ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಡಿಲಿಗೆ ರೈತ ಬಲಿ: ಮೂರು ಸೇತುವೆಗಳು ಮುಳುಗಡೆ

ಲಿಂಗಸುಗೂರಲ್ಲಿ ಗರಿಷ್ಠ 98.4 ಮಿ.ಮೀ ಮಳೆ
Published : 17 ಆಗಸ್ಟ್ 2024, 16:33 IST
Last Updated : 17 ಆಗಸ್ಟ್ 2024, 16:33 IST
ಫಾಲೋ ಮಾಡಿ
Comments

ರಾಯಚೂರು: ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ದೇವದುರ್ಗ ತಾಲ್ಲೂಕಿನ ಮೂಡಲಗುಂಡ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಹಳ್ಳಗಳು ಉಕ್ಕಿ ಹರಿದು ನೆಲಮಟ್ಟದ ಸೇತುವೆಗಳು ಮುಳುಗಡೆಯಾಗಿವೆ.

ಮೂಡಲಗುಂಡ: ಸಿಡಿಲು ಬಡಿದು ಸಾವು

ಜಾಲಹಳ್ಳಿ: ದೇವದುರ್ಗ ತಾಲ್ಲೂಕಿನ ಮೂಡಲಗುಂಡ ಗ್ರಾಮದ ರೈತ ಬಸವರಾಜ (30) ಶುಕ್ರವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಬಸವರಾಜ ತಮ್ಮ ಹೊಲದಲ್ಲಿ ಎತ್ತುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಗುಡು ಸಹಿತ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಹೋಗಿ ನಿಂತ ಸ್ವಲ್ಪ ಹೊತ್ತಿನಲ್ಲೇ ಸಿಡಿಲು ಬಡಿದಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ, ಕಂದಾಯ ನಿರೀಕ್ಷಕ ದೇವರಡ್ಡಿ ಗಾಣಧಾಳ ಭೇಟಿ ನೀಡಿ ಪರಿಶೀಲಿಸಿದರು. ಮುಖಂಡ ಸಿದ್ದನಗೌಡ ಮೂಡಲಗುಂಡ ಉಪಸ್ಥಿತರಿದ್ದರು.

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉಕ್ಕಿ ಹರಿದ ಹಳ್ಳಗಳು: ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿಚಿನ್ನದ ಗಣಿ ಸಮೀಪದ ಮೇದಿನಾಪುರ ಹಾಗೂ ಕೋಠಾ–ಗುಡದನಾಳ ಹಳ್ಳಗಳು ತುಂಬಿ ಹರಿದವು.

ಮೇದಿನಾಪುರದ ಹೊಲಗಳಿಗೆ ಹಳ್ಳದ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಳ್ಳದ ನೆಲಮಟ್ಟದ ಸೇತುವೆ ಮೇಲೆ ನೀರು ಬಂದ ಕಾರಣ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಕೋಠಾ ಗ್ರಾಮದ ಮಾರ್ಗವಾಗಿ ಬೇರೆ ಊರುಗಳಿಗೆ ತೆರಳಬೇಕಾಯಿತು. ಮುದಗಲ್‌ ಸಮೀಪದ ಬನ್ನಿಗೋಳ ಹಳ್ಳ ಉಕ್ಕಿ ಹರಿದ ಪರಿಣಾಮ ಸೇತುವೆ ಮುಳುಗಿದೆ.

ಧಾರಾಕಾರ ಮಳೆ: ಕೊಳೆಗೇರಿ ಪ್ರದೇಶ ಜಲಾವೃತ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಕೊಳೆಗೇರಿ ಪ್ರದೇಶಕ್ಕೆ ನೀರು ನುಗ್ಗಿದೆ. ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಪುರಸಭೆ ವ್ಯಾಪ್ತಿಯ ವಾರ್ಡ್‌ 15 ಮತ್ತು 5ರ ಕೊಳೆಗೇರಿ ಪ್ರದೇಶ ಬಹುತೇಕ ಜಲಾವೃತಗೊಂಡಿದೆ. ಒತ್ತುವರಿ ಮಾಡಿರುವ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ವಾರ್ಡ್ ಸಂಖ್ಯೆ 8ರ ಕೊರವರ ಓಣಿ ಸೇರಿದಂತೆ ಶಾಸಕರ ಸರ್ಕಾರಿ ಶಾಲೆ ಆವರಣ, ಅಗ್ನಿ ಶಾಮಕ ಠಾಣೆ ಬಳಿ ನೀರು ನಿಂತಿದೆ.

ತಾಲ್ಲೂಕಿನ ಗುಡದನಾಳ, ಯಲಗಲದಿನ್ನಿ, ನಂದಿಹಾಳ ಸೇರಿದಂತೆ ಬಹುತೇಕ ಹಳ್ಳ, ನಾಲಾಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಹೆಚ್ಚುವರಿ ನೀರು ಜಮೀನಿಗೆ ನುಗ್ಗಿದ್ದರಿಂದ ಬೆಳೆ ಹಾನಿ ಆಗಿದೆ.

‘ರಾತ್ರಿ ಸುರಿದ ಮಳೆಯಿಂದ ಕೊಳೆಗೇರಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹೊಲಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಬಂದು ಬೆಳೆ ಹಾನಿಯಾಗಿದೆ. ಸಮೀಕ್ಷೆ ನಡೆಸಿ ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗುವುದು’ ಎಂದು ಕಂದಾಯ ನಿರೀಕ್ಷಕ ರಾಮಕೃಷ್ಣ ತಿಳಿಸಿದ್ದಾರೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಅಬ್ಬರಿಸಿದ ಮಳೆ

24 ಗಂಟೆಗಳ ಅವಧಿಯಲ್ಲಿ ಲಿಂಗಸುಗೂರು ಪಟ್ಟಣದಲ್ಲಿ ಗರಿಷ್ಠ 98.4 ಮಿ.ಮೀ ಮಳೆ ಅಬ್ಬರಿಸಿದೆ. ಹಟ್ಟಿ ಚಿನ್ನದಗಣಿ ಪ್ರದೇಶದಲ್ಲಿ 89 ಮಿ.ಮೀ, ಗುರಗುಂಟಾದಲ್ಲಿ 53 ಮಿ.ಮೀ, ಮುದಗಲ್‌ನಲ್ಲಿ 23 ಹಾಗೂ ಸಿರವಾರದಲ್ಲಿ 35 ಮಿ.ಮೀ ಮಳೆ ಸುರಿದಿದೆ.

ರಾಯಚೂರು, ಸಿರವಾರ, ಮಸ್ಕಿ ಹಾಗೂ ಮಾನ್ವಿಯಲ್ಲಿ ಸಾಧಾರಣ ಮಳೆಯಾಗಿದೆ.

ಆಗಸ್ಟ್ 18ರಂದು ಭಾನುವಾರ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹವಾಮಾನ ಘಟಕದ ಮುಖ್ಯಸ್ಥರು ತಿಳಿಸಿದ್ದಾರೆ.

ಶಿಕ್ಷಕನ ಜೀವ ಉಳಿಸಿದ ಮಹಿಳೆ

ಲಿಂಗಸುಗೂರು ತಾಲ್ಲೂಕಿನ ರೋಡಲ್‌ಬಂಡ ಗ್ರಾಮದ ಹೊರವಲಯದಲ್ಲಿ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಮಹಿಳೆಯೊಬ್ಬರು ಉಟ್ಟ ಸೀರೆ ಬಿಚ್ಚಿ ಕೊಟ್ಟು ಜೀವ ಉಳಿಸಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಖಾಸಗಿ ಶಾಲೆಯ ಶಿಕ್ಷಕರು ಸ್ನಾನಕ್ಕೆ ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದರು. ಇದನ್ನು ನೋಡಿದ ಗ್ಯಾನಮ್ಮ ಕನಕೇರಿ ಮಾನದ ಹಂಗು ತೊರೆದು ಜೀವ ಉಳಿಸಿ ಸಾಹಸ ಮೆರೆದಿದ್ದಾರೆ. ಇನ್ನೊಬ್ಬ ಯುವಕ ನೀರಿಗೆ ಜಿಗಿದು ಅವರ ರಕ್ಷಣೆ ಮಾಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT