ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ಗಾಗಿ ಕಾದಿರುವ ನದಿತೀರದ ರೈತರು

ಪ್ರವಾಹ ಪ್ರದೇಶದಲ್ಲಿ ಜೆಸ್ಕಾಂ ಸಿಬ್ಬಂದಿಯಿಂದ ಕಾರ್ಯಾಚರಣೆ
Last Updated 22 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ರಾಯಚೂರು:ಜಿಲ್ಲೆಯಲ್ಲಿ ಕೃಷ್ಣಾನದಿಯಿಂದ ಪ್ರವಾಹಕ್ಕೀಡಾಗಿದ್ದ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳ ನದಿತೀರದ ರೈತರೆಲ್ಲರೂ, ಕಡಿತವಾದ ವಿದ್ಯುತ್‌ ಸಂಪರ್ಕವು ಮತ್ತೆ ಯಾವಾಗ ಶುರುವಾಗುತ್ತದೆ ಎಂದು ಕಾದು ಕುಳಿತಿದ್ದಾರೆ.

ಜಲಾವೃತವಾಗಿದ್ದ ಬೆಳೆಗಳು ಹಾನಿಯಾಗಿರುವುದು ಒಂದೆಡೆಯಾದರೆ, ನದಿಯಿಂದ ಪೈಪ್‌ಲೈನ್‌ ಹಾಕಿಕೊಂಡು ನೀರಾವರಿ ಮಾಡಿಕೊಂಡಿದ್ದ ರೈತರ ಬೆಳೆಗಳು ಒಣಗುವ ಹಂತಕ್ಕೆ ತಲಪಿವೆ. ಬೇಗನೆ ನೀರು ಕೊಡದಿದ್ದರೆ ಈ ಬೆಳೆಗಳು ಹಾನಿಯಾಗುತ್ತವೆ ಎನ್ನುವ ಆತಂಕ ರೈತರಲ್ಲಿ ಮನೆಮಾಡಿದೆ. ರೈತರ ಸಂಕಷ್ಟವನ್ನು ಜನಪ್ರತಿನಿಧಿಗಳು ಜೆಸ್ಕಾಂ ಎಂಜಿನಿಯರುಗಳಿಗೆ ಮನವರಿಕೆ ಮಾಡಿದ್ದಾರೆ. ಒಂದು ವಾರದೊಳಗೆ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಯಥಾಸ್ಥಿತಿಗೆ ತರುವುದಾಗಿ ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರವಾಹದಿಂದಾಗಿ ಮೂರು ತಾಲ್ಲೂಕುಗಳ ನದಿತೀರ ಪ್ರದೇಶಗಳಲ್ಲಿ ಒಟ್ಟು 770 ವಿದ್ಯುತ್‌ ಪರಿವರ್ತಕಗಳು ಹಾಳಾಗಿವೆ. ನೀರಿನಲ್ಲಿ ಮುಳುಗಡೆಯಾಗಿದ್ದ ವಿದ್ಯುತ್‌ ಪರಿವರ್ತಕಗಳ ಪೈಕಿ 421 ಅನ್ನು ಈಗಾಗಲೇ ರಿಚಾರ್ಜ್‌ ಮಾಡಿ, ಮತ್ತೆ ಅಳವಡಿಸಲಾಗಿದೆ. ಪಂಪ್‌ಸೆಟ್‌ ಉದ್ದೇಶಕ್ಕಾಗಿ ಹಾಕಲಾಗಿದ್ದ ವಿದ್ಯುತ್‌ ಪರಿವರ್ತಕಗಳನ್ನು ಇನ್ನೂ ಬದಲಾವಣೆ ಮಾಡುವುದು ಬಾಕಿ ಇದೆ. ರಾಯಚೂರು ತಾಲ್ಲೂಕಿನ ಗ್ರಾಮಗಳಲ್ಲಿ ಬಹುತೇಕ ದುರಸ್ತಿ ಕಾರ್ಯ ಪೂರ್ಣಗೊಂಡಿದೆ ಎನ್ನುವುದು ಜೆಸ್ಕಾಂ ಅಧಿಕಾರಿಗಳ ವಿವರಣೆ.

ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯೂ ಸುರಿಯುತ್ತಿಲ್ಲ. ನದಿಯಿಂದ ನೀರಾವರಿ ಮಾಡಿಕೊಂಡಿದ್ದ ರೈತರ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಭತ್ತ ಒಣಗಲಾರಂಭಿಸಿದೆ. ಬೆಳೆಹಾನಿಯಾದರೆ, ಸರ್ಕಾರವು ಇಂತಹ ರೈತರಿಗೂ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಡಳಿತದ ಮೇಲೆ ಬುಧವಾರ ನಡೆದ ಸಭೆಯಲ್ಲಿ ಶಾಸಕರುಈಗಾಗಲೇ ಒತ್ತಡ ಹಾಕಿದ್ದಾರೆ. ಆದಷ್ಟು ಬೇಗನೆ ರೈತರ ಪಂಪಸೆಟ್‌ಗಳಿಗೆ ವಿದ್ಯುತ್‌ ಒದಗಿಸುವ ಬಗ್ಗೆ ಚರ್ಚೆಯಾಗಿದೆ. ಆದರೆ, ಅದು ಕಾರ್ಯಾನುಷ್ಠಾನ ಆಗುತ್ತದೆಯೋ ಇಲ್ಲವೋ ಎಂಬುದು ಇನ್ನೂ ಮೇಲೆ ತಿಳಿಯಲಿದೆ.

ಪ್ರವಾಹ ಹಾನಿ:ಪ್ರವಾಹದಿಂದಾಗಿನದಿತೀರದಲ್ಲಿದ್ದ ಪಂಪ್‌ಸೆಟ್‌ಗಳು, ವಿದ್ಯುತ್‌ ಪರಿವರ್ತಕಗಳು ಹಾಗೂ ವಿದ್ಯುತ್‌ ಕಂಬಗಳು 10 ಕ್ಕೂ ಹೆಚ್ಚು ದಿನಗಳವರೆಗೆ ಜಲಾವೃತವಾಗಿದ್ದವು. ಮುನ್ನಚ್ಚರಿಕೆ ಕ್ರಮವಾಗಿ ಜೆಸ್ಕಾಂ ಸಿಬ್ಬಂದಿಯು ನದಿತೀರದ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸ್ಥಗಿತಗೊಳಿಸಿದ್ದರು. ಹೀಗಾಗಿ ವಿದ್ಯುತ್‌ ಉಪಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿಲ್ಲ.

ಪ್ರವಾಹದಿಂದಾಗಿ ಜೆಸ್ಕಾಂಗೆ ಸಂಬಂಧಿಸಿದಂತೆ ಒಟ್ಟು ₹28.60 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ₹12 ಕೋಟಿ ಪರಿಹಾರ ದೊರೆಯಲಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ. ಸದ್ಯಕ್ಕೆ ವಿದ್ಯುತ್‌ ಪರಿವರ್ತಕ ಹಾಗೂ ಇನ್ನಿತರೆ ಉಪಕರಣಗಳನ್ನು ಅಳವಡಿಸಿ ವಿದ್ಯುತ್‌ ಜಾಲವನ್ನು ಸರಿಪಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ರಾಯಚೂರು ತಾಲ್ಲೂಕಿನ ನದಿತೀರಗಳಲ್ಲಿ 391, ಲಿಂಗಸುಗೂರು 12 ಹಾಗೂ ದೇವದುರ್ಗ ನದಿತೀರಗಳಲ್ಲಿ 379 ವಿದ್ಯುತ್‌ ಪರಿವರ್ತಕಗಳನ್ನು ಬದಲಾವಣೆ ಮಾಡಲಾಗುತ್ತಿದೆ. ‘ಎಲ್ಲ ಕಡೆಯಲ್ಲೂ ಏಕಕಾಲಕ್ಕೆ ದುರಸ್ತಿ ಕಾರ್ಯ ಆರಂಭಿಸಿವುದರಿಂದ ರೈತರಿಗೆ ಸಕಾಲಕ್ಕೆ ವಿದ್ಯುತ್‌ ದೊರೆಯಲಿದೆ’ ಎನ್ನುತ್ತಿದ್ದಾರೆ ಜೆಸ್ಕಾಂ ರಾಯಚೂರು ವಲಯದ ಪ್ರಭಾರಿ ಅಧೀಕ್ಷಕ ಎಂಜಿನಿಯರ್‌ ರಾಜೇಶ ವರ್ಮಾ ಅವರು.

ರಾಯಚೂರು ತಾಲ್ಲೂಕಿನ ಪಂಪ್‌ಸೆಟ್‌ಗಳಿಗೆ ನಿತ್ಯ 12 ಗಂಟೆ ತ್ರಿಪೇಸ್‌ ಹಾಗೂ ಇನ್ನುಳಿದ ತಾಲ್ಲೂಕುಗಳಿಗೆ ₹7 ಗಂಟೆ ತ್ರಿಪೇಸ್‌ ವಿದ್ಯುತ್‌ ಕೊಡಲಾಗುತ್ತಿದೆ. ಆದರೆ, ವಿದ್ಯುತ್‌ ಸರಬರಾಜು ಅವಧಿಯನ್ನು 10 ಗಂಟೆವರೆಗೆ ಹೆಚ್ಚಿಸಬೇಕು ಎಂದು ರಾಯಚೂರು ಹೊರತಾದ ತಾಲ್ಲೂಕುಗಳ ರೈತರು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT