ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಕ್ಷೇತ್ರದಾದ್ಯಂತ ಉಕ್ಕಿದ ಚುನಾವಣೆ ಉತ್ಸಾಹ

ಕಾಂಗ್ರೆಸ್‌, ಬಿಜೆಪಿ ಕಚೇರಿಗಳಲ್ಲಿ ಕಾರ್ಯಕರ್ತರ ದಂಡು
Last Updated 17 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಹಲವು ತಿಂಗಳುಗಳಿಂದ ಕುತೂಹಲ ಕೆರಳಿಸುತ್ತಾ ಬಂದಿರುವ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ, ಕ್ಷೇತ್ರದಾದ್ಯಂತ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಉಕ್ಕಿದೆ.

ಪ್ರತಿ ಮನೆ ಮತ್ತು ಪ್ರತಿ ಮತದಾರನನ್ನು ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡುತ್ತಾ ಬರುತ್ತಿರುವ ಕಾರ್ಯಕರ್ತರು, ಇದೀಗ ಸೋಲುಗೆಲುವಿನ ಘಟ್ಟ ತಲುಪಿರುವುದಕ್ಕೆ ಸಮಾಧಾನ ಪಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪೈಪೋಟಿ ಒಂದೆಡೆಯಾದರೆ, ಕಾರ್ಯಕರ್ತರ ಮಧ್ಯೆ ಕೂಡಾ ಪರಸ್ಪರ ಗೆಲುವಿಗಾಗಿ ನಾನಾ ಕಸರತ್ತು ನಡೆಯುತ್ತಿದೆ.

ಪ್ರತಾಪಗೌಡ ಪಾಟೀಲ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರಿಂದ ಕೆಲವು ಬೆಂಬಲಿಗರು ಹಿಂದಿನ ಪಕ್ಷದಲ್ಲೇ ಉಳಿದಿದ್ದಾರೆ. ಬಸನಗೌಡ ತುರ್ವಿಹಾಳ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದಕ್ಕೆ ಇವರ ಕೆಲವು ಬೆಂಬಲಿಗರು ಬಿಜೆಪಿಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಅಲ್ಲೇ ಉಳಿದವರು ಮತ್ತು ಪಕ್ಷಬಿಟ್ಟು ಬಂದವರು ಎನ್ನುವ ಜಿದ್ದಾಜಿದ್ದಿ ಜೋರಾಗಿದೆ.

ಈಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ವಿರೂ‍ಪಾಕ್ಷಪ್ಪ ಅವರ ಬೆಂಬಲಿಗರ ಮಧ್ಯೆ ಕೂಡಾ ಪೈಪೋಟಿ ಶುರುವಾಗಿದೆ. ಅವರವರ ಪಕ್ಷದ ಗೆಲುವಿಗಾಗಿ ಶತಪ್ರಯತ್ನ ಪಡುತ್ತಿದ್ದಾರೆ. ಉಪಚುನಾವಣೆ ಘೋಷಣೆ ನಿಶ್ಚಿತ ಎನ್ನುವುದನ್ನು ತಿಳಿದು, ಮತದಾರರ ಮನವೊಲಿಸುವ ಕೆಲಸವನ್ನು ಉಭಯ ಪಕ್ಷಗಳ ಕಾರ್ಯಕರ್ತರು ಮೊದಲಿಂದ ಮಾಡುತ್ತಲೇ ಬಂದಿದ್ದಾರೆ. ಈಗ ರಾಜ್ಯಮಟ್ಟದ ನಾಯಕರೊಂದಿಗೆ ತಮ್ಮ ಮತದಾರರಿಂದ ಮತಗಳು ಚದುರದಂತೆ ತಂತ್ರ ರೂಪಿಸುತ್ತಿದ್ದಾರೆ.

ಮುಖ್ಯವಾಗಿ, ಕ್ಷೇತ್ರದಲ್ಲಿರುವ ಪ್ರಭಾವಿಗಳನ್ನು ಸೆಳೆಯುವುದಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ತಂತ್ರ ರೂಪಿಸುತ್ತಿವೆ. ಈ ವಿಚಾರದಲ್ಲಿ ಬಿಜೆಪಿ ಮುಂದಡಿ ಇಟ್ಟಿದ್ದು, ವಿರೂಪಾಕ್ಷಪ್ಪ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಕಾಂಗ್ರೆಸ್‌ ನಾಯಕರು ಕುರುಬ ಸಮಾಜದ ಪ್ರಭಾವಿ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಾಡುತ್ತಿದ್ದಾರೆ.

ಪಾಠ ಕಲಿಸುವುದು: ಮಸ್ಕಿ ವಿಧಾನಸಭೆ ಉಪಚುನಾವಣೆ ಮಟ್ಟಿಗೆ ಪಾಠ ಕಲಿಸುತ್ತೇವೆ ಎನ್ನುವ ಪದ ಸಾಮಾನ್ಯವಾಗಿ ಬಳಕೆ ಆಗುತ್ತಿದೆ. ಪ್ರತಾಪಗೌಡ ಪಾಟೀಲ ಅವರಿಗೆ ಕಾಂಗ್ರೆಸ್‌ ಕಡೆಯಿಂದ ಪಾಠ ಮತ್ತು ಬಸನಗೌಡ ಅವರಿಗೆ ಬಿಜೆಪಿ ಕಡೆಯಿಂದ ಪಾಠ ಕಲಿಸುವುದಕ್ಕಾಗಿ ಈ ಉಪಚುನಾವಣೆ ನಡೆಯುತ್ತಿದೆ ಎನ್ನುವಂತಾಗಿದೆ.

ಇಬ್ಬರು ಪಕ್ಷ ತೊರೆದಿದ್ದಾರೆ. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಪರಸ್ಪರ ಪೈಪೋಟಿ ನಡೆಸಿದ್ದ ಬಸನಗೌಡ ಮತ್ತು ಪ್ರತಾಪಗೌಡ ಅವರು ಮತ್ತೆ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಕ್ಷೇತ್ರದ ಜನರು ಪಕ್ಷಕ್ಕೆ ಮಹತ್ವ ನೀಡುತ್ತಾರೋ, ವ್ಯಕ್ತಿಗೆ ಮಹತ್ವ ನೀಡುತ್ತಾರೋ ಎಂಬುದು ಮೊದಲಿನಿಂದ ಗೌನವಾಗಿದೆ. ಈಗ ನಡೆಯುವ ಪ್ರಚಾರ ಮತ್ತು ಭರವಸೆಗಳನ್ನು ನೋಡಿ, ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದು. ಇಬ್ಬರು ಮಧ್ಯೆ ನೇರಾನೇರ ಹಣಾಹಣಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT