ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಗರು’ ಪುಟ್ಟಿಯ ಚಟಪಟ ಮಾತು!

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪ್ರೇಮಪತ್ರ ಸ್ಪರ್ಧೆಗೆ ನಿರ್ಣಾಯಕರಾಗಿ ‘ಪ್ರಜಾವಾಣಿ’ ಕಚೇರಿಗೆ ಬಂದಿದ್ದ ಮಾನ್ವಿತಾ ಹರೀಶ್‌ ಅವರ ಕಾಲೆಳೆಯುವ ಪ್ರಯತ್ನವನ್ನೂ ‘ಕಾಮನಬಿಲ್ಲು’ ತಂಡ ಮಾಡಿತು. ಆದರೆ ಹೇಳಿಕೇಳಿ ಆರ್‌.ಜೆ. ಆಗಿ ಕೆಲಸ ಮಾಡಿ ಅನುಭವ ಇರುವ, ನಟನೆಯನ್ನೇ ವೃತ್ತಿಯಾಗಿಸಿಕೊಂಡ ಮಾನ್ವಿತಾಗೆ ನಮ್ಮ ಪ್ರಶ್ನೆಗಳ ಬಾಣವನ್ನು ಎದುರಿಸುವುದು ತುಂಬ ಕಷ್ಟವೇನೂ ಆಗಲಿಲ್ಲ. ಪ್ರಶ್ನೆಯಷ್ಟೇ ಹರಿತ, ತಮಾಷೆಯ ಉತ್ತರ ಅವರಿಂದಲೂ ಸಿಡಿದುಬಂತು. ಚಿತ್ರರಂಗದಲ್ಲಿ ಅವರ ಆಪ್ತವಲಯದಲ್ಲಿ ‘ಟಗರು’ ಪುಟ್ಟಿ ಎಂದೇ ಕರೆಸಿಕೊಳ್ಳುವ ಅವರ ಜತೆಗಿನ ಪಟಾಪಟ್‌ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ಈ ಸ್ಪರ್ಧೆಗೆ ಬಂದ ಎಲ್ಲ ಪ್ರೇಮಪತ್ರಗಳೂ ನಿಮಗೇ ಬಂದಿವೆ ಅಂದುಕೊಳ್ಳಿ, ಆಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?
ಫುಲ್‌ ಖುಷ್‌. ಪ್ರತಿದಿನ ಒಂದೊಂದು ಪತ್ರ ಓದಿ ಮಜಾ ತಗೋತೀನಿ. ನನಗೆ ಪತ್ರ ಓದುವುದು ಅಂದ್ರೆ ತುಂಬ ಇಷ್ಟ. ಕಾಲೇಜು ದಿನಗಳಲ್ಲಿ ನನಗೆ ಯಾರಾದ್ರೂ  ಪ್ರಪೋಸ್‌ ಮಾಡಿದ್ರೆ ನಾನು ’ಒಂದು ಲವ್‌ ಲೆಟರ್‌ ಬರಿ. ಅದ್ರಲ್ಲಿನ ನಿನ್ನ ಶಬ್ದ ಸಂಪತ್ತು ನೋಡಿ ಪ್ರೀತಿ ಮಾಡ್ಬೇಕಾ ಬೇಡ್ವಾ ಯೋಚಿಸ್ತೀನಿ’ ಅಂತಿದ್ದೆ!

* ಪ್ರೇಮ ಅಂದಾಕ್ಷಣ ನಿಮ್ಮ ಮನಸಲ್ಲಿ ಮೂಡುವ ಮುಖ ಯಾರದು?
ಚಿತ್ರರಂಗದ ಯಾವ ನಾಯಕನಟನ ಮುಖವೂ ನೆನಪಿಗೆ ಬರುವುದಿಲ್ಲ! ಒಂದು ಒಳ್ಳೆಯ ಪಾರಿವಾಳ ನೆನಪಾಗುತ್ತದೆ.

* ಯಾಕೆ ಹಾಗೆ?
ಪಾರಿವಾಳಕ್ಕೆ ಇಂಗ್ಲಿಷಿನಲ್ಲಿ ಏನಂತಾರೆ ಹೇಳಿ... ಡವ್‌..!! (ಹ್ಹ ಹ್ಹಾ...)

* ಮೊದಲ ಪ್ರೇಮನಿವೇದನೆ ಎದುರಿಸಿದ್ದು ಯಾವಾಗ? ಯಾರಿಂದ?
ಎಂಟನೇ ತರಗತಿಯಲ್ಲಿದ್ದಾಗ. ಒಬ್ಬ ಡಾಕ್ಟರ್‌ ಮಗ ನನ್ನ ಕ್ಲಾಸಿನಲ್ಲಿಯೇ ಓದುತ್ತಿದ್ದ. ಅವನು ಒಂದು ಪೇಂಟಿಂಗ್‌ ಡಬ್ಬದಲ್ಲಿ ಪ್ರೇಮಪತ್ರ ಇಟ್ಟು ಕೊಟ್ಟುಬಿಟ್ಟಿದ್ದ. ರಕ್ತವೋ ಏನೋ ಗೊತ್ತಿಲ್ಲ. ಪತ್ರ ಪೂರ್ತಿ ಕೆಂಪು ಕೆಂಪಾಗಿತ್ತು. ನನಗೆ ಭಯ. ಇಡೀ ತರಗತಿಯಲ್ಲಿ ಅದರದ್ದೇ ಮಾತು. ಎಲ್ಲರೂ ಹೋಗಿ ಪ್ರಿನ್ಸಿಪಾಲ್‌ಗೆ ದೂರು ಕೊಟ್ಟುಬಿಟ್ಟರು. ಅವರು ನಮ್ಮಿಬ್ಬರನ್ನೂ ಕರೆಸಿ ಕೇಳಿದರು. ನನಗೆ ಏನೂ ಗೊತ್ತಿಲ್ಲ ಎಂದು ಅಳುಮುಖ ಮಾಡಿದೆ.

ಆಮೇಲೆ ಪತ್ರ ತೆರೆದು ಓದಿದ್ರೆ ವಿಶೇಷ ಏನೂ ಇರಲಿಲ್ಲ. ‘ದಿನಾ ಹೋಂವರ್ಕ್‌ ಮಾಡೋಕೆ ನನಗೆ ಹೆಲ್ಪ್‌ ಮಾಡ್ತೀಯಾ? ನಾನು ನಿಮ್ಮನೆಗೇ ಬಂದು ಹೋಂ ವರ್ಕ್‌ ಮಾಡ್ತೇನೆ. ನನ್ನ ಲವ್‌ ಮಾಡ್ತೀಯಾ?’ ಅಂತೆಲ್ಲ ಏನೇನೋ ಬರೆದಿದ್ದ. ಈಗ ಅದನ್ನು ನೆನಪಿಸಿಕೊಂಡರೆ ಬಾಲಿಶ ಅನಿಸತ್ತೆ. ಆದರೆ ಅಷ್ಟೇ ಕ್ಯೂಟ್‌ ನೆನಪು ಅದು.

* ನಿಜ ಹೇಳಿ,  ಇತ್ತೀಚೆಗೆ ಪ್ರಪೋಸ್‌ ಮಾಡಿದವರು ಯಾರು?
ಫೇಸ್‌ಬುಕ್‌ನಲ್ಲಿ ಬಹಳಷ್ಟು ಜನ ಪ್ರಪೋಸ್‌ ಮಾಡ್ತಾ ಇರ್ತಾರೆ. ಅವರು ಯಾರು ಅಂತಲೇ ಗೊತ್ತಿರುವುದಿಲ್ಲ ನನಗೆ. ‘ಕೆಂಡಸಂಪಿಗೆ’ ಸಿನಿಮಾ ಪರಿಣಾಮ ಹೇಗಾಗಿಬಿಟ್ಟಿದೆ ಅಂದರೆ ಎಲ್ಲರೂ ಚಿನ್ನಿ ಚಿನ್ನಿ ಅಂತ ಕರೆಯೋಕೆ ಶುರುಮಾಡುತ್ತಾರೆ. ಕಾಲೇಜು ಕಾರ್ಯಕ್ರಮಗಳಿಗೆ ಹೋದಾಗೆಲ್ಲ ಪ್ರಪೋಸ್‌ ಮಾಡ್ತಾರೆ. ನಾನೂ ಅವರಿಗೆಲ್ಲ ಅಷ್ಟೇ ಹಗುರವಾಗಿ ‘ಥ್ಯಾಂಕ್ಯೂ’ ಎಂದು ಹೇಳಿ ಬರ್ತೇನಷ್ಟೆ.

* ನಿಮಗೆ ಪ್ರೇಮಪತ್ರ ಬರೆದವರನ್ನು ನೀವೇ ಸಮಾಧಾನ ಮಾಡಿ ಕಳಿಸಿದ್ದಿದ್ಯಾ?
ನನಗೆ ಪ್ರೇಮಪತ್ರ ಬರೆದವರನ್ನು, ಪ್ರಪೋಸ್‌ ಮಾಡಿದವರನ್ನು ನಾನ್ಯಾವತ್ತೂ ಬೈದು ಕಳಿಸಿಲ್ಲ. ಯಾಕೆ ಬೈಬೇಕು? ಅವರ ಭಾವನೆಯನ್ನು ಹೇಳಿಕೊಳ್ಳುತ್ತಿರುತ್ತಾರೆ. ನಮಗೆ ಅಂಥ ಭಾವನೆ ಇಲ್ಲ ಅಂದರೆ ನೇರವಾಗಿ ಹೇಳಿಬಿಟ್ಟರಾಯ್ತು. ಅದಕ್ಕೆ ಬೈಯೋದೆಲ್ಲ ಯಾಕೆ ಬೇಕು?

* ನಿಮಗೆ ಯಾರ ಮೇಲೂ ಕ್ರಶ್‌ ಆಗಿಲ್ವಾ?
ಆಗಿದೆ. ತುಂಬ ಜನರ ಮೇಲೆ ಆಗಿದೆ. ಯಾವುದಾದರೂ ಸುಂದರ ಕಾಲೇಜ್‌ ಹುಡುಗನನ್ನು ನೋಡಿದಾಗ ನಾನು ಮತ್ತೆ ಕಾಲೇಜ್‌ಗೆ ಹೋಗಬೇಕು ಅನಿಸುತ್ತದೆ. ಯಾವ್ದಾದ್ರೂ ಚೈನೀಸ್‌ ರೆಸ್ಟೊರೆಂಟ್‌ಗೆ ಹೋದಾಗ ಅಲ್ಲಿ ಸರ್ವ್‌ ಮಾಡುವ ಮುದ್ದು ಮುಖದ ಹುಡುಗರನ್ನು ನೋಡಿ ಕ್ರಶ್‌ ಆಗಿದ್ದಿದೆ.

* ಪ್ರೇಮದಲ್ಲಿ ಬೀಳುವ ಹುಡುಗ ಹುಡುಗಿಯರಿಗೆ ಏನು ಕಿವಿಮಾತು ಹೇಳ್ತೀರಿ?
ಮೊದಲು ನಿಮ್ಮ ಬದುಕನ್ನು– ಭವಿಷ್ಯವನ್ನು, ಕೆಲಸವನ್ನು ಪ್ರೀತಿಸಿ.

* ಬ್ರೇಕ್‌ಅಪ್‌ ಆದವರಿಗೆ?
ಯಾವ್ದಾದ್ರೂ ಒಳ್ಳೆಯ ಎಣ್ಣೆಸಾಂಗ್‌ ಕೇಳಿ... ನಮ್ಮ ‘ಟಗರು’ ಸಿನಿಮಾದ ‘ಮೆಂಟಲ್‌ ಹೋ ಜಾವಾ’ ಹಾಡು ಕೇಳಿ ಸ್ಟೆಪ್‌ ಹಾಕಿ...

* ನೀವು ತುಂಬ ಹೆದರುವುದು ಯಾರಿಗೆ? ಯಾವ ವಿಷಯಕ್ಕೆ?
ನನಗೆ ನನ್ನ ಕಂಡರೇನೇ ಭಯ. ಯಾಕೆಂದರೆ ನನ್ನಲ್ಲಿ ಒಂದು ಶಕ್ತಿ ಮತ್ತು ಒಂದು ದೌರ್ಬಲ್ಯ ಇದೆ. ಅವೆರಡೂ ನನಗೆ ಚೆನ್ನಾಗಿ ಗೊತ್ತು. ಯಾವಾಗ ಅವು ನನ್ನ ನಿಯಂತ್ರಣ ಮೀರಿಬಿಡುತ್ತವೇನೋ ಎಂದು ಭಯವಾಗುತ್ತದೆ. ನನಗೆ ತುಂಬ ಡಿಪ್ಲೋಮೆಟಿಕ್‌ ಆಗಿ ಇರಲು ಬರುವುದಿಲ್ಲ. ಅದೇ ಭಯ.

* ನೀವು ತುಂಬ ಪ್ರೀತಿಸುವ ವ್ಯಕ್ತಿ ಯಾರು? ವಿಷಯ ಯಾವುದು?
ಅಮ್ಮ. ಯಾಕೆಂದು ಕೇಳಿದರೆ ಕಾರಣ ಗೊತ್ತಿಲ್ಲ. ಹಾಗೆಯೇ ನಾನು ಮೌನವನ್ನು ತುಂಬ ಆಸ್ವಾದಿಸುತ್ತೇನೆ. ಮೌನದಲ್ಲಿರುವ ಶಕ್ತಿ ಅದ್ಭುತವಾದದ್ದು.

ನಾಯಿಗೆ ಹೆಸರಿಟ್ಟ ಕಥೆ!
ನಾನೊಂದು ನಾಯಿ ತಂದೆ. ಅದಕ್ಕೆ ಕಣ್ಮಣಿ ಅಂತ ಹೆಸರಿಡೋಣ ಎಂದುಕೊಂಡಿದ್ದೆ. ಅವತ್ತೊಂದು ದಿನ ಆಫೀಸಿಗೆ ನಾಯಿಯನ್ನು ತೆಗೆದುಕೊಂಡು ಹೋಗಿದ್ದೆ. ಅವತ್ತೇ ಜಯಂತ ಕಾಯ್ಕಿಣಿ ಅವರೂ ಆಫೀಸಿಗೆ ಬಂದಿದ್ರು. ನಾವಿಬ್ಬರು ಕೊಂಕಣಿಯಲ್ಲಿಯೇ ಮಾತನಾಡಿಕೊಳ್ಳುವುದು. ಅವರು ಕೊಂಕಣಿಯಲ್ಲಿಯೇ ‘ಏನು ನಾಯಿ ತಗೊಂಡು ಬಂದಿದೀಯಾ?’ ಅಂತ ಕೇಳಿದ್ರು. ನಾನು ‘ನಾಯಿಯಲ್ಲ ಸರ್‌, ನನ್ನ ಮಗು ಅದು’ ಎಂದೆ.

ಅವರೂಂದ್ಸಲ ಯಾರದೋ ಮನೆಗೆ ಹೋಗಿದ್ದರಂತೆ. ಅಲ್ಲಿ ನಾಯಿಯನ್ನು ನೋಡಿ ‘ನಾಯಿ ಬಂತು ನೋಡಿ’ ಎಂದು ಹೇಳಿದ್ದಾರೆ. ಅದಕ್ಕೆ ಆ ಮನೆಯ ಯಜಮಾನರು ಸಿಟ್ಟಾಗಿ ‘ನಾಯಿ ಅಂತೆಲ್ಲ ಹೇಳ್ಬೇಡಿ. ಹೆಸರು ಹಿಡಿದು ಕರೀರಿ. ನಿಮ್ಮನ್ನು ಮನುಷ್ಯ ಅಂತ ಕರೆದ್ರೆ ಬೇಜಾರಾಗಲ್ವಾ?’ ಅಂತ ಕೇಳಿದರಂತೆ. ಈ ಸಂಗತಿಯನ್ನು ಹಂಚಿಕೊಳ್ಳುತ್ತಲೇ ‘ನಾಯಿಗೆ ಏನು ಹೆಸರಿಟ್ಟಿದ್ದೀಯಮ್ಮಾ?’ ಎಂದು ಕೇಳಿದರು.

ನಾನು ‘ಕಣ್ಮಣಿ ಅಂತ ಇಡಬೇಕು ಅಂತಿದೀನಿ ಸರ್‌’ ಎಂದೆ.

ಅವರು ಗಾಬರಿಯಾಗಿ ‘ಬೇಡ ಬೇಡ.. ಆಮೇಲೆ ಊರವರೆಲ್ಲ ಕಾಯ್ಕಿಣಿ ಕಾಯ್ಕಿಣಿ ಅಂತ ಕರೆಯೋಕೆ ಶುರು ಮಾಡಿದರೆ ಕಷ್ಟ’ ಎಂದು ಹೇಳಿದ್ರು. ನಾನು ನಕ್ಕು ‘ಸರಿ’ ಅಂತ ಒಪ್ಪಿಕೊಂಡೆ.

ನನಗೆ ಭಾರತೀಯ ಹೆಸರನ್ನೇ ಇಡಬೇಕು ಅಂತ ಆಸೆ. ನನ್ನ ಕಸಿನ್‌ಗೆ ’ಡೂಡಲ್‌’ ಅಂತ ಇಡಬೇಕು ಅಂತ ಆಸೆ. ಅದಕ್ಕೆ ಅವೆರಡನ್ನೂ ಸೇರಿಸಿ ‘ಡೂಡಲ್‌ ರಾಮ್‌’ ಅಂತ ಕರೀತೀವಿ ಅವನನ್ನು.

****
ಪ್ರೇಮಪತ್ರ ಸ್ಪರ್ಧೆ- ವಿಜೇತರು

ಪ್ರಥಮ ಬಹುಮಾನ
*ನಾ ಓದದ ಮೊದಲ ಪ್ರೇಮ ಪತ್ರ…
-ರೇಣುಕಾ ನಿಡಗುಂದಿ ನೊಯಿಡಾ

ದ್ವಿತೀಯ ಬಹುಮಾನ
*ಪ್ರೀತಿಯ ಕನ್ನಡ ಟೀಚರ್‌ಗೆ,
-ಅಭಿರಾಮ್ ಎಸ್. ಶಿವಮೊಗ್ಗ

ತೃತೀಯ ಬಹುಮಾನ
*ಈ ನೆಲವ ಆರೈದು ಬೆಳೆದಿಹೆನೆಂದಡೆ...
-ರಮೇಶ್‌ ಕುಮಾರ್ ಪಿ. ಭದ್ರಾವತಿ

ಮೆಚ್ಚುಗೆ ಪಡೆದ ಪತ್ರಗಳು

*ನೀ ಅಂದ್ರ ನಂಗ ಭಾಳ ಭಾಳ ಇಷ್ಟಾಲೇ...
-ಮಾಲಾ ಅಕ್ಕಿಶೆಟ್ಟಿ ಬೆಳಗಾವಿ

*ಗುಂಡುಗಲ್ಲದ ಹುಡುಗಿಯೇ...
-ಹೃದಯ ರವಿ ರಾಮನಗರ

*‘ಕಲ್ಪನಾ ಛಾಯೆ’ಯಲಿ...
-ಕಿರಣ ಕ ಗಣಾಚಾರಿ ಬೆಳಗಾವಿ

*ಹೃದಯಂಗಮ ಓಲೆ
-ಬಿ. ಭಾರ್ಗವರಾಮ್ ಬೆಂಗಳೂರು

*ಬೊಗಸೆಯಲ್ಲಿ ತೇಲಿಬಂದ ಮೀನು...
-ಸತೀಶ್ ಜಿ.ಕೆ.ತೀರ್ಥಹಳ್ಳಿ ಉಡುಪಿ

ಬಹುಮಾನಿತ ಉಳಿದ ಪತ್ರಗಳು ಮುಂದಿನ ಸಂಚಿಕೆಗಳಲ್ಲಿ  ಪ್ರಕಟವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT