ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು| ಅಕ್ರಮ ನೀರು ಬಳಕೆ ತಡೆಗೆ ಕಠಿಣ ಕ್ರಮ: ಜಿಲ್ಲಾಧಿಕಾರಿ

Last Updated 22 ಜನವರಿ 2020, 16:11 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತುಂಗಭದ್ರ ಎಡದಂಡೆ ಕಾಲುವೆಯ ಮೇಲ್ಬಾಗದಲ್ಲಿ ಅಕ್ರಮವಾಗಿ ನೀರು ಕಬಳಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರೈತ ನಿಯೋಗದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಂಗಭದ್ರ ಎಡದಂಡೆ ಕಾಲುವೆ ಮೇಲ್ಬಾಗದಲ್ಲಿ ಅಕ್ರಮವಾಗಿ ನೀರು ಪಡೆಯುವುದನ್ನು ತಡೆಗಟ್ಟಲು ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ಗೆ ಕಾಲುವೆ ಮೇಲೆ ನಿಗಾವಹಿಸಬೇಕು. ಇಲ್ಲದಿದ್ದರೆ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಕ್ರಮ ನೀರು ಕಬಳಿಕೆದಾರರ ವಿರುದ್ಧ ರೌಡಿ ಶೀಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮೊಕದ್ದಮೆ ಹೂಡಬೇಕು. ಅಕ್ರಮವಾಗಿ ನೀರು ಕಬಳಿಕೆ ಹೆಚ್ಚಾಗಿರುವ ಕಾರಣ ಸಿಂಧನೂರಿನ ಕೆಳಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಲಭಿಸುತ್ತಿಲ್ಲ. ಇದರಿಂದ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಒಟ್ಟಾರೆ ಎಡ ಮತ್ತು ಬಲ ಭಾಗದಲ್ಲಿ ಅಕ್ರಮ ನೀರು ಬಳಕೆ ತಡೆಯಬೇಕಾಗಿದೆ. ಬಲ ಭಾಗದಲ್ಲಿ ಬೆಳೆ ತಿರುಗುವಿಕೆ ಬಗ್ಗೆ ಕಂದಾಯ ಅಧಿಕಾರಿಗಳು ಕಾಲುವೆಗಳಿಗೆ ಭೇಟಿ ನೀಡಿ ನೀರು ಹರಿಸುವುದರ ಬಗ್ಗೆ ನಿಗಾ ವರದಿ ನೀಡಬೇಕು. ಮೇಲ್ಬಾಗದಲ್ಲಿ ಅಕ್ರಮವಾಗಿ ನೀರು ಕಬಳಿಸುತ್ತಿರುವವರ ವಿರುದ್ಧ ರೈತರು ದೂರು ನೀಡಿದಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಆಯಾ ಪೊಲೀಸ್ ಠಾಣೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಎಡಭಾಗದಲ್ಲಿ ರೈತರು ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಿಂದ ನೀರು ಪಡೆಯುತ್ತಿದ್ದಾರೆ. ಆದರೂ ಕಾಲುವೆಗಳಿಗೆ ಅಕ್ರಮವಾಗಿ ಪೈಪ್ ಅಳವಡಿಸಿ ನೀರು ಕಬಳಿಸುತ್ತಿರುವುದು ಕಂಡುಬಂದಲ್ಲಿ ಅಂತಹ ರೈತರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮಾತನಾಡಿ, ಮಾನ್ವಿ ತಾಲೂಕಿನ ಕೆಳಭಾಗಕ್ಕೆ ಸಾವಿರ ಕ್ಯುಸೆಕ್‌ ನೀರು ಹರಿಸಬೇಕು. ಭತ್ತ, ಜೋಳ, ಮೆಣಸಿನಕಾಯಿ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ. ನೀರಿನ ಪ್ರಮಾಣ ನೋಡಿಕೊಂಡು ಸಾವಿರ ಕ್ಯುಸೆಕ್‌ ನೀರು ಹರಿಸಿ ರೈತರ ಬೆಳೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲೀಪಾಟೀಲ ಮಾತನಾಡಿ, ಮಾನ್ವಿ ತಾಲ್ಲೂಕಿನ ಕೆಳಭಾಗಕ್ಕೆ ಸಾವಿರ ಕ್ಯುಸೆಕ್‌ ನೀರು ಹರಿಸದಿದ್ದಲ್ಲಿ ಮೆಣಸಿನಕಾಯಿ, ಜೋಳ, ಭತ್ತ ಇನ್ನಿತರ ಬೆಳೆಗಳು ಸಂಪೂರ್ಣ ಹಾನಿಯಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ ಎಂದರು.

ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಠಗಿ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ದುರುಗೇಶ್, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಮಾಜಿ ಶಾಸಕ ಹಂಪಯ್ಯ ನಾಯಕ, ರೈತ ಮುಖಂಡ ಹರವಿ ನಾಗನಗೌಡ ಸೇರಿದಂತೆ ಹಲವು ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT