ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣ ಸಂಪಾದನೆ ವೈದ್ಯರ ಗುರಿಯಲ್ಲ’

2014ನೇ ಸಾಲಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ
Last Updated 23 ಫೆಬ್ರುವರಿ 2020, 10:11 IST
ಅಕ್ಷರ ಗಾತ್ರ

ರಾಯಚೂರು:‘ಹಣ ಸಂಪಾದನೆ ಮಾಡುವುದು ವೈದ್ಯರ ಗುರಿ ಇರಬಾರದು. ಇದೊಂದು ಗೌರವದ ವೃತ್ತಿಯಾಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು’ ಎಂದು ಸೇನಾ ಸಿಬ್ಬಂದಿ ನಿವೃತ್ತ ಉಪಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ರಮೇಶ ಹಲಗಲಿ ಹೇಳಿದರು.

ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌)ನಲ್ಲಿ ಶನಿವಾರ ಏರ್ಪಡಿಸಿದ್ದ 8ನೇ ಘಟಿಕೋತ್ಸವ ಪದವಿಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಬೆಲೆಕಟ್ಟಲಾಗದ ವೃತ್ತಿ ಇದು. ಮನುಷ್ಯರು ತನ್ನ ಜೀವಿತಾವಧಿ ಕೊನೆಯ ಗಳಿಗೆಗಳನ್ನು ವೈದ್ಯರೊಂದಿಗೆ ಕಳೆಯುತ್ತಾರೆ. ಮನುಕುಲದ ಆರೋಗ್ಯ ಕಾಪಾಡುವ ಹೊಣೆಗಾರಿಕೆಯನ್ನು ವೈದ್ಯರು ನಿಭಾಯಿಸಬೇಕಾಗುತ್ತದೆ. ದೇಶದ ಅಭಿವೃದ್ಧಿಯ ಕೀಲಿ ಕೈ ಶಿಕ್ಷಣವಾಗಿದೆ. ವಿದ್ಯಾರ್ಥಿಯಾಗಿ ಬಂದವರು ಐದು ವರ್ಷಗಳಲ್ಲಿ ವೈದ್ಯರಾಗಿ ಹೊರಹೋಗುತ್ತಿದ್ದೀರಿ. ಜವಾಬ್ದಾರಿಯ ಅರಿವು ಸದಾ ಇಟ್ಟುಕೊಂಡಿರಬೇಕು’ ಎಂದು ಸಲಹೆ ನೀಡಿದರು.

‘ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು,ವೈದ್ಯಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಹೊಸದನ್ನು ಕಲಿಯುವ ಕಿಚ್ಚು ಇಟ್ಟುಕೊಂಡಿರಬೇಕು. ಅಧ್ಯಯನ ಮಾಡಿಕೊಂಡಿದ್ದರೆ ಸವಾಲು ಸಲಿಸಾಗಿ ಎದುರಿಸುವುದಕ್ಕೆ ಸಾಧ್ಯವಾಗುತ್ತದೆ. ಬದಲಾವಣೆ ಸಾಧ್ಯವಿಲ್ಲ ಎನ್ನುವ ಮನಸ್ಥಿತಿ ಬಂದರೆ, ಅಲ್ಲಿಗೆ ಕಥೆ ಮುಗಿದು ಹೋಗುತ್ತದೆ’ಮನವರಿಕೆ ಮಾಡಿದರು.

ಪ್ರತಿಯೊಬ್ಬ ವೈದ್ಯರು ಮಾನವಕುಲ ಸಂರಕ್ಷಿಸಲು ತನ್ನದೇ ಆದ ಕೊಡುಗೆ ನೀಡುತ್ತಾರೆ. ರೋಗಿಗಳನ್ನು ಸಹಾನುಭೂತಿಯಿಂದ ಕಾಣಬೇಕು. ಶಿಕ್ಷಣದಿಂದ ಮೌಲ್ಯಗಳು ಬರುತ್ತವೆ ಹಾಗೂ ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯ. ದಿನನಿತ್ಯದ ಜೀವನದಲ್ಲಿ ಸರಿತಪ್ಪು ಅರಿಯುವ ಪ್ರಜ್ಞೆ ಜಾಗೃತವಾಗಿರಬೇಕು. ಕೃತಕವಾಗಿ ಎಲ್ಲವನ್ನು ಮಾಡಬಹುದು ಎನ್ನುವ ಮನೋಭಾವ ಇಟ್ಟುಕೊಳ್ಳಬಾರದು ಎಂದು ತಿಳಿಸಿದರು.

ದೇಶದ ವೈವಿಧ್ಯತೆ ಅರ್ಥ ಮಾಡಿಕೊಳ್ಳಬೇಕು. ಪ್ರತಿ ಹಂತದಲ್ಲೂ ಅದನ್ನು ಅನ್ವಯಿಸಿಕೊಂಡು ಕೆಲಸ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಯೊಂದು ಕ್ಷಣವೂ ನಿಮ್ಮ ಬಗ್ಗೆ ಯೋಚಿಸಿ, ಸ್ಪಂದಿಸಿದ ಪಾಲಕರನ್ನು ದೇವರಂತೆ ಕಾಣಬೇಕು. ಪರ್ಯಾಯ ಮಾರ್ಗಗಳು (ಶಾರ್ಟ್‌ಕಟ್‌) ಯಾವಾಗಲೂ ತಪ್ಪು ದಾರಿಗೆ ಎಳೆಯುತ್ತವೆ ಎಂದು ಹೇಳಿದರು.

ಬೆಳ್ಳೂರು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರತಿನಿಧಿ ಡಾ.ಎಂ.ಎ. ಶೇಖರ್, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಬಸವರಾಜ ಪೀರಾಪುರ, ರಿಮ್ಸ್ ಪ್ರಾಂಶುಪಾಲ ಡಾ. ಬಸವರಾಜ ಎಂ.ಪಾಟೀಲ, ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಭಾಸ್ಕರ್, ಮುಖ್ಯ ಆಡಳಿತಾಧಿಕಾರಿ ನೂರ್ ಜಹಾನ್ ಖಾನಂ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ವಿವಿಧ ವಿಷಯಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದಿದ್ದ ಡಾ.ಐಶ್ವರ್ಯ ಸುಹಾಸ್ ಕುಲಕರ್ಣಿ, ಡಾ.ಅಭಿಷೇಕ್ ಆರ್., ಡಾ.ಮೊಹ್ಮದ್ ಬಿಲಾಲ್ ಹುಸೇನ್, ಡಾ.ಹೇಮಂತ್ ಪಿ., ಡಾ. ಕಾವ್ಯಾ ವಟ್ಟಿಕುಟಿ, ಡಾ.ಹಿಮಜಾ ಕಲಕೋಟಾ, ಡಾ.ಕವಿತಾ ಎಂ. ಅವರಿಗೆ ಪ್ರಮಾಣಪತ್ರ, ನಗದು ಬಹುಮಾನ ವಿತರಿಸಲಾಯಿತು.

ಮನೋಜ್ಞಾ ಪ್ರಾರ್ಥಿಸಿದರು. ಡಾ.ಭಾಸ್ಕರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT