ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಬೆಳೆ ಸಂರಕ್ಷಣೆಗೆ ವಿದ್ಯುತ್ ದೀಪ

ಕೀಟಬಾಧೆ ತಡೆಗೆ 5 ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬಲ್ಬ್‌ಗಳ ಬಳಕೆ
ಅಕ್ಷರ ಗಾತ್ರ

ಲಿಂಗಸುಗೂರು: ಪಪ್ಪಾಯ,ದಾಳಿಂಬೆ, ಪೇರಲ, ಸಿತಾಫಲ ಸೇರಿದಂತೆ ವಾಣಿಜ್ಯ ಬೆಳೆಗಳ ರಕ್ಷಣೆಗೆ ಬದುವಿಗೆ ಪರದೆ, ಗಿಡಗಳಿಗೆ ಬಲೆ ಮತ್ತು ಸೀರೆ ಮುಚ್ಚುವುದು ಸೇರಿದಂತೆ ವಿವಿಧ ನಮೂನೆಯ ರಕ್ಷಣಾ ಕಾರ್ಯ ನಡೆಸಿದ್ದು ನೋಡಿದ್ದೇವು. ಆದರೆ, ದಾಳಿಂಬೆ ಬೆಳೆಯ ರಕ್ಷಣೆಗೆ ತೋಟದ ತುಂಬೆಲ್ಲಾ ವಿದ್ಯುತ್‍ ದೀಪಗಳ ಅಲಂಕಾರ ಮಾಡಿದ್ದು ರೈತರನ್ನು ಹುಬ್ಬೇರಿಸುವಂತೆ ಮಾಡಿದೆ.

ಇಲ್ಲಿನ ಎಂಜಿನಿಯರ್ ಪದವೀಧರ ಬಸವರಾಜಗೌಡ ಗಣೆಕಲ್ಲ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ದಾಳಿಂಬೆ ಗಿಡಗಳನ್ನು ಬೇರು ಸಮೇತ ದೂರದ ಜಮೀನುಗಳಿಗೆ ಸ್ಥಳಾಂತರಿಸಿ ನಾಟಿ ಮಾಡಿಕೊಂಡು ಕೃಷಿ ತಜ್ಞರನ್ನೆ ಬೆಚ್ಚಿ ಬೀಳುವಂತೆ ಮಾಡಿದ್ದರು. ಇದೀಗ ಚಿಟ್ಟೆಯನ್ನು ಹೋಲುವ ಕಾಯಿಕೊರಕ ಹುಳು ನಿಯಂತ್ರಣಕ್ಕೆ ಲಿಂಗಸುಗೂರಿನ ಗುಡದನಾಳ ರಸ್ತೆಯಲ್ಲಿರುವ 5 ಎಕರೆ ಜಮೀನಿಗೆ ದಾಳಿಂಬೆ ಗಿಡಗಳ ಸಾಲುಗುಂಟ ಎಲ್‍ಇಡಿ ವಿದ್ಯುತ್‍ ಬಲ್ಬ್‌ ಅಳವಡಿಸುವ ಮೂಲಕ ಹೊಸ ತಂತ್ರಜ್ಞಾನಕ್ಕೆ ಮುಂದಾಗಿದ್ದಾರೆ.

ಬಸವರಾಜಗೌಡ ಗಣೆಕಲ್ಲ ಅವರು, ಕೃಷಿ ವಿಶ್ವ ವಿದ್ಯಾಲಯ ತಜ್ಞರ ಸಲಹೆ ಪಡೆಯದೆ ತಮ್ಮ ಜಮೀನಿನ ಬೆಳೆಯ ಸಂರಕ್ಷಣೆಗೆ ಮುಂದಾಗಿದ್ದಾರೆ.

ಇವರ 5 ಎಕರೆ ಪ್ರದೇಶದಲ್ಲಿ ಅಂದಾಜು 1250 ದಾಳಿಂಬೆ ಗಿಡಗಳಿವೆ. ಚಿಟ್ಟೆ ಆಕಾರದ ಕಾಯಿಕೊರಕ ಹುಳ್ಳು ರಾತ್ರಿಯಿಡಿ ದಾಳಿಂಬೆ ಹಣ್ಣು ಕೊರೆದು ಹಾಳು ಮಾಡುತ್ತದೆ. ಅದನ್ನು ತಡೆಯಬೇಕಾದರೆ ಬೆಳಕು ಇರುವಂತೆ ನೋಡಿಕೊಳ್ಳಬೇಕು. ಅಂತೆಯೆ ಜನರೇಟರ್ ಬಳಸಿ ಜಮೀನು ತುಂಬೆಲ್ಲ ಬೆಳಕು ಇರುವಂತೆ ಮಾಡಲು 300ಕ್ಕೂ ಹೆಚ್ಚು ಎಲ್‍ಇಡಿ ಬಲ್ಬ್‌ ಬಳಸಿದ್ದಾರೆ. ಇದರ ಜೊತೆಗೆ ಐದು ದಿನಕ್ಕೊಮ್ಮೆ ಅಲ್ಫಾಮೂಲೈನ್‍ ಹಾಗೂ ಮಿಯೊತ್ರಿನ್‍ ಪ್ಲಸ್‍ ಫಿಶ್ ಆಯಿಲ್‍ ಮಿಶ್ರಣ ಸಿಂಪಡಣೆ ಮಾಡುತ್ತಿದ್ದಾರೆ.

‘ಈಗಾಗಲೆ ದಾಳಿಂಬೆ ಗಿಡಗಳನ್ನು ಬೇರು ಸಹಿತ ಕಿತ್ತು ಬೇರೆ ಜಮೀನಿನಲ್ಲಿ ನಾಟಿ ಮಾಡಿ, ಬೆಳೆದು ಯಶಸ್ವಿಯಾಗಿರುವೆ. ಚಿಟ್ಟೆ ಆಕಾರದ ಕಾಯಿಕೊರಕ ರಾತ್ರಿ ಆಗುತ್ತಿದ್ದಂತೆ ಗುಂಪು ಗುಂಪಾಗಿ ದಾಳಿ ಇಡುವುದನ್ನು ತಡೆಯಲು ತೋಟದ ತುಂಬೆಲ್ಲ ಬೆಳಕು ಇರುವಂತೆ ನೋಡಿಕೊಳ್ಳುವ ಕುರಿತು ಆನ್‌ಲೈನ್‍ದಲ್ಲಿ ಓದಿಕೊಂಡಿದ್ದೆ. ಅದನ್ನೆ ಪ್ರಾಯೋಗಿಕವಾಗಿ ಬಳಸುತ್ತಿದ್ದೇನೆ‘ ಎಂದುರೈತ ಬಸವರಾಜಗೌಡ ಗಣೆಕಲ್ಲ ಹೇಳಿದರು.

‘ಈ ಮುಂಚೆ ಕೆಲವೆಡೆ ದೀಪದ ಹುಳು ಕೀಟ ಬಾಧೆ ತಡೆಯಲು ಟೈರ್‌ಗೆ ಬೆಂಕಿ ಅಥವಾ ಅಲ್ಲಲ್ಲಿ ವಿದ್ಯುತ್‍ ಬಲ್ಬ್‌ ಹಾಕುವ ಪದ್ಧತಿ ಇತ್ತು. ದಾಳಿಂಬೆ ಬೆಳೆಗೆ ಪ್ರಗತಿಪರ ರೈತ ಬಸವರಾಜಗೌಡ ಗಣೆಕಲ್‍ ಅವರು ತೋಟದ ತುಂಬೆಲ್ಲ ಬೆಳಕು ಇರುವಂತೆ ಮಾಡಿದ್ದು ಸಾಹಸವೆ ಸರಿ. ಈ ರೀತಿ ಮಾಡುವುದರಿಂದ ಕಾಯಿಕೊರಕ ತಡೆಯುವ ಸಾಧ್ಯತೆಗಳಿವೆ. ಈ ಪ್ರದೇಶದಲ್ಲಿ ಇಂತಹ ಪ್ರಯೋಗ ನಡೆಯುತ್ತಿರುವುದು ಮೊದಲು’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಯೋಗೇಶ್ವರ ಎಚ್‍.ಕೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT