ಮಂಗಳವಾರ, ಜನವರಿ 31, 2023
19 °C
ಏಕಾಏಕಿ ಹತ್ತಿಬೆಲೆ ಇಳಿಕೆ: ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಪ್ರತಿಭಟನೆ 

ಡಿಸಿ ಕಚೇರಿ ರೈತರ ಮುತ್ತಿಗೆ: ಹತ್ತಿ ಖರೀದಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಹತ್ತಿ ದರವು ಏಕಾಏಕಿ ಪ್ರತಿ ಕ್ವಿಂಟಲ್‌ಗೆ ₹6 ಸಾವಿರಕ್ಕೆ ಕುಸಿತವಾಗಿರುವುದಕ್ಕೆ ಅಕ್ರೋಶಗೊಂಡಿರುವ ರೈತರು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್‌) ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಲು ಯತ್ನಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಬೃಹತ್‌ ಮೆರವಣಿಗೆ ಮೂಲಕ ಬಂದ ಸಾವಿರಾರು ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಲ್ಲ ತಾಲ್ಲೂಕುಗಳಿಂದ ಬಂದಿದ್ದ ರೈತರು, ಜಿಲ್ಲಾಧಿಕಾರಿಯೆ ಸ್ಥಳಕ್ಕೆ ಬಂದು ಅಹವಾಲು ಆಲಿಸಬೇಕು ಎಂದು ಪಟ್ಟುಹಿಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶದ್ವಾರದ ಮುಂದಿನ ಹೆದ್ದಾರಿಯಲ್ಲೇ ರೈತರು ಧರಣಿ ಕುಳಿತು ಪ್ರತಿಭಟನೆ ಮುಂದುವರಿಸಿದ್ದರಿಂದ ವಾಹನಗಳ ಸಂಚಾರ ಸುಮಾರು ಎರಡು ತಾಸು ಸ್ಥಗಿತವಾಗಿತ್ತು. ಪೊಲೀಸರು ವಾಹನಗಳು ಸಂಚರಿಸುವುದಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದರು.

ಇದೇ ವೇಳೆ ರೈತರ ಗುಂಪೊಂದು ಆಕ್ರೋಶದಿಂದ ಬಸವೇಶ್ವರ ವೃತ್ತಕ್ಕೆ ಧಾವಿಸಿ ರಸ್ತೆತಡೆ ಮಾಡಲು ಯತ್ನಿಸಿತು. ಆದರೆ ಪೊಲೀಸರ ಮನವೊಲಿಕೆಯಿಂದ ವಾಪಸಾದರು.

ವ್ಯಾಪಾರಸ್ಥರೊಂದಿಗೆ ಜಿಲ್ಲಾಧಿಕಾರಿ ಕೂಡಲೇ ಸಭೆ ನಡೆಸಬೇಕು. ಕನಿಷ್ಠ ದರ ₹12 ಸಾವಿರಕ್ಕೆ ಹೆಚ್ಚಿಸಲು ಕ್ರಮ ವಹಿಸಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರಲಿಲ್ಲವಾದ್ದರಿಂದ ರಾಯಚೂರು ಎಪಿಎಂಸಿ ಕಾರ್ಯದರ್ಶಿ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕೊನೆಗೆ ಎಡಿಸಿ ಹಾಗೂ ಎಪಿಎಂಸಿ ಕಾರ್ಯದರ್ಶಿ ಸ್ಥಳಕ್ಕೆ ಆಗಮಿಸಿ ಆದಷ್ಟು ಬೆಲೆ ಹೆಚ್ಚಿಸುವಂತೆ ಸರ್ಕಾರದೊಂದಿಗೆ ವ್ಯಾಪಾರಸ್ಥರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಡಿಸೆಂಬರ್ ಆರಂಭದಲ್ಲಿ ಪ್ರತಿ ಕ್ವಿಂಟಲ್‌ ಹತ್ತಿ ದರವು ₹10 ರಿಂದ ₹12 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಆದರೆ ಈಗ ಏಕಾಏಕಿಯಾಗಿ ಪ್ರತಿ ಕ್ವಿಂಟಲ್‌ಗೆ ₹6 ಸಾವಿರಕ್ಕೆ ಇಳಿದಿದೆ. ಇದರಿಂದ ರೈತರಿಗೆ ಸಿಡಿಲು ಬಡಿದಂತಾಗಿದೆ. ಕೃಷಿವೆಚ್ಚ ಹೆಚ್ಚಳವಾಗಿದ್ದು ದರ ಕುಸಿತವಾಗಿದ್ದರಿಂದ ಸಂಕಷ್ಟ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಅಧಿಕ ಮಳೆಯಿಂದಾಗಿ ಇಳುವರಿ ಬಹಳ ಕಡಿಮೆ ಬಂದಿದೆ. ಈ ಮೊದಲು ಪ್ರತಿ ಎಕರೆಗೆ 10 ರಿಂದ 14 ಕ್ವಿಂಟಲ್ ಹತ್ತಿ ಬರುತ್ತಿತ್ತು. ಆದರೆ ಈಗ ಮೂರು ಕ್ವಿಂಟಲ್ ಗೆ ಇಳಿಕೆಯಾಗಿದೆ. ಹತ್ತಿ ದರವು ₹12 ಸಾವಿರ ನೀಡಿದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಹಾಕಿರುವ ಖರ್ಚು ವಾಪಸ್ಸಾಗುವುದಿಲ್ಲ ಎಂದರು.

ಎಐಕೆಕೆಎಂಎಸ್‌ ರಾಜ್ಯ ಉಪಾಧ್ಯಕ್ಷ ವಿ.ನಾಗಮ್ಮಳ್, ಎಸ್ ಯು ಸಿ ಐ ( ಕಮ್ಯುನಿಸ್ಟ್ ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಚಂದ್ರ ಗಿರೀಶ್ ಮಾತನಾಡಿದರು.

ಕಾರ್ಮಿಕ ಸಂಘಟನೆ ಮುಖಂಡರಾದ ಎನ್.ಎಸ್.ವೀರೇಶ್ , ಮಹೇಶ್ ಚಿಕಲಪರ್ವಿ, ಚನ್ನಬಸವ ಜಾನೇಕಲ್ ಮಾತನಾಡಿದರು. ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಜಮಾಲುದ್ದೀನ್ ತಲಮಾರಿ, ಕಾರ್ಯದರ್ಶಿ ಮಲ್ಲನಗೌಡ ಅಂಚೆಸುಗೂರು, ಕಚೇರಿ ಕಾರ್ಯದರ್ಶಿ ಕಾರ್ತಿಕ್ ಶಿಂಧೆ, ದುರ್ಗಣ್ಣ, ಯಲ್ಲಪ್ಪ ಪತ್ತೆಪುರ , ಶರಣಗೌಡ ಪೂರ್ತಿಪ್ಲಿ, ಅಹಮದ್‌ಸಾಬ್, ಶರಣಪ್ಪ, ಮನೋಜ್‌ರೆಡ್ಡಿ ದಿನ್ನಿ, ದೇವರಾಜ್ ಕಲ್ಲೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು