ಕಾಲುವೆ ಕೊನೆಭಾಗದ ನೀರಿಗಾಗಿ 12 ರಂದು ರಸ್ತೆ ಸಂಚಾರ ತಡೆ

7

ಕಾಲುವೆ ಕೊನೆಭಾಗದ ನೀರಿಗಾಗಿ 12 ರಂದು ರಸ್ತೆ ಸಂಚಾರ ತಡೆ

Published:
Updated:

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗಕ್ಕೆ ನೀರು ಒದಗಿಸಲು ಒತ್ತಾಯಿಸಿ ಸೆಪ್ಟೆಂಬರ್ 12 ರಂದು ಸಾತ್ ಮೈಲ್ ಕ್ರಾಸ್‌ನಲ್ಲಿ ರಸ್ತೆ ಸಂಚಾರ ತಡೆ ಮಾಡಲಾಗುತ್ತದೆ ಎಂದು ಕೊನೆಭಾಗದ ರೈತರ ಹೋರಾಟ ಸಮಿತಿಯ ಮುಖಂಡ ಸಿದ್ದನಗೌಡ ನೆಲಹಾಳ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಸಲಹಾ ಸಮತಿ ಸಭೆ ನಡೆದು ಎರಡು ತಿಂಗಳು ಸಮೀಪಿಸುತ್ತಿದ್ದರೂ, ಕೊನೆ ಭಾಗಕ್ಕೆ ನೀರು ತಲುಪಿಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

104 ಮೈಲ್‌ನಲ್ಲಿ ಗೇಜ್‌ ನಿರ್ವಹಣೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ. ಕಾಲುವೆಗೆ 3,800 ಕ್ಯುಸೆಕ್ಸ್‌ ನೀರು ಹರಿಸಿದರೂ ಕೊನೆ ಭಾಗಕ್ಕೆ ನೀರು ಬರಲಿಲ್ಲ. ಮುಂಗಾರು ಮುಗಿಸಿದರೂ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರು ಭರವಸೆಯಲ್ಲೇ ಕಾಲ ಕಳೆದರು ಎಂದು ದೂರಿದರು.

ರಾಯಚೂರು ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಸಚಿವ ವೆಂಕಟರಾವ್ ನಾಡಗೌಡ ಅನಧಿಕೃತ ನೀರಾವರಿ ಸಕ್ರಮ ಮಾಡಲು ಚರ್ಚಿಸಿದಂತಿದೆ. ನೀರು ಕಳ್ಳತನ ಮಾಡುವುದು ಎಲ್ಲರಿಗೆ ತಿಳಿದಿದ್ದರೂ, ಸಚಿವರು ಬಾಲಿಶದ ಹೇಳಿಕೆ ನೀಡುತ್ತಿದ್ದಾರೆ. ಗಣೇಕಲ್ ಜಲಾಶಯಕ್ಕೆ ನೀರು ತುಂಬಿಸಿಕೊಳ್ಳಲು ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಆದರೆ, ರೈತರ ಜಮೀನಿಗೆ ನೀರು ತಲುಪಿಸಲು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದರು.

ಕೊನೆ ಭಾಗಕ್ಕೆ ನೀರು ಬರದಿದ್ದರೂ, ಜಿಲ್ಲಾಧಿಕಾರಿ ರೈತರನ್ನು ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದು, ನೀರು ತರುವ ಕೆಲಸ ಮಾಡುತ್ತಿಲ್ಲ. ಕೊನೆ ಭಾಗದ ವ್ಯಾಪ್ತಿಯ ಶಾಸಕರು ಹೋರಾಟದಲ್ಲಿ ಪಾಲ್ಗೊಂಡು ರೈತರ ಧ್ವನಿಯಾಗಬೇಕು ಎಂದು ಆಗ್ರಹಿಸಿದರು.

ಜಂಬಣ್ಣ ನಿಲೋಗಲ್, ಆನಂದರಾವ್, ವೆಂಕಟರಾಮರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !