ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯಮಿಗಳು ಸ್ಥಳೀಯರಿಗೆ ಉದ್ಯೋಗ ಕೊಡಿ’

ವಾಣಿಜ್ಯ ಸಪ್ತಾಹದ ನಿಮಿತ್ತ ರಫ್ತುದಾರರ ಸಮಾವೇಶ
Last Updated 24 ಸೆಪ್ಟೆಂಬರ್ 2021, 13:02 IST
ಅಕ್ಷರ ಗಾತ್ರ

ರಾಯಚೂರು: ಕೈಗಾರಿಕೆಗಳಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಸಾಮಾನ್ಯವಾಗಿ ಕಾಣುತ್ತೇವೆ. ಇದರಿಂದ ಸ್ಥಳೀಯರು ಉದ್ಯೋಗ ವಂಚಿತರಾಗುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಬಡತನ ಹಾಗೂ ಮುಗ್ಧತೆ ಇದೆ. ಉದ್ದಿಮೆದಾರರು ತಾವಿರುವ ಪ್ರದೇಶದ ಋಣ ತೀರಿಸಲು ಮನಸ್ಸು ಮಾಡಬೇಕು. ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಮನವಿ ಮಾಡಿದರು.

ಜಿಲ್ಲಾ ವಾಣಿಜ್ಯ ಇಲಾಖೆ, ಜಿಲ್ಲಾಡಳಿತ, ರಾಯಚೂರು ರೈಸ್‌ಮಿಲ್‌ ಅಸೋಷಿಯೇಶನ್‌ ಹಾಗೂ ರಾಯಚೂರು ವಾಣಿಜ್ಯೋದ್ಯಮಿಗಳ ಸಂಘ (ಆರ್‌ಸಿಸಿಐ)ದಿಂದ ವಾಣಿಜ್ಯ ಸಪ್ತಾಹದ ನಿಮಿತ್ತ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ರಫ್ತುದಾರರ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಕೈಗಾರಿಕೆ ಆರಂಭಿಸುವುದಕ್ಕೆ ಮೂಲ ಸೌಕರ್ಯಗಳು ಬಹಳ ಮುಖ್ಯ. ಈ ಮೊದಲು ಕೈಗಾರಿಕೆ ಜಮೀನು ಖರೀದಿಗೆ ಉದ್ದಿಮೆಗಳಿಗೆ ಅವಕಾಶ ಇರಲಿಲ್ಲ. ಈಗ ಹೊಸ ಕಾಯ್ದೆ ಅನುಸಾರ 54 ಎಕರೆವರೆಗೂ ಉದ್ಯಮಿಗಳು ನೇರವಾಗಿ ಖರೀದಿಗೆ ರಾಜ್ಯದಲ್ಲಿ ಅವಕಾಶ ಮಾಡಲಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ರಾಯಚೂರಿನ ಆಶಾಪುರ ಮಾರ್ಗದಲ್ಲಿ 110 ಕೆವಿ ವಿದ್ಯುತ್‌ ಸ್ಟೇಷನ್ ಮಂಜೂರಿಯಾಗಿದೆ. ಶೀಘ್ರದಲ್ಲಿ ಮತ್ತಷ್ಡು ಗುಣಮಟ್ಟದ ವಿದ್ಯುತ್ ದೊರೆಯಲಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಕೃಷ್ಣಾನದಿಯಿಂದ ನೀರಿನ ಲಭ್ಯತೆಯೂ ಸಾಕಷ್ಟಿದೆ. ಕೈಗಾರಿಕೆಗಳ ಅಭಿವೃದ್ಧಿಗಾಗಿ ವಾಣಿಜ್ಯೋದ್ಯಮಿಗಳ ಸಂಘಕ್ಕೆ ಜಿಲ್ಲಾಡಳಿತದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಉದ್ಯೋಗದ ಬೇಡಿಕೆ ಪತ್ರ ಹಿಡಿದು ಸಾಕಷ್ಟು ಜನರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಅಗತ್ಯವಿದ್ದು, ಉದ್ದಿಮೆದಾರರು ಸ್ಥಳೀಯರಿಗೆ ಹೆಚ್ಚು ಉದ್ಯೋಗ ಒದಗಿಸಬೇಕು. ಸಿದ್ಧಉಡುಪು ಕಾರ್ಖಾನೆಗಳನ್ನು ಸ್ಥಾಪಿಸುವುದಕ್ಕೆ ಕ್ರಮ ವಹಿಸಬೇಕಿದೆ. ಅತಿಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಯಲ್ಲಿ ಜವಳಿ ಕಾರ್ಖಾನೆ ಆರಂಭಿಸುವ ಅಗತ್ಯವಿದೆ ಎಂದರು.

ಜಿಲ್ಲೆಯಲ್ಲಿ ಎರಡು ರೈಲ್ವೆ ಮಾರ್ಗಗಳ ಕಾಮಗಾರಿ ಬಾಕಿ ಇವೆ. ಗದಗ- ವಾಡಿ ಮಾರ್ಗದ ಭೂಮಿ ದರ ನಿಗದಿ ಸಭೆ ಮುಗಿಸಲಾಗಿದೆ. ಆದಷ್ಟು ಬೇಗ ಪರಿಹಾರ ವಿತರಣೆ ಆರಂಭವಾಗಲಿದೆ. ಆಯಾ ಗ್ರಾಮದಲ್ಲೇ ಅಧಿಕಾರಿಗಳು ದಾಖಲಾತಿಗಳನ್ನು ಸಂಗ್ರಹಿಸಿ ಪರಿಹಾರ ವಿತರಿಸಲಿದ್ದಾರೆ. ಮುನಿರಾಬಾದ್ - ಮೆಹಬೂಬನಗರ ಮಾರ್ಗದ ಭೂಸ್ವಾಧೀನ ಬಾಕಿ ಪ್ರಕ್ರಿಯೆ ಕೂಡಾ ಮುಗಿಯುತ್ತಿದೆ. ರಾಜ್ಯದ ಸಿಎಂ ಕಚೇರಿಯಿಂದ ಪ್ರತಿ ತಿಂಗಳು ರೈಲ್ವೆ ಯೋಜನೆ ಪ್ರಗತಿ ಪರಿಶೀಲನೆ ಆಗುತ್ತಿದೆ. ಬೇಗನೆ ಬಾಕಿ ರೈಲ್ವೆ ಮಾರ್ಗಗಳ ಅಭಿವೃದ್ಧಿ ಆರಂಭವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಜಿಲ್ಲೆಯಿಂದ ಶೇಂಗಾ, ದಾಳಿಂಬೆ, ಗ್ರಾನೇಟ್, ಕಡ್ಲೆ, ಅಕ್ಕಿ, ಗೋಧಿ ಹಿಟ್ಟು, ಅಕ್ಕಿ, ಮೆಣಸಿನಕಾಯಿ ರಫ್ತು ಮಾಡಲಾಗುತ್ತಿದೆ. ರಫ್ತು ವಹಿವಾಟು ವೃದ್ಧಿ ಮಾಡಿಕೊಳ್ಳಲು ಹಾಗೂ ಹೊಸದಾಗಿ ರಫ್ತು ಆರಂಭಿಸಲು ಬೇಕಾಗುವ ಮಾಹಿತಿ ಹಾಗೂ ನೆರವನ್ನು ವಾಣಿಜ್ಯ ಇಲಾಖೆಯಿಂದ ಮಾಡಲಾಗುವುದು ಎಂದು ಹೇಳಿದರು.

ಸ್ಟೇಟ್‌ ಬ್ಯಾಂಕ್‌ ಇಂಡಿಯಾ (ಎಸ್‌ಬಿಐ) ಪ್ರಾದೇಶಿಕ ವ್ಯವಸ್ಥಾಪಕ ಕೆ.ರಘುನಂದನ್ ಮಾತನಾಡಿ, ಉದ್ದಿಮೆದಾರರಿಗೆ ನೆರವು ಒದಗಿಸಲು ಎಸ್‌ಬಿಐ ಸದಾ ಸಿದ್ಧವಿದೆ. ಸಾಕಷ್ಟು ಸಾಲ ಯೋಜನೆಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಕಲಬುರ್ಗಿಯಲ್ಲಿ ಪ್ರತ್ಯೇಕ ಶಾಖೆ ತೆರೆಯಲಾಗಿದೆ ಎಂದರು.

ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಯಚೂರು ಕಾರ್ಖಾನೆಗಳ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮೀರೆಡ್ಡಿ, ಕೆನರಾ ಬ್ಯಾಂಕ್‌ ಎಜಿಎಂ, ಉದ್ಯಮಿ ಮಂಜುನಾಥ, ಮಂಚಿಕೊಂಡ ನರಸಿಂಹಯ್ಯ, ಹರಿಚಂದನ್ ಇದ್ದರು.

ಸಪ್ತಾಹ ಉದ್ಘಾಟನೆ ಬಳಿಕ ರಫ್ತುದಾರರಿಗೆ ವಿಷಯ ತಜ್ಞರಿಂದ ವಿವಿಧ ಸೌಲಭ್ಯಗಳ ಕುರಿತು ಸವಿಸ್ತಾರ ಮಾಹಿತಿ ನೀಡಿ, ಸಂವಾದ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT