ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಹಿಂಗಾರಿ ಬಿತ್ತನೆಗೆ ತಯಾರಿ: ಜೋಳ, ಕಡಲೆ ಬೀಜಕ್ಕಾಗಿ ರೈತರ ಮೊರೆ

Last Updated 21 ಸೆಪ್ಟೆಂಬರ್ 2019, 19:44 IST
ಅಕ್ಷರ ಗಾತ್ರ

ರಾಯಚೂರು:ಜಿಲ್ಲೆಯಾದ್ಯಂತ ಸುರಿದ ಉತ್ತಮ ಮಳೆಯಿಂದ ಪುಳಕೀತರಾಗಿರುವ ಜಿಲ್ಲೆಯ ರೈತರು ಹಿಂಗಾರಿ ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ!

ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕುಗಳ ರೈತರು ಈಗಾಗಲೇ ರೈತ ಸಂಪರ್ಕ ಕೇಂದ್ರಗಳ ಎದುರು ಜಮಾಯಿಸುತ್ತಿದ್ದು, ಕಡಲೆ ಹಾಗೂ ಹೈಬ್ರೀಡ್‌ ಜೋಳದ ಬೀಜಗಳನ್ನು ಒದಗಿಸುವಂತೆ ಕೇಳುತ್ತಿದ್ದಾರೆ. ಆದರೆ, ಟೆಂಡರ್‌ ಪ್ರಕ್ರಿಯೆಯಲ್ಲಿ ಆಗಿರುವ ತೊಂದರೆಯಿಂದ ಬೀಜಗಳ ಪೂರೈಕೆ ವಿಳಂಬವಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಸೆಪ್ಟೆಂಬರ್‌ 20 ರಿಂದ ಅಕ್ಟೋಬರ್‌ 20 ಹಿಂಗಾರು ಬಿತ್ತನೆಗೆ ಉತ್ತಮ ಕಾಲ ಎಂದು ಪರಿಗಣಿಸಲಾಗುತ್ತದೆ. ಹಂಗಾಮು ಆರಂಭವಾಗುವ ಮೊದಲೇ ರೈತರಿಗೆ ಬಿತ್ತನೆ ಬೀಜಗಳು ಮತ್ತು ಗೊಬ್ಬರ ಪೂರೈಕೆ ಆಗಬೇಕಿದೆ.ಇನ್ನೊಂದು ವಾರದಲ್ಲಿ ಜಿಲ್ಲೆಯಾದ್ಯಂತ ಬಿತ್ತನೆ ಬೀಜಗಳ ಬೇಡಿಕೆ ಇನ್ನೂ ಹೆಚ್ಚಳವಾಗಲಿದೆ.

‘ಕರ್ನಾಟಕ ಬೀಜಗಳ ನಿಗಮ ಹಾಗೂ ಕೇಂದ್ರ ಬೀಜಗಳ ನಿಗಮದಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಇದೆ. ಈ ಬಗ್ಗೆ ಅಂಕಿ–ಅಂಶಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ. ಟೆಂಡರ್‌ ಕರೆದು ದರ ನಿಗದಿ ಮಾಡುವುದು ವಿಳಂಬವಾಗಿದೆ. ಬಹುತೇಕ ಶನಿವಾರ ಸಂಜೆ ತಾಂತ್ರಿಕ ಸಮಸ್ಯೆ ಪರಿಹಾರಗಲಿದೆ ಎಂದು ಬೆಂಗಳೂರಿನಿಂದ ತಿಳಿಸಿದ್ದಾರೆ. ಎರಡು ದಿನಗಳಲ್ಲಿ ರಾಜ್ಯಮಟ್ಟದಲ್ಲಿಯೇ ದರ ನಿಗದಿಯಾದರೆ, ಬೀಜಗಳನ್ನು ಪೂರೈಸುವುದಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಸಿಂಧನೂರು ಮತ್ತು ರಾಯಚೂರಿನ ಗೋದಾಮುಗಳಲ್ಲಿ ಬೀಜಗಳ ಸಂಗ್ರಹ ಇರುವ ಬಗ್ಗೆ ನಿಗಮಗಳಿಂದ ಮಾಹಿತಿ ಪಡೆದಿದ್ದೇವೆ. ರೈತರ ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ಮಾನ್ವಿ ಭಾಗದ ರೈತರು ಹಿಂದಿನ ಎರಡೂ ಅವಧಿಯಲ್ಲೂ ಬಿತ್ತನೆ ಮಾಡದೆ ನಷ್ಟದಲ್ಲಿದ್ದಾರೆ. ಸದ್ಯ ಕಡಲೆ ಬೀಜ ಮತ್ತು ಜೋಳದ ಬೀಜಗಳನ್ನು ಕೇಳುತ್ತಿದ್ದಾರೆ. ಸಕಾಲದಲ್ಲಿ ಒದಗಿಸದಿದ್ದರೆ, ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲೂ ಬೀಜಗಳು ಸಿಗುತ್ತಿಲ್ಲ. ಪರಿಸ್ಥಿತಿ ಕೈಮೀರುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಾಫ್ಟ್‌ವೇರ್‌ ಸಮಸ್ಯೆ ರೈತರಿಗೆ ಅರ್ಥವಾಗುವುದಿಲ್ಲ. ಹೇಗಾದರೂ ಮಾಡಿ ಬಿತ್ತನೆ ಬೀಜಗಳನ್ನು ಕೊಡಬೇಕು ಎನ್ನುವುದೊಂದರೆ ರೈತರ ಬೇಡಿಕೆಯಾಗಿದೆ’ ಎಂದು ರೈತ ಹೋರಾಟಗಾರ ಲಕ್ಷ್ಮಣ ಕಡಗಂದೊಡ್ಡಿ ಹೇಳಿದರು.

ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಿದ್ದ ಹತ್ತಿ, ಸೂರ್ಯಕಾಂತಿ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಸಿಗದೆ ಕಾಯಿ ಕಟ್ಟಿಲ್ಲ. ಹೀಗಾಗಿ ರಾಯಚೂರು, ಮಾನ್ವಿ ತಾಲ್ಲೂಕುಗಳ ಬಹುತೇಕ ರೈತರು ಕಾಯಿಕಟ್ಟದ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ಹಿಂಗಾರಿಯಲ್ಲಿ ಕಡಲೆ ಅಥವಾ ಜೋಳ ಬಿತ್ತನೆ ಮಾಡುವುದಕ್ಕೆ ಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT