ಗುರುವಾರ , ಮೇ 6, 2021
23 °C

ರಸಗೊಬ್ಬರ ದರ ಏರಿಕೆ ವಿರುದ್ಧ 26ರಂದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಸಗೊಬ್ಬರ, ಇಂದನ ದರ ಏರಿಕೆ ಖಂಡಿಸಿ ಏಪ್ರಿಲ್ 26ರಂದು ಬೆಳಿಗ್ಗೆ 11ಕ್ಕೆ ರಾಜ್ಯದ ಎಲ್ಲಾ ಸಂಸದರು ಹಾಗೂ ಕೇಂದ್ರ ಸಚಿವ ಸದಾನಂದಗೌಡ ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಚೆಗೆ ಶೇ 45 ರಷ್ಟು ರಸಗೊಬ್ಬರ ಬೆಲೆ ಏರಿಕೆ ಮಾಡುವ ಮೂಲಕ ರೈತರನ್ನು ಕೃಷಿಯಿಂದ ವಿಮುಖರಾಗಲು ಮಾಡಲು ಹೊರಟಿದೆ. ಅಂತರರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯ ನೆಪದಲ್ಲಿ ಪೆಟ್ರೋಲ್, ಡಿಸೇಲ್, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು ಖಂಡನೀಯ. ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ ಎಂಬೆಲ್ಲ ಘೋಷಣೆ ಮಾಡಿ ಈಗ ಬೆಲೆ ನಿಯಂತ್ರಣಕ್ಕೆ ಮುಂದಾಗದೇ ರೈತ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಕೋವಿಡ್ ಹಿನ್ನೆಲೆಯಲ್ಲಿ ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷರ ಹಾಗೂ ಕೆಲವೇ ಕೆಲವರ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಎಪ್ರಿಲ್ 26 ಲೋಕಸಭಾ ಸದಸ್ಯರ ಕಚೇರಿ ಮುಂದೆ ಪಿಕೆಟಿಂಗ್ ನಡೆಸಿ ಸಂಸದರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸರ್ಕಾರ ರೈತರ ಪಂಪ್‍ಸೆಟ್‍ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ತೀರ್ಮಾನ ತೆಗೆದುಕೊಂಡಿದ್ದು ಆದರೆ ಕೇವಲ 2ರಿಂದ 3ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಸೋಲಾರ್ ವಿದ್ಯುತ್ ತಯಾರಿಸಿದರೂ ಸೂಕ್ತ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. 10 ತಾಸು ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಪರಿವರ್ತಕ ದುರಸ್ತಿ ಹಾಗೂ ಅಳವಡಿಕೆ ವಿಳಂಬವಾಗುತ್ತಿದೆ. ವಿದ್ಯುತ್ ಕಂಬಗಳ ಶಿಥಿಲಾವ್ಯಸ್ಥೆಯಲ್ಲಿರುವ ಕಂಬಗಳನ್ನು ಬದಲಾವಣೆ ಮಾಡಬೇಕು, ವಿದ್ಯುತ್ ಲೈನ್‍ಗಳು ಜೋತುಬಿದ್ದಿರುವುದ ಸರಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಸ್ಕಾಂಗಳ ಕಚೇರಿ ಎದುರು ಆಯಾ ಜಿಲ್ಲೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸಂಘದ ಪದಾಧಿಕಾರಿ ಬೂದಯ್ಯಸ್ವಾಮಿ, ಮಲ್ಲನಗೌಡ ದಿನ್ನಿ, ಬಿ.ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.