ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಟಗಲ್ ಬಸವೇಶ್ವರ ಏತ ನೀರಾವರಿ ಅನುಷ್ಠಾನಗೊಳಿಸಲು ಪ್ರತಿಭಟನೆ

Last Updated 4 ಫೆಬ್ರುವರಿ 2021, 12:16 IST
ಅಕ್ಷರ ಗಾತ್ರ

ರಾಯಚೂರು: ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕೃಷ್ಣ ಜಲ ನಿಗಮ ನಿಯಮಿತ ಆಹ್ವಾನಿಸಿದ ಸರ್ವೆ ಟೆಂಡರ್ ಪ್ರಕ್ರಿಯೆ ಮುಂದುವರೆಸಿ ರೈತರ ಜಮೀನುಗಳಿಗೆ ನೀರುಣಿಸಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಟಗಲ್ ಬಸವೇಶ್ವರ ಏತ ನೀರಾವರಿ ಹೋರಾಟ ಸಮಿತಿ ಮಸ್ಕಿ ಸಂಘಟನೆಯ ಪದಾಧಿಕಾರಿಗಳು ನಗರದ ರಂಗಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಗುರುವಾರ ಪ್ರತಿಭಟನಾ ರ್ಯಾಲಿ ನಡೆಸಿದರು.

ಆನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಮಸ್ಕಿ ವಿಧಾನಸಭಾ ಕ್ಷೇತ್ರದ ಪಾಮನಕೆಲ್ಲೂರು, ಅಮಿನಗಡ, ವಟಗಲ್ಲ ಮತ್ತು ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಹಳ್ಳಿಗಳ ರೈತರು ಕಳೆದ ಅನೇಕ ವರ್ಷಗಳಿಂದ ರೈತರು ನಂದವಾಡಗಿ ಹೋರಾಟ ಸಮಿತಿ ಮತ್ತು 5ಎ ವಿತರಣಾ ನಾಲೆ ಹೋರಾಟ ಸಮಿತಿಯ ಮೂಲಕ ಹೋರಾಟ ನಡೆಸುತ್ತಾ ಬಂದಿದ್ದಾರೆ.

ಪ್ರಸ್ತುತ ನೀರಿನ ಲಭ್ಯತೆಯ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ 5ಎ ನಾಲೆ ಯೋಜನೆ ಜಾರಿ ಕಷ್ಟ ಮತ್ತು ನದಿ ಜೋಡಣೆಯಿಂದ ಲಭ್ಯವಾಗಬಹುದುದಾದ ನೀರಿನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಬಹುದು ಎಂದು ನೀರಾವರಿ ಇಲಾಖೆ ಸ್ಪಷ್ಟ ನಿಲುವು ತಾಳಿದೆ ಹಾಗೂ ನದಿ ಜೋಡಣಾ ಪ್ರಕ್ರಿಯೆ ಕಾಲಮಿತಿ ನಿಗದಿಯಾಗಿಲ್ಲದಿರುವುದರಿಂದ ಕೂಡಲೇ ಸಾಧ್ಯವಾಗಬಹುದಾದ ರೈತರ ಅಪೇಕ್ಷೆಯಂತೆ ಹನಿ ನೀರಾವರಿ ಬದಲು ಹರಿ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯವಾಗುವಂತೆ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಜನವರಿ 19ರಂದು ಈ ವ್ಯಾಪ್ತಿಯ 500 ಜನ ರೈತರು ಬೆಂಗಳೂರಿಗೆ ತೆರಳಿ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ನೀರಾವರಿ ಸೌಲಭ್ಯಕ್ಕಾಗಿ ಆಗ್ರಹಿಸಿದ್ದು ಸರ್ಕಾರ ನಂದವಾಡಗಿ ಹಂತ –2 ರಲ್ಲಿ ಲಭ್ಯವಿರುವ 2.25 ಟಿಎಂಸಿ ನೀರನ್ನು ಬಳಸಿಕೊಂಡು ಹನಿ ನೀರಾವರಿ ಬದಲಾಗಿ ಹರಿ ನೀರಾವರಿ ಸೌಲಭ್ಯದ ಕುರಿತು ಆಲೋಚಿಸಿ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆಗೆ ಸರ್ವೆ ಕಾರ್ಯಕ್ಕೆ ಟೆಂಡರ್ ಕರೆದಿದೆ. ಈ ಪ್ರಕ್ರಿಯೆ ಶೀಘ್ರವೇ ಮುಗಿಸಿ ರೈತರ ಜಮೀನುಗಳಿಗೆ ನೀರು ಒದಗಿಸುವ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕ ಚಂದ್ರಶೇಖರ ಜಾಗಿರದಾರ್, ಶಿವಕುಮಾರ ವಟಗಲ್, ಮಹಾದೇವಪ್ಪ, ಚಂದ್ರಶೇಖರ ಸೇರಿದಂತೆ ವಿವಿಧ ಗ್ರಾಮದ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT