ಭೂ ಸ್ವಾಧೀನ ಕಾಯ್ದೆ ಜಾರಿ ವಿರೋಧಿಸಿ ಹೆದ್ದಾರಿ ತಡೆ

ಬುಧವಾರ, ಜೂನ್ 19, 2019
29 °C
ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿ ರೈತ ಸಂಘಟನೆಯಿಂದ ಪ್ರಭಟನೆ

ಭೂ ಸ್ವಾಧೀನ ಕಾಯ್ದೆ ಜಾರಿ ವಿರೋಧಿಸಿ ಹೆದ್ದಾರಿ ತಡೆ

Published:
Updated:
Prajavani

ರಾಯಚೂರು: ರಾಜ್ಯದಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿಗೊಳಿಸುವುದನ್ನು ವಿರೋಧಿಸಿ ತಾಲ್ಲೂಕಿನ ವಡ್ಲೂರು ಕ್ರಾಸ್‌ನಲ್ಲಿ ಹೆದ್ದಾರಿ ಸಂಚಾರವನ್ನು ಸ್ಥಗಿತಗೊಳಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಬಣ) ಸದಸ್ಯರು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ ಮೇಟಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ವಿವಿಧ ಕೈಗಾರಿಕೆಗಳ ಸ್ಥಾಪನೆಗಾಗಿ ರೈತರು ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಸೂಕ್ತ ಪರಿಹಾರವನ್ನು ಒದಗಿಸಿಲ್ಲ. ಸಂತ್ರಸ್ತರಿಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರವು ಇದೇ ರೀತಿ ಭೂಸ್ವಾಧೀನ ಕಾಯ್ದೆ ಜಾರಿಗೊಳಿಸಲು ಮುಂದಾದಾಗ ಕೆಲವು ರಾಜ್ಯಗಳು ವಿರೋಧಿಸಿದ್ದವು. ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾಗಳಿಗೆ ನೀಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಮ್ಮಿಶ್ರ ಸರ್ಕಾರ ಸದನದಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ಭೂ ಸ್ವಾಧೀನ ಮಸೂದೆ ಅಂಗೀಕರಿಸಿದೆ. ಅದರಲ್ಲಿ ರೈತರಿಗೆ ಸಮಸ್ಯೆಯಾಗುವಂತಹ ಸಾಕಷ್ಟು ಅಂಶಗಳಿವೆ. ರೈತರು ತಮ್ಮ ಹಕ್ಕು ಕಳೆದುಕೊಳ್ಳುವರು. ಯಾವುದೇ ಕಾರಣಕ್ಕೂ ಮಸೂದೆ ಜಾರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ರಾಯಚೂರು–ಹೈದರಾಬಾದ್‌ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ 10 ಕಿಲೋ ಮೀಟರ್‌ ಸುತ್ತುವರಿದು ವಾಹನಗಳು ಸಂಚರಿಸಬೇಕಾಯಿತು. ಪ್ರತಿಭಟನೆಯ ಮುನ್ಸೂಚನೆ ಇಲ್ಲದೆ ಬರುವ ಬೈಕ್‌ ಸವಾರರು ಮತ್ತು ಇತರೆ ವಾಹನ ಸವಾರರು ಪರದಾಡಿಕೊಂಡು ವಾಪಸಾಗುತ್ತಿದ್ದ ದೃಶ್ಯ ಕಂಡುಬಂತು.

ಕಾರು ಮತ್ತು ಬೈಕ್‌ಗಳಿಗೆ ಮಾತ್ರ ಪರ್ಯಾಯ ರಸ್ತೆ ಮಾರ್ಗ ಕಲ್ಪಿಸಲಾಗಿತ್ತು. ಲಾರಿಗಳು ಮತ್ತು ಬಸ್‌ ಸಂಚಾರ ಸಾಧ್ಯವಾಗಲಿಲ್ಲ. ಬೈಪಾಸ್‌ ಮಾರ್ಗದುದ್ದಕ್ಕೂ ಲಾರಿಗಳು ಸಾಲುಗಟ್ಟಿ ನಿಂತಿದ್ದವು.

ಉಪವಿಭಾಗಾಧಿಕಾರಿ ಶಿಲ್ಪಾ ಶರ್ಮಾ ಅವರು ರೈತರ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಚರ್ಚೆ ನಡೆಸಿದರು. ರೈತರ ಸಮಸ್ಯೆಗಳನ್ನು ಆಲಿಸಲು ಜಿಲ್ಲಾಧಿಕಾರಿಗಳು ಪ್ರತ್ಯೇಕ ಸಭೆ ಏರ್ಪಡಿಸಬೇಕು ಎನ್ನುವ ಬೇಡಿಕೆಯನ್ನು ಪ್ರತಿಭಟನಾಕಾರರು ಮುಂದಿಟ್ಟರು. ಈ ಬಗ್ಗೆ ಅಗತ್ಯ ಕ್ರಮಕ್ಕೆ ಕೋರಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದು ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿದರು.

ರೈತ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಉಮಾದೇವಿ, ಕೃಷ್ಣ, ಬಸವರಾಜ, ಹನುಮೇಶ, ನರಸಿಂಹಲು ಬಾಪೂರು, ಸಂಘದ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡಿ, ಕೆ.ವೈ. ಬಸವರಾಜರೆಡ್ಡಿ, ಶರಣಪ್ಪ ಮಳ್ಳಿ, ಬಸನಗೌಡ ಪಾಟೀಲ, ತಾಯಪ್ಪ, ನಾಗರಾಜ ಕಾಜಿನಗೌಡರ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !