಿರೀಕ್ಷಿತ ಮಳೆ ಬಾರದೆ ಅಪಾರ ಬೆಳೆನಷ್ಟ ಆಗಿದೆ. ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಲಿಂಗಸುಗೂರಲ್ಲಿ ಎರಡು ಕೆರೆಗಳಲ್ಲಿ ಒಂದು ಕೆರೆ ಭರ್ತಿ ಆಗಿದೆ ಎಂದು ಹೇಳುತ್ತಿರುವಾಗ ಶಾಸಕರು ಮಧ್ಯ ಪ್ರವೇಶಿಸಿ ಕ್ಷೇತ್ರದಲ್ಲಿ 17 ಕೆರೆಗಳಿವೆ. ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ಒಟ್ಟಾಗಿ ಶ್ರಮಿಸಿ ಕೆರೆ ಭರ್ತಿಗೆ ಮುಂದಾದಲ್ಲಿ ನೀರಿನ ಬವಣೆ ಬರುವುದಿಲ್ಲ ಎಂದು ಗಮನ ಸೆಳೆದರು.
ಮಸ್ಕಿ ಕ್ಷೇತ್ರದ 23 ಕೆರೆಗಳ ಪೈಕಿ 22 ಕೆರೆಗಳು ಭರ್ತಿ ಆಗಿವೆ. ಇನ್ನೊಂದು ಕೆರೆ ಭಾಗಶಃ ಭರ್ತಿ ಆಗಿದ್ದು, ತುಂಬಿಸುವ ಕಾರ್ಯ ನಡೆದಿದೆ. ಸಿಂಧನೂರು ಕ್ಷೇತ್ರದಲ್ಲಿ 151 ಕೆರೆಗಳಿದ್ದು ಈಗಾಗಲೇ ಎಲ್ಲ ಕೆರೆಗಳನ್ನು ಭರ್ತಿ ಮಾಡಲಾಗಿದೆ. ಫೆಬ್ರುವರಿ ಅಂತ್ಯದ ಒಳಗೆ ಪುನಃ ಕೆರೆ ಭರ್ತಿ ಮಾಡದೆ ಹೋದಲ್ಲಿ ಅಂದಾಜು 70 ಕೆರೆ ಅವಲಂಬಿತ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಅನಿವಾರ್ಯವಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ, ತಹಶೀಲ್ದಾರ್ ಶಾಲಂಸಾಬ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಾರ್ಷಿಕ ನಿಗದಿತ ಗುರಿ ಐದು ತಿಂಗಳ ಮುಂಚೆಯೇ ಸಾಧಿಸಿದ್ದು ಆಶ್ಚರ್ಯ ಮೂಡಿಸಿದೆ. ಉಳಿದ ಐದು ತಿಂಗಳ ಅವಧಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವುದು ಹೇಗೆ?. ಸರ್ಕಾರ ಹೆಚ್ಚುವರಿ 50 ದಿನಗಳ ಕೆಲಸ ವಿಸ್ತರಣೆ ಮಾಡಿಲ್ಲ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಶಾಸಕ ಮಾನಪ್ಪ ವಜ್ಜಲ ಉದ್ಯೋಗ ಖಾತ್ರಿಯಲ್ಲಿ ಹಣ ದುರ್ಬಳಕೆ ಆಗುತ್ತಿದೆ. ಉಳಿದ ಇಲಾಖೆ ಅಧಿಕಾರಿಗಳೂ ನಿರೀಕ್ಷಿತ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಪರಿಸರಕ್ಕೆ ಹಾನಿ ಉಂಟು ಮಾಡುವ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ತಾಲ್ಲೂಕಿನಲ್ಲಿ ಪರವಾನಗಿ ಹೊಂದಿರದ ಅಂಗಡಿಗಳವರು ಬಹಿರಂಗವಾಗಿ ಕಾಲೇಜು ಮೈದಾನದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದಾರೆ ಎಂದು ಗಮನ ಸೆಳೆಯುತ್ತಿದ್ದಂತೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮಧ್ಯಪ್ರವೇಶಿಸಿ ಪರವಾನಗಿ ಪಡೆಯದೇ ಮಾರಾಟ ಮಾಡುವ ಅಂಗಡಿಗಳನ್ನು ಬಂದ್ ಮಾಡಿಸಿ ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.