ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು ತಾಲ್ಲೂಕು: ನಿರ್ವಹಣೆ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ಉಲ್ಬಣ

ಬೇಸಿಗೆಯಲ್ಲಿ ನೀರಿನ ಬವಣೆ ಹೆಚ್ಚಳವಾಗುವ ಆತಂಕದಲ್ಲಿ ಜನರು
Last Updated 11 ಫೆಬ್ರುವರಿ 2019, 10:55 IST
ಅಕ್ಷರ ಗಾತ್ರ

ಲಿಂಗಸುಗೂರು:ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ನೂರಾರು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರೂ ನಿರ್ವಹಣೆ ಸಮಸ್ಯೆಯಿಂದ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುತ್ತ ಸಾಗಿದೆ.

ಮಸ್ಕಿ, ಯರಡೋಣ ಅನುಷ್ಠಾನಗೊಂಡಿವೆ. ಹುನಕುಂಟಿ, ಕಾಟಗಲ್‌ ಬಹುಗ್ರಾಮ ನೀರಿನ ಯೋಜನೆಗಳು ಭಾಗಶಃ ಅನುಷ್ಠಾನಗೊಂಡಿದ್ದು ಯಲಗಟ್ಟಾ ಟೆಂಡರ್‌ ಹಂತದಲ್ಲಿದೆ. ಯರಡೋಣ ಬಹುಗ್ರಾಮ ಯೋಜನೆ ಮೂಲ ನಕ್ಷೆಯಂತೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಯೋಜನೆಯಡಿ ಯಲಗಲದಿನ್ನಿ, ಚಿಕ್ಕಹೆಸರೂರು ಗ್ರಾಮಗಳು ವಂಚಿತಗೊಂಡಿದೆ.

ಮೇಲೆತ್ತರದ ಟ್ಯಾಂಕ್‌ ನಿರ್ಮಿಸಿ ನೀರು ಪೂರೈಸುವ ಇಎಲ್‌ಎಸ್‌ಆರ್‌ ಯೋಜನೆಯಡಿ ಕೋಟ್ಯಂತರ ಹಣ ವ್ಯಯ ಮಾಡಿದ್ದರು ಕೂಡ ಟ್ಯಾಂಕ್‌ ಸೋರಿಕೆ ಅಥವಾ ಅಂತರ್ಜಲಮಟ್ಟ ಕುಸಿತ, ನೀರಿನ ಲಭ್ಯತೆ ಕೊರತೆ ನೆಪ ಮುಂದಿಟ್ಟುಕೊಂಡು ಅಮರಾವತಿ, ಹೊನ್ನಳ್ಳಿ, ಜಾಲಿಬೆಂಚಿ, ಮರಗಂಟನಾಳ ಸೇರಿದಂತೆ 80ಕ್ಕೂ ಹೆಚ್ಚು ಕಡೆ ಟ್ಯಾಂಕ್‌ಗಳು ಅನಾಥವಾಗಿ ನಿಂತಿರುವುದು ಆಡಳಿತ ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ.

ಕಿರು ನೀರು ಸರಬರಾಜು ಯೋಜನೆಗಳು ವಾರ್ಡ್‌ಗೊಂದರಂತೆ ಅನುಷ್ಠಾನಗೊಳಿಸಲಾಗಿದೆ. 300ಕ್ಕೂ ಹೆಚ್ಚು ಕೊಳವೆಬಾವಿಗೆ ಅಳವಡಿಸಡಿದ ಕೈಪಂಪ್‌ಗಳು ನಿರ್ವಹಣೆ ಕೊರತೆಯಿಂದ ಮುಳ್ಳುಕಂಟೆಗಳಲ್ಲಿ ಮರೆಯಾಗಿವೆ. ಇಷ್ಟೊಂದು ಯೋಜನೆಗಳು, ಅನುಷ್ಠಾನಗೊಳ್ಳುವ ಜೊತೆಗೆ 106ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಅಳವಡಿಸಿದ್ದು ಶೇ 45ರಷ್ಟು ಘಟಕಗಳು ಸ್ಥಗಿತಗೊಂಡಿರುವುದು ಕಾಣಸಿಗುತ್ತವೆ.

ಸತತ ಬರಗಾಲದ ನೆಪದಲ್ಲಿ ಪ್ರತಿ ವರ್ಷ ನೈಸರ್ಗಿಕ ವಿಕೋಪದಡಿ ಲಕ್ಷಾಂತರ ಹಣ ಕುಡಿವ ನೀರಿನ ಲಭ್ಯತೆಗೆ ಬಳಸುತ್ತ ಬಂದಿದ್ದರು ಕೂಡ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿತ ಹಾಗೂ ಇತರೆ ಕಾರಣಗಳಿಂದ 35 ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ₹ 8–10ಸಾವಿರ ಬಾಡಿಗೆ ಹಣ ನೀಡಿ ನೀರು ಪೂರೈಸಲಾಗುತ್ತಿದೆ. ಪ್ರಸಕ್ತ ವರ್ಷ ಬೇಸಿಗೆಯಲ್ಲಿ 41 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸುವ ಪಟ್ಟಿ ಸಿದ್ದಗೊಂಡಿದೆ.

ಬೇಸಿಗೆ ದಿನಗಳಲ್ಲಿ ಕೋಠಾ, ಮೇದಿನಾಪುರ, ಗುರುಗುಂಟಾ, ರಾಜಾ ನರಸಿಂಹನಾಯಕ ನಗರ, ಮೆದಕಿನಾಳ, ನೀರಲೂಟಿ, ಜಹಗೀರನಂದಿಹಾಳ, ಪಲಗಲದಿನ್ನಿ, ಬಂಡಿಸುಂಕಾಪುರ, ಹಿರೆನಗನೂರು, ನಿಲೋಗಲ್‌, ಕಡ್ಡೋಣ ಯಲಗಟ್ಟಾ, ಚಿಕ್ಕಹೆಸರೂರು, ಕಡದರಹಾಳ, ಕುಂಟೇರದೊಡ್ಡಿ, ಕುಣಿಕೆಲ್ಲೂರು, ತಿಮ್ಮಾಪುರತಾಂಡಾ, ವಾಲ್ಮೀಕಿ ನಗರ, ಜಕ್ಕೇರಮಡುತಾಂಡಾ, ಮೂಡಲದಿನ್ನಿತಾಂಡಾ.ಸೋಂಪುರತಾಂಡಾ, ಗೊಲ್ಲರಹಟ್ಟಿ, ತರದೊಡ್ಡಿತಾಂಡಾ, ಪಾಪಣ್ಣತಾಂಡಾ, ಕಿರಣ ತಾಂಡಾ, ನಾಗಲಾಪುರ, ವ್ಯಾಕರನಾಳ, ಪಿಕಳಿಹಾಳ, ಛತ್ತರ, ರೇಷ್ಮೆತಾಂಡಾ, ಬಗಡಿತಾಂಡಾ, ಜಾಂತಾಪುರ, ಮರಳಿ, ರಾಮತ್ನಾಳ, ಮಾವಿನಭಾವಿ, ಗುಂಡಸಾಗರ, ಅಡವಿಭಾವಿ, ಗೊರೆಬಾಳ, ಕೆಸರಟ್ಟಿತಾಂಡಾಗಳನ್ನು ಸಮಸ್ಯಾತ್ಮಕ ಗ್ರಾಮ, ತಾಂಡಾಗಳೆಂದು ತಾಲ್ಲೂಕು ಪಂಚಾಯಿತಿ ಗುರುತಿಸಿರುವುದನ್ನು ದೃಢಪಡಿಸಿದೆ.

‘ಈ ಪೈಕಿ ಕೋಮಲಾಪುರ, ಆದಾಪುರ, ಬಸಾಪುರ, ಜಕ್ಕೇರಮಡುತಾಂಡಾ, ಸೋಂಪುರತಾಂಡಾ, ಸೋಂಪುರ ತಾಂಡಾಗಳಿಗೆ ಮೊದಲ ಹಂತದಲ್ಲಿ ನೈಸರ್ಗಿಕ ವಿಕೋಪ ನಿಧಿಯಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಟಾಸ್ಕ್‌ ಪೋರ್ಸ್‌ ಸಮಿತಿಗೆ ಸಲ್ಲಿಸಲಾಗುತ್ತಿದೆ. ಕ್ಷೇತ್ರವಾರು ₹ 40ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಅಗತ್ಯತೆ ಆಧರಿಸಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಎಇಇ ಶ್ರೀಮಂತ ಮಿಣಜಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT