ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಕಲಬೆರಕೆ ರಸಗೊಬ್ಬರ– ಗುಣಮಟ್ಟ ಪರೀಕ್ಷೆ ವರದಿಗೆ ಪಟ್ಟು

ಅಧಿಕಾರಿಗಳಿಂದ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ರೈತರ ಆರೋಪ
ಮಂಜುನಾಥ ಎನ್‌.ಬಳ್ಳಾರಿ
Published : 17 ಸೆಪ್ಟೆಂಬರ್ 2024, 7:34 IST
Last Updated : 17 ಸೆಪ್ಟೆಂಬರ್ 2024, 7:34 IST
ಫಾಲೋ ಮಾಡಿ
Comments

ಕವಿತಾಳ: ಸಮೀಪದ ಮಲ್ಲದಗುಡ್ಡ ಕ್ಯಾಂಪ್‌ನಲ್ಲಿ ಕಲಬೆರಕೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈಚೆಗೆ ಅಂಗಡಿ ಮೇಲೆ ದಾಳಿ ನಡೆಸಿದ್ದ ಕೃಷಿ ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿ ರಸಗೊಬ್ಬರ ಮಾದರಿಯನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಈ ನಡುವೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸುತ್ತಿರುವ ರೈತರು ರಸಗೊಬ್ಬರ ಚೀಲ ಹೊತ್ತು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಶುಕ್ರವಾರ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ರಸಗೊಬ್ಬರ ಚೀಲದೊಂದಿಗೆ ಆಗಮಿಸಿದ ರೈತರು ಗುಣಮಟ್ಟ ಪರೀಕ್ಷೆಗೆ ಸ್ವತಃ ತಾವು ತೆಗೆದುಕೊಂಡು ಹೋಗುವುದಾಗಿ ಮಾದರಿ ತೆಗೆದುಕೊಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

‘ಈಗಾಗಲೇ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ದಾಳಿ ಸಂದರ್ಭದಲ್ಲಿ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದೇ ಅಂಗಡಿಯಲ್ಲಿ ಖರೀದಿಸಿದ ಅದೇ ಬ್ಯಾಚ್‌ನ ರಸಗೊಬ್ಬರವನ್ನು ಮತ್ತೊಮ್ಮೆ ಗುಣಮಟ್ಟ ಪರೀಕ್ಷೆಗೆ ಕಳುಹಿಸಲು ಅವಕಾಶವಿಲ್ಲ’ ಎಂದು ಸಹಾಯಕ ಕೃಷಿ ಅಧಿಕಾರಿ ಮಾರುತಿ ನಿರಾಕರಿಸಿದರು.

ಮಲ್ಲದಗುಡ್ಡ ಕ್ಯಾಂಪ್‌ನ ಶ್ರೀನಿವಾಸ ಟ್ರೇಡರ್ಸ್‌ನಲ್ಲಿ ಆರ್‌ಸಿಎಫ್‌ನ ಡಿಎಪಿ ರಸಗೊಬ್ಬರ ನಕಲಿ ಎಂದು ರೈತರು ಆರೋಪಿಸಿದ ಹಿನ್ನೆಲೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಗುರುನಾಥ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.

‘ಮೂರು ಜಿಲ್ಲೆಗಳಿಂದ ವಿವಿಧ ರಸಗೊಬ್ಬರ ಮಾದರಿಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಪ್ರಯೋಗಾಲಯದ ವರದಿ ಬರಲು ಒಂದು ತಿಂಗಳು ಸಮಯ ಬೇಕಾಗುತ್ತಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಾಯಕ ಕೃಷಿ ಅಧಿಕಾರಿ ಮಾರುತಿ ಹೇಳಿದರು.

‘ಡಿಎಪಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದು ಕೆಲವು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ಆದರೆ ಈ ಅಂಗಡಿಯಲ್ಲಿ ಖರೀದಿಸಿದ ಗೊಬ್ಬರ ಕಳಪೆ ಗುಣಮಟ್ಟದಿಂದ ಕೂಡಿದ್ದು ನಕಲಿಯಾಗಿದೆ’ ಎಂದು ರೈತರಾದ ಬಸವರಾಜ ಮರಕಂದಿನ್ನಿ ಮತ್ತು ಸುರೇಶ ಮಲ್ಲದಗುಡ್ಡ ಕ್ಯಾಂಪ್‌ ದೂರಿದರು.

‘ಸರ್ಕಾರದಿಂದ ಡಿಎಪಿ ಪೂರೈಕೆಯಾಗುತ್ತಿಲ್ಲ. ಫೆಡರೇಷನ್ ಮತ್ತು ಬೀಜ ನಿಗಮದಲ್ಲಿ ಲಭ್ಯವಿಲ್ಲ. ಕಲಬೆರಕೆ ರಸಗೊಬ್ಬರ ಮಾರಾಟ ಮಾಡುವ ಮಾಫಿಯಾ ಇದೆ. ಪ್ರತಿ ವರ್ಷ ಒಂದು ಸ್ಥಳದಿಂದ ಅದು ಪೂರೈಕೆಯಾಗುತ್ತಿದೆ. ಈಗ ಕಲಬುರಗಿ ಮತ್ತು ವಿಜಯಪುರದಿಂದ ಪೂರೈಕೆಯಾಗುವ ಸಂಶಯ ವ್ಯಕ್ತವಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಗೊಬ್ಬರ ವ್ಯಾಪಾರಿಯೊಬ್ಬರು ಹೇಳುತ್ತಾರೆ.

Quote - ಪ್ರಯೋಗಾಲಯದ ವರದಿ ತರಿಸಲಾಗುವುದು. ಡಿಎಪಿ ಜತೆ ಯೂರಿಯಾ ಖರೀದಿಗೆ ರೈತರನ್ನು ಒತ್ತಾಯಿಸುವ ಕುರಿತು ದೂರು ನೀಡಿದಲ್ಲಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಮಾರುತಿ ಸಹಾಯಕ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಕವಿತಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT