ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ಮಧ್ಯೆ ರಾಯಚೂರಿನಲ್ಲಿ ಮುಂಗಾರು ಪೂರ್ವ ತಯಾರಿ ಚುರುಕು

ರೈತರ ಅಗತ್ಯಕ್ಕೆ ತಕ್ಕಂತೆ ಬಿತ್ತನೆಬೀಜ, ರಸಗೊಬ್ಬರ ದಾಸ್ತಾನಿಗೆ ಕ್ರಮ
Last Updated 13 ಮೇ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಲಾಕ್‌ಡೌನ್‌ ಕಾರಣದಿಂದ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಕೊಯ್ಲು ಇನ್ನೂ ಸಂಪೂರ್ಣ ಮುಗಿದಿಲ್ಲ. ಆದರೆ ಕೊಯ್ಲು ಮುಗಿಸಿದ ಬಹುತೇಕ ರೈತರು ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡುವುದು ಚುರುಕಾಗಿದೆ.

ಮುಖ್ಯವಾಗಿ ಮಳೆ ಅವಲಂಬಿತ ಪ್ರದೇಶದ ರೈತರು ಬಹುತೇಕ ಭೂಮಿ ಹದ ಮಾಡಿಕೊಂಡಿದ್ದಾರೆ. ಹತ್ತಿ ಬಿತ್ತನೆ ಮಾಡಿದ್ದ ಕೆಲವರು ರೈತರು ಮಾತ್ರ ಕೊಯ್ಲನ್ನು ಮಾರುಕಟ್ಟೆಗೆ ತರುವ ಪ್ರಕ್ರಿಯೆಯಲ್ಲಿ ಇದ್ದಾರೆ. ಮಾನ್ವಿ, ರಾಯಚೂರು, ದೇವದುರ್ಗ, ಲಿಂಗಸುಗೂರು, ಸಿರವಾರ ತಾಲ್ಲೂಕುಗಳ ಅರ್ಧಭಾಗ ಹಾಗೂ ಕಾಲುವೆ ಕೊನೆಭಾಗದ ರೈತರು ಕೃಷಿಗೆ ಮಳೆಯನ್ನೇ ಅವಲಂಬಿಸಿದ್ದು, ಹೊಸ ನಿರೀಕ್ಷೆಯೊಂದಿಗೆ ಮುಂಗಾರಿನತ್ತ ದೃಷ್ಟಿ ನೆಟ್ಟಿದ್ದಾರೆ.

‘ಕಳೆದ ವರ್ಷ ಮುಂಗಾರು ತಡವಾಗಿತ್ತು. ಇದರಿಂದಾಗಿ ಹೆಸರು, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆಗಳನ್ನು ಸಕಾಲಕ್ಕೆ ಬಿತ್ತನೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ವರ್ಷ ಜೂನ್‌ನಲ್ಲೇ ಮಳೆಯಾಗುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡು ಜಮೀನು ತಯಾರಿ ಮಾಡಿಕೊಂಡಿದ್ದೇವೆ. ಸಮೃದ್ಧವಾಗಿ ಮಳೆ ಸುರಿದರೆ ಮಾತ್ರ ರೈತರು ಸಂತೋಷದಿಂದ ಇರುತ್ತಾರೆ. ಇದರಿಂದ ಇಡೀ ನಾಡು ಅಭಿವೃದ್ಧಿ ಸಾಧ್ಯವಾಗುತ್ತದೆ’ ಎನ್ನುತ್ತಾರೆ ಕಡಗಂದೊಡ್ಡಿ ಗ್ರಾಮ ರೈತ ಲಕ್ಷ್ಮಣಗೌಡ.

ಲಾಕ್‌ಡೌನ್‌ ಸಂಕಷ್ಟ ಇದ್ದರೂ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಲೇ ಪರಿಹಾರ ಮಾಡುವಂತೆ ಸರ್ಕಾರವು ಆಯಾ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅಗತ್ಯವಾಗುವ ನೆರವುಗಳನ್ನು ಈಗಿನಿಂದಲೇ ಹೊಂದಿಸಿಕೊಳ್ಳುವುದರ ಕಡೆಗೆ ಜಿಲ್ಲೆಯ ಕೃಷಿ ಇಲಾಖೆ ಗಮನ ಹರಿಸಿದೆ.

ಮುಂಗಾರು ಹಂಗಾಮಿನಲ್ಲಿ 69,400 ಟನ್‌ ಯೂರಿಯಾ, 23,255 ಟನ್‌ ಡಿಎಪಿ, 7,887 ಟನ್‌ ಎಂಒಪಿ, 68,850 ಟನ್‌ ಕಾಂಪ್ಲೆಕ್ಸ್‌ ಹಾಗೂ 2,525 ಎಸ್‌ಎಸ್‌ಪಿ ರಾಸಾಯನಿಕ ಗೊಬ್ಬರ ಪೂರೈಸುವಂತೆ ಜಿಲ್ಲಾ ಕೃಷಿ ಇಲಾಖೆಯಿಂದ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ 93,880 ಮೆಟ್ರಿಕ್‌ ಟನ್‌ ರಾಸಾಯನಿಕ ಗೊಬ್ಬರ ಬಂದಿದೆ. ಅದರಲ್ಲಿ 5,310 ಮೆಟ್ರಿಕ್‌ ಟನ್‌ ರಾಸಾಯನಿಕ ಗೊಬ್ಬರವನ್ನು ವಿತರಿಸಲಾಗಿದೆ.

‘ಮಾನ್ವಿ ಸೇರಿದಂತೆ ಕೆಲವು ಭಾಗಗಳಲ್ಲಿ ರೈತರು ಜಮೀನುಗಳಲ್ಲಿ ಇನ್ನೂ ಹತ್ತಿ ಗಿಡಗಳನ್ನು ತೆಗೆದುಹಾಕಿಲ್ಲ. ಕೂಡಲೇ ಹತ್ತಿ ಗಿಡ ತೆಗೆದುಹಾಕಿ ಮುಂಗಾರಿಗೆ ತಯಾರಿಗೆ ಮಾಡಿಟ್ಟುಕೊಳ್ಳಬೇಕು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್‌ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT