ಲಿಂಗಸುಗೂರು: ‘ವಿಶ್ವದ ಎಲ್ಲ ಧರ್ಮಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತ ಸಂದೇಶ ನೀಡಿವೆ. ಆದರೆ, ಧಾರ್ಮಿಕತೆ ವಿಚಾರಗಳ ಅನುಷ್ಠಾನದಲ್ಲಿ ಧರ್ಮಾಂಧತೆ ತಾಂಡವವಾಡುತ್ತಿದೆ. ಅಂತಹ ಮೌಢ್ಯ, ಕಂದಾಚಾರ ತೊಳೆಯುವಂತ ಸಾಹಿತ್ಯಕ್ಕೆ ಸ್ವಾಮಿಗಳು ಮುಂದಾಗಬೇಕು’ ಎಂದು ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಬುಧವಾರ ಹೇಳಿದರು.
ಲಿಂಗೈಕ್ಯ ಗಜದಂಡ ಶಿವಾಚಾರ್ಯರ ಪುಣ್ಯಾರಾಧನೆ ಮತ್ತು ಧರ್ಮ-ಧಾರ್ಮಿಕತೆ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸುಸಜ್ಜಿತ ಬಂಗಲೆ, ಮಠ ಕಟ್ಟಿಕೊಂಡು, ಐಷಾರಾಮಿ ಕಾರಿನಲ್ಲಿ ತಿರುಗಾಡುತ್ತ ಬಾಯಿ ಚಪಲಕ್ಕೆ ಮಾತನಾಡುವ ಸ್ವಾಮೀಜಿಗಳನ್ನು ಭಕ್ತರು ದೇಣಿಗೆ, ಕಾಣಿಕೆ ನೀಡದೆ ದೂರವಿಡಬೇಕು. ಭಕ್ತರ ಮನಸ್ಸಿನ ಕೊಳೆ ತೊಳೆಯುವ ಕೆಲಸ ಕಾರ್ಯ, ಸಾಹಿತ್ಯ ರಚಿಸುವವರಿಗೆ ಹಣ ನೀಡಿ ಪ್ರೋತ್ಸಾಹಿಸಬೇಕು’ ಎಂದರು.
ಸಂಸದ ರಾಜಾ ಅಮರೇಶ್ವರ ನಾಯಕ, ಗುರುಗುಂಟಾ ಸಂಸ್ಥಾನಿಕ ರಾಜಾ ಸೋಮನಾಥ ನಾಯಕ ಮಾತನಾಡಿ, ‘ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ವಯಸ್ಸಿನಲ್ಲಿ ಚಿಕ್ಕವರಾದರು ಕೂಡ ಧರ್ಮ ಜಾಗೃತಿಯಲ್ಲಿ ಮುಂದಿದ್ದಾರೆ. ಅಕ್ಷರ ಜ್ಞಾನದ ಸಾಹಿತ್ಯ ಮೂಲಕ ಸಾಮಾಜಿಕ ಪರಿವರ್ತನೆಗೆ ಅವರು ಬರೆದ ಧರ್ಮ-ದಾರ್ಮಿಕತೆ ಕೃತಿ ಸಹಕಾರಿ ಆಗಿದೆ. ಶ್ರೀಗಳ ಕೆಲಸ ಕಾರ್ಯಗಳಿಗೆ ತಾವುಗಳು ಸದಾ ಪ್ರೋತ್ಸಾಗಿಸುತ್ತೇವೆ’ ಎಂದು ಹರ್ಷ ಹಂಚಿಕೊಂಡರು.
ಅಭಿನವ ಗಜದಂಡ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಯರಡೋಣಿ ಮುರುಘರಾಜೇಂದ್ರ ಸ್ವಾಮೀಜಿ, ಕೊಡೆಕಲ್ಲ ಶಿವಕುಮಾರ ಶಿವಾಚಾರ್ಯರು, ಕೂಡಲಗಿ ಪ್ರಶಾಂತಸಾಗರ ದೇವರು, ಲಿಂಗಸುಗೂರಿನ ನಂದಿಕೇಶ್ವರಿ ಮಾತೆ, ಸಾಹಿತಿಗಳಾದ ಗಿರಿರಾಜ ಹೊಸಮನಿ, ಜಿ.ವಿ ಕೆಂಚನಗುಡ್ಡ ಮಾತನಾಡಿ, ‘ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಧರ್ಮ ಧಾರ್ಮಿಕತೆ ಕೃತಿ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿ ಮೊಟ್ಟ ಮೊದಲ ಕೃತಿ ಹೊರ ಬಂದಿದೆ’ ಎಂದು ಹೇಳಿದರು.
ಗುರುಗುಂಟ ಸದಾನಂದ ಶಿವಾಚಾರ್ಯರು, ಮಸ್ಕಿ ವರರುದ್ರಮುನಿ ಶಿವಾಚಾರ್ಯರು, ಅಂಕುಶದೊಡ್ಡಿ ವಾಮದೇವ ಶಿವಾಚಾರ್ಯರು, ಸಂತೆಕೆಲ್ಲೂರಿನ ಮರಿಮಹಾಂತಲಿಂಗ ಶಿವಾಚಾರ್ಯರು, ಲಿಂಗಸುಗೂರಿನ ಸೋಮಶೇಖರಯ್ಯ ಶರಣರು. ಗುಂತಗೋಳ ಸಂಸ್ಥಾನಿಕ ರಾಜಾ ಶ್ರೀನಿವಾಸ ನಾಯಕ, ಕಾಳಾಪುರದ ಆರ್.ಎಸ್ ನಾಡಗೌಡ್ರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮುಖಂಡರು, ಭಕ್ತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.