ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕೂಲಿ ಕಾರ್ಮಿಕ ಕುಟುಂಬಕ್ಕೆ ಉದ್ಯೋಗ: ಸಿಎಂ

Last Updated 5 ಜನವರಿ 2019, 14:03 IST
ಅಕ್ಷರ ಗಾತ್ರ

ರಾಯಚೂರು: ಭೂಮಿ ಇಲ್ಲದ ಕೃಷಿ ಕೂಲಿಕಾರ್ಮಿಕ ಕುಟುಂಬದ ಒಬ್ಬರು ಸದಸ್ಯರಿಗೆ ಶಾಶ್ವತ ಉದ್ಯೋಗ ಕಲ್ಪಿಸಬೇಕು ಎನ್ನುವ ಗಂಭೀರ ಆಲೋಚನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಸಿಂಧನೂರಿನಲ್ಲಿ ಶನಿವಾರದಿಂದ ಆರಂಭವಾದ ರಾಜ್ಯಮಟ್ಟದ ಮತ್ಸ್ಯ ಹಾಗೂ ಜಾನುವಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

’ಬರೀ ರೈತರ ಸಾಲಮನ್ನಾ ವಿಚಾರವನ್ನು ಸರ್ಕಾರ ಮಾಡುತ್ತಿದೆ ಎನ್ನುವುದು ಬೇಡ. ರಾಜ್ಯದ ಆರುವರೆ ಕೋಟಿ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಸಮ್ಮಿಶ್ರ ಸರ್ಕಾರದ ಮೇಲೆ ವಿಶ್ವಾಸವಿಡಿ. ಸಮಸ್ಯೆಗಳ ಪರಿಹಾರಕ್ಕೆ ಸ್ವಲ್ಪ ಸಮಯಾವಕಾಶ ಕೊಡಿ’ ಎಂದು ಕೋರಿದರು.

’ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2019-20 ನೇ ಸಾಲಿನ ರಾಜ್ಯ ಬಜೆಟ್ ಫೆಬ್ರುವರಿಯಲ್ಲಿ ಮಂಡಿಸಲಾಗುವುದು. ಅದರಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಘೋಷಣೆ ಮಾಡಲಾಗುವುದು.ರೈತರ ಸಾಲಮನ್ನಾ ಮಾಡಲು ಯಾವುದೇ ಇಲಾಖೆಗೆ ಕೊಡುವ ಅನುದಾನದಲ್ಲಿ ವ್ಯತ್ಯಾಸ ಮಾಡಿಲ್ಲ. ಸಾಲಮನ್ನಾ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಹಣ ತೆಗೆದಿರಿಸಲಾಗುತ್ತಿದೆ’ ಎಂದರು.

’ರಾಜ್ಯದಲ್ಲಿ ಇಂಧನ ದರ ಹೆಚ್ಚಳ‌ ಅನಿವಾರ್ಯ. ದರ ಹೆಚ್ಚಳವಾಗಿದ್ದ ವೇಳೆ ಸೆಸ್ ಕಡಿಮೆ ಮಾಡಲಾಗಿತ್ತು. ಬಸ್ ದರ ಹೆಚ್ಚಿಸಬೇಕೆನ್ನುವ ಪ್ರಸ್ತಾವ ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಇಂಧನ ತೆರಿಗೆ ಕಡಿಮೆ ಇದೆ’ ಎಂದು ಹೇಳಿದರು.

ಆಕರ್ಷಕ ಮೇಳ: ರಾಜ್ಯದಲ್ಲಿ ಪ್ರಗತಿಪರ ರೈತರು ಸಾಕಾಣಿಕೆ ಮಾಡುತ್ತಿರುವ ವಿವಿಧ ತಳಿಯ ಎತ್ತುಗಳು, ಎಮ್ಮೆಗಳು, ಹಂದಿಗಳು, ಮೇಕೆಗಳು, ಪಕ್ಷಿಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಜಿಲ್ಲೆಯ ರೈತರುಸಾಕು ಪ್ರಾಣಿಗಳ ವೈವಿಧ್ಯತೆಯನ್ನು ಕುತೂಹಲದಿಂದ ವೀಕ್ಷಿಸಿ, ಮಾಹಿತಿ ಪಡೆಯುತ್ತಿದ್ದಾರೆ. ಮತ್ಸ್ಯ ಮೇಳವೂ ಆಕರ್ಷಕವಾಗಿದ್ದು, ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದರು. ಮೀನು ಸಾಕಾಣಿಕೆ ಆಸಕ್ತಿ ಇರುವ ರೈತರಿಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಡುತ್ತಿದ್ದಾರೆ. ವಿವಿಧ ಭಾಗಗಳಿಂದ ರೈತರು ಆಸಕ್ತಿಯಿಂದ ಮೇಳ ನೋಡಲು ಬರುತ್ತಿದ್ದಾರೆ.

ಖಡತ್ನಾಥ್‌ ಕೋಳಿ, ಮುರ್ರಾ ತಳಿ ಎಮ್ಮೆ, ನಾರಿ ಸುವರ್ಣ ತಳಿ ಕುರಿ, ಬಿದ್ರಿ ಮೇಕೆ, ಡ್ಯೂರಾಕ್‌ ಹಂದಿ, ಯಾರ್ಕ್‌ಶೈರ್‌ ಹಂದಿಗಳು ಪ್ರಮುಖವಾಗಿ ಗಮನ ಸೆಳೆಯುತ್ತಿವೆ. ಉಡುಪಿ ಜಿಲ್ಲೆಯ ‘ಸುಲ್ತಾನ’ ಹೆಸರಿನ ಭಾರಿ ಎತ್ತರದ ಎತ್ತು ವಿಶೇಷವಾಗಿದೆ.

ಪಶು ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ, ಕೃಷಿ ಸಚಿವ ಶಿವಶಂಕರ ರೆಡ್ಡಿ ಇದ್ದರು.

ಮೇಕೆ ಹಾಲು
ಮೇಳದ ಉದ್ಘಾಟನೆಗೆ ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೇಕೆ ಹಾಲು ಸೇವಿಸಿ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು.

‘ಮುಖದಲ್ಲಿ ಆಯಾಸ ಇರುವುದನ್ನು ಗಮನಿಸಿದ ರೈತರೊಬ್ಬರು ಮೇಕೆ ಹಾಲು ಕುಡಿಯಿರಿ ಆಯಾಸ ಹೋಗುತ್ತದೆ ಎಂದು ಸಲಹೆ ಕೊಟ್ಟರು. ವೇದಿಕೆಯಲ್ಲಿ ಇದ್ದವರಿಗೆಲ್ಲ ಹಾಲು ನೀಡಿದರು’ ಎಂದು ಮುಖ್ಯಮಂತ್ರಿಯೆ ವಿಷಯ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT