ಭಾನುವಾರ, ಆಗಸ್ಟ್ 25, 2019
26 °C

ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯ

Published:
Updated:
Prajavani

ರಾಯಚೂರು: ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಳೆ ವಿಮೆ ಹಣ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಸದಸ್ಯರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಪ್ರದೇಶಕ್ಕೆ ದಿನದ 24ಗಂಟೆಯೂ ವಿದ್ಯುತ್ ಸೌಲಭ್ಯ ನೀಡಬೇಕು. ವೈಟಿಪಿಎಸ್ ಸಂತ್ರಸ್ತರಿಗೆ ಉದ್ಯೋಗ ನೀಡಬೇಕು. ಯರಗೇರಾ ಭಾಗದ ಗ್ರಾಮಗಳ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಸಬೇಕು. ಸತತ ಬರಗಾಲ ಎದುರುತ್ತಿರುವ ಗ್ರಾಮಗಳಿಗೆ ಏತ ನೀರಾವರಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನಲ್ಲಿ ಕಂಪೆನಿಗಳಿಗೂ ನೀರು ಪೂರೈಕೆ ಮಾಡುತ್ತಿರುವುದನ್ನು ಸ್ಥಗಿತಗೊಳಿಸಿ, ನಗರಕ್ಕೆ ಮಾತ್ರ ನೀರು ಪೂರೈಕೆಯೆ ವ್ಯವಸ್ಥೆ ಮಾಡಬೇಕು. ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್‌ನಿಂದ ತಲಾ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು. ವಡ್ಲೂರು ಗ್ರಾಮದ ಆಸ್ಪತ್ರೆ ಶೀಘ್ರ ಆರಂಭಿಸಬೇಕು. ಬಾಪೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಧ್ಯಕ್ಷ ವಾಸುದೇವ ಮೇಟಿ, ಜಯಶ್ರೀ, ಚುಣಪ್ಪ ಪೂಜಾರಿ, ಗಂಗಾಧರ ಮೇಟಿ, ಚಂದ್ರಗೌಡ ಪಾಟೀಲ್. ರಾಘವೇಂದ್ರ ನಾಯಕ, ಲಿಂಗಪ್ಪ ಧಾರವಾಡ, ಬಸವರಾಜ ಗದಗ ನೇತೃತ್ವ ವಹಿಸಿದ್ದರು.

Post Comments (+)