ಮಂದಗಾಮಿಯಾದ ಚುನಾವಣಾ ಪ್ರಚಾರ

ಶನಿವಾರ, ಮಾರ್ಚ್ 23, 2019
34 °C
ಅಭ್ಯರ್ಥಿಗಳ ಆಯ್ಕೆಯತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರ ಚಿತ್ತ

ಮಂದಗಾಮಿಯಾದ ಚುನಾವಣಾ ಪ್ರಚಾರ

Published:
Updated:
Prajavani

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಪಕ್ಷಗಳ ವರಿಷ್ಠರು ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎನ್ನುವ ವಿಷಯ ಎಲ್ಲೆಡೆ ಚರ್ಚಾಸ್ಪದ ಆಗಿರುವುದರಿಂದ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಂದಗಾಮಿಯಾಗಿದೆ!

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷನಿಷ್ಠರು ಮಾತ್ರ ಪಕ್ಷಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಅಲ್ಲಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಹಿರಂಗವಾಗಿ ಅಭ್ಯರ್ಥಿಗಳ ಹೆಸರಿನಲ್ಲಿ ಸಾಮೂಹಿಕವಾಗಿ ಮತಯಾಚನೆ ಮಾಡುವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಬಹುತೇಕ ಕಾರ್ಯಕರ್ತರಲ್ಲಿ ಈ ಬಗ್ಗೆ ಸ್ಪಷ್ಟತೆ ಕಾಣುತ್ತಿಲ್ಲ. ಆದರೆ, ಟಿಕೆಟ್‌ಗಾಗಿ ಪಟ್ಟು ಹಿಡಿದ ಅಭ್ಯರ್ಥಿಗಳ ಹೆಸರು ಮಾತ್ರ ಉಲ್ಲೇಖವಾಗುತ್ತಿದೆ.

ಅಚ್ಚರಿಯ ಸಂಗತಿಯೆಂದರೆ, ಸಂಸದ ಬಿ.ವಿ. ನಾಯಕ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ ಎನ್ನುವುದು ಇವರೆಗೂ ಸ್ಪಷ್ಟವಾಗಿದ್ದು ಮತ್ತೆ ಪರಿಶೀಲನೆಯಲ್ಲಿರುವುದು. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರವನ್ನು ಪರಿವರ್ತನಾ ರ್‍ಯಾಲಿ ಮೂಲಕ ರಾಯಚೂರಿನಿಂದಲೇ ಆರಂಭಿಸಿದ್ದ ಕಾಂಗ್ರೆಸ್‌ ನಾಯಕರು ಸಂಸದ ಬಿ.ವಿ. ನಾಯಕ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವಂತೆ ಜನರನ್ನು ಕೋರಿದ್ದರು. ಆದರೆ, ಮೈತ್ರಿ ಪಕ್ಷಗಳಲ್ಲಿ ನಡೆಯುತ್ತಿರುವ ಸೀಟು ಹಂಚಿಕೆ ಪೀಕಲಾಟವು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ ಮೂಡುವಂತೆ ಮಾಡಿದೆ.

ರಾಯಚೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎನ್ನುವ ಒತ್ತಡವನ್ನು ಜಿಲ್ಲಾ ಮುಖಂಡರು ಮಾಡಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಜೆಡಿಎಸ್‌ ರಾಜ್ಯಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ ಅವರು ಈಚೆಗೆ ರಾಯಚೂರಿನಲ್ಲಿ ಹೇಳಿಕೆ ನೀಡಿದ್ದರು. ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ ನಾಯಕರು ತಮ್ಮ ಅಭ್ಯರ್ಥಿ ಹೆಸರು ಘೋಷಿಸಿದ್ದು ಅಂತಿಮವಲ್ಲ. ಕಾಂಗ್ರೆಸ್‌–ಜೆಡಿಎಸ್‌ ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಮಾಡುತ್ತಿದ್ದ ಪ್ರಚಾರವು ಸ್ವಲ್ಪ ಮಂಕು ಕವಿಯುವಂತಾಗಿದೆ.

ಮೈತ್ರಿ ಪಕ್ಷಗಳ ಮಾತುಕತೆ ಸಫಲವಾದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರೆಂಬುದು ಸ್ಪಷ್ಟತೆ ಇದೆ. ಸಂಸದ ಬಿ.ವಿ. ನಾಯಕ ಅವರ ಸ್ಪರ್ಧೆಗೆ ತಡೆವೊಡ್ಡುವವರು ಕಾಂಗ್ರೆಸ್‌ನಲ್ಲಿ ಯಾರಿಲ್ಲ. ಆದರೆ, ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ವಿಚಾರದಲ್ಲಿ ಸ್ಪಷ್ಟತೆ ಕಾರಣುತ್ತಿಲ್ಲ. ಟಿಕೆಟ್‌ ಆಕಾಂಕ್ಷಿಗಳಿದ್ದಾರೆ ಎನ್ನುವ ಮಾತೊಂದೆ ಚಲಾವಣೆಯಲ್ಲಿದೆ. ಇವೆಲ್ಲಕ್ಕಿಂತ ಮುಖ್ಯ ವಿಚಾರ, ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗೆ ಪ್ರತಿಸ್ಪರ್ಧಿಯಾಗುವ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದು.

ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಲೆ ಇರುವುದರಿಂದ ರಾಯಚೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಯಾರು ಸ್ಪರ್ಧಿಸಿದರೂ ಗೆಲುವು ನಿಶ್ಚಿತ ಎನ್ನುವ ನಂಬಿಕೆ ಜಿಲ್ಲೆಯ ಮುಖಂಡರಲ್ಲಿದೆ. ಹೀಗಾಗಿ ಟಿಕೆಟ್‌ ಪಡೆಯಲು ತೆರೆಮರೆ ಗುದ್ದಾಟ ತೀವ್ರವಾಗಿದೆ. ಎಲ್ಲರ ಲೆಕ್ಕಾಚಾರ ಮೀರಿ, ರಾಯಚೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಹೊರಗಿನ ಜಿಲ್ಲೆಯಿಂದ ಅಭ್ಯರ್ಥಿಯ ಆಗಮನವೂ ಆಗಬಹುದು, ಮಾಜಿ ಸಂಸದ ಸಣ್ಣಫಕಿರಪ್ಪ ಅವರು ಮತ್ತೆ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಮಾರ್ಚ್‌ 15 ರ ನಂತರ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿ ಪ್ರಚಾರ ಭರಾಟೆ ಜೋರಾಗಬಹುದು.

**

ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಬಿ.ವಿ.ನಾಯಕ ಅಭ್ಯರ್ಥಿ ಎಂಬುದನ್ನು ಪಕ್ಷದ ವರಿಷ್ಠರು ಘೋಷಿಸಿದ್ದಾರೆ. ಆದರೂ ಅಂತಿಮ ಪಟ್ಟಿ ಬರುವವರೆಗೂ ಸಹಜ ಗೊಂದಲ ಇದ್ದೇ ಇರುತ್ತದೆ.

- ರಾಮಣ್ಣ ಇರಬಗೇರಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಮೈಸೂರು, ಮಂಡ್ಯ ಮತ್ತು ಹಾಸನ ಸೀಟು ಹಂಚಿಕೆ ಕಗ್ಗಂಟಾಗಿದ್ದು, ವರಿಷ್ಠರು ರಾಯಚೂರಿನ ಬಗ್ಗೆ ಅಂತಿಮ ನಿರ್ಣಯ ಪ್ರಕಟಿಸಿಲ್ಲ. ಏನೇ ತೀರ್ಮಾನವಾದರೂ ಮೈತ್ರಿ ಧರ್ಮಕ್ಕೆ ಬದ್ಧರಾಗಿ ನಡೆಯುತ್ತೇವೆ.

- ವಿರೂಪಾಕ್ಷಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ

ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಅದರಲ್ಲಿ ಮಾಜಿ ಸಂಸದ ಸಣ್ಣ ಫಕಿರಪ್ಪ ಅವರ ಹೆಸರೂ ಇದೆ. ಮಾ. 15 ರ ನಂತರ ಎಲ್ಲವೂ ಸ್ಪಷ್ಟವಾಗುತ್ತದೆ.

- ಶರಣಪ್ಪಗೌಡ ಜಾಡಲದಿನ್ನಿ, ಜಿಲ್ಲಾ ಬಿಜೆಪಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !