ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡ ಸುರಕ್ಷತೆ ವರದಿ ನೀಡಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಸೂಚನೆ
Last Updated 19 ಜೂನ್ 2018, 14:05 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಸರ್ಕಾರಿ ಶಾಲೆಗಳ ಕೊಠಡಿ ಗುಣಮಟ್ಟ ಮತ್ತು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕುರಿತು 15 ದಿನದಲ್ಲಿ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟನ ಸೂಚನೆ ನೀಡಿದರು.

ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಸಾಲಿನಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಸೈಕಲ್, ಗುಣಮಟ್ಟದ ಬಿಸಿಯೂಟ, ಪಠ್ಯ ಪುಸ್ತಕವನ್ನು ಸಕಾಲದಲ್ಲಿ ಪೂರೈಸಬೇಕು. ಅಲ್ಲದೆ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಿಸುವುದರ ಕಡೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆದರೆ ಅದಕ್ಕೆ ಅಧಿಕಾರಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ 1, 2, 3ನೇ ಹಂತದ ಶುದ್ಧ ಕುಡಿಯುವ ನೀರಿನ ಘಟಕಗಳ ವಿವರವನ್ನು ಪಡೆದ ಅಧ್ಯಕ್ಷರು, 89 ಶುದ್ಧ ನೀರಿನ ಘಟಕ ಆರಂಭಿಸಲು ಆದೇಶಿಸಿದ್ದು, ಶೀಘ್ರ ಯೋಜನೆ ರೂಪಿಸಿ ಜನರಿಗೆ ತಲುಪಿಸಬೇಕು, ಈಗ ಆರಂಭವಾಗಿರುವ ಘಟಕಗಳಿಗೆ ನೀರು ಸೇರಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ನೀರು ಸಂಗ್ರಹಕ್ಕೆ ತೊಟ್ಟಿ ನಿರ್ಮಿಸಲು ಸಹಾಯಧನ, ದ್ರಾಕ್ಷಿ, ದಾಳಿಂಬೆ, ಬಾಳೆ ಬೆಳೆಯಲು ಪ್ರೋತ್ಸಾಹ ಯೋಜನೆ ಅಡಿ ರೈತರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಅಲ್ಲದೆ ರೈತರಿಗೆ ತರಬೇತಿಯನ್ನು ಹಮ್ಮಿಕೊಂಡಿದ್ದು, ಸಮರ್ಪಕ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಅಧ್ಯಕ್ಷರು ಯೋಜನೆ ಕುರಿತು ರೈತರಿಗೆ ತಲುಪಿಸುವಲ್ಲಿ ವಿಳಂಬ ಧೋರಣೆ ಅನುಸರಿಸಬಾರದು ಎಂದು ಸೂಚನೆ ನೀಡಿದರು.

ಕೆಲವು ಇಲಾಖೆಗಳ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ. ತಮ್ಮ ಸಹಾಯಕರ ಮೂಲಕ ವರದಿಯನ್ನು ಕಳುಹಿಸಿ ಕೊಟ್ಟಿದ್ದರಿಂದ ಅಧ್ಯಕ್ಷರು ಸಿಟ್ಟಾದರು. 'ಈ ಕುರಿತು ಹಲವು ಬಾರಿ ಹೇಳಿದರೂ ಹಳೆಯ ಚಾಳಿ ಮುಂದುವರಿಸುವುದು ಸರಿಯಲ್ಲ. ಮುಂದಿನ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಬರಬೇಕು' ಎಂದು ಸೂಚನೆ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣನ್, ಉಪಾಧ್ಯಕ್ಷೆ ಶಂಕ್ರಮ್ಮ ಉಪಲಾಫುರ, ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT