ಸೋಮವಾರ, ಅಕ್ಟೋಬರ್ 18, 2021
23 °C
ರಾಂಪೂರ ಏತ ನೀರಾವರಿ ಯೋಜನೆ ಕಾಮಗಾರಿ ಅನುಷ್ಠಾನ ವೈಫಲ್ಯ ಆರೋಪ

ಜಮೀನಿನ ತೇವಾಂಶ ಹೆಚ್ಚಿಸಿದ ಬಸಿ ನೀರು: ರೈತರಿಗೆ ಸಂಕಷ್ಟ

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ನವಲಿ-ರಾಂಪೂರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆಯಡಿ ಅವೈಜ್ಞಾನಿಕವಾಗಿ ಅನುಷ್ಠಾನಗೊಂಡ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಮಣ್ಣಿನ ಏರಿ ಪ್ರದೇಶಗಳ ಸುತ್ತಮುತ್ತಲ ಜಮೀನುಗಳಲ್ಲಿ ಬಸಿ ನೀರಿನಿಂದ ತೇವಾಂಶ ಹೆಚ್ಚಳ ಆಗಿದ್ದು ರೈತ ಸಮೂಹ ಸಂಕಷ್ಟ ಎದುರಿಸುವಂತಾಗಿದೆ.

ನಾಲ್ಕು ವರ್ಷಗಳ ಹಿಂದೆ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಂದಿನಿಂದ ಇಂದಿನವರೆಗೂ ಸಮರ್ಪಕ ನೀರು ಹರಿಯದೆ ಹೋಗಿದ್ದರಿಂದ ಬಹುತೇಕ ರೈತರ ಜಮೀನಿಗೆ ನೀರು ಮರೀಚಿಕೆಯಾಗಿವೆ. ಅಲ್ಪಸ್ವಲ್ಪ ಪ್ರಮಾಣದ ನೀರಿನಿಂದ ಕೆಲ ಪ್ರದೇಶಗಳಲ್ಲಿ ಬಸಿನೀರು ಜಮೀನುಗಳಿಗೆ ಹರಿದು ಕೃಷಿ ಚಟುವಟಿಕೆಗೆ ತೊಂದರೆ ಆಗಿದೆ ಎಂದು ರೈತರು ದೂರಿದ್ದಾರೆ.

ಏತ ನೀರಾವರಿ ಯೋಜನೆ 20ನೇ ಕಿ.ಮೀ ದಿಂದ 27ನೇ ಕಿ.ಮೀ ಹಾಗೂ 2 ವಿತರಣಾ ನಾಲೆ, 14 ಮೈನರ್‍ ಕಾಲುವೆಗಳು ಒಂದು ಕೊನೆ ಭಾಗದ ವಿತರಣಾ ನಾಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕುಪ್ಪಿಗುಡ್ಡ, ಸರ್ಜಾಪುರ, ಕರಡಕಲ್ಲ, ಗುಡದನಾಳ, ಯಲಗಲದಿನ್ನಿ, ಹೊನ್ನಳ್ಳಿ, ದೇವರಭೂಪುರ, ಯರಡೋಣಿ, ಮೇದಿನಾಪುರ ಸೇರಿದಂತೆ ಗ್ರಾಮೀಣ ರೈತರು ಕಳಪೆ ಕಾಮಗಾರಿ ತಡೆಯುವಂತೆ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪೂರ್ವ ಕಾಲುವೆ 27ನೇ ಕಿ.ಮೀ ವ್ಯಾಪ್ತಿಯ ಕೊನೆಯ ಭಾಗದ ವಿತರಣಾ ನಾಲೆ (ಟೇಲ್‍ ಎಂಡ್‍ ಡಿಸ್ಟ್ರಿಬ್ಯೂಟರಿ) 1.400ಕಿ.ಮೀ ಅಕ್ವಾಡೆಕ್ಟ್‌, ಮಣ್ಣಿನ ಏರಿ (ಎಂಬ್ಯಾಕ್‍ಮೆಂಟ್‍) ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ನೀರಿನ ಬಸಿಯಿಂದ ಜಮೀನು ಉಳುಮೆ ಮಾಡಲು ಬಾರದಂತಾಗಿದೆ.  ಕೆಲ ಕಡೆಗಳಲ್ಲಿ ಹೊಲಗಾಲುವೆಗಳನ್ನು ಅರ್ಧಕ್ಕೆ ಬಿಟ್ಟಿದ್ದರಿಂದ ಹೆಚ್ಚುವರಿ ನೀರು ಜಮೀನಿಗೆ ಹರಿಯುತ್ತಿದ್ದರೂ ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಸರ್ಜಾಪುರ ಸಮೀಪದ ಅಕ್ವಾಡೆಕ್ಟ್‌ನ ಎಂಬ್ಯಾಕ್‍ಮೆಂಟ್‍ ಬಳಿ ಭಾರಿ ಪ್ರಮಾಣದಲ್ಲಿ ಬಸಿ ನೀರು ಹರಿದು ಜಮೀನು ಪಾಳು ಬಿದ್ದಿದೆ. ಯರಡೋಣ ಬಳಿ ಹೊಲಗಾಲುವೆ ಅರ್ಧಕ್ಕೆ ಮೊಟಕುಗೊಳಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಹೆಚ್ಚುವರಿ ನೀರು ಜಮೀನಿಗೆ ಹರಿದು ಬೆಳೆಗಳು ಹಾಳಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ರೈತರಾದ ಸದ್ಯೋಜಾತಪ್ಪ ಸಾಹುಕಾರ, ಏಕಅಮರಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಮಾಹಿತಿ ನೀಡಿದ್ದು ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗುವುದು. ಅನುದಾನ ಬಿಡುಗಡೆ ಮಾಡಿದ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು