'ಅವಕಾಶ ಉಪಯೋಗಿಸಿ ಬೆಳೆಯಬೇಕು'-ಶಾಸಕ ಡಾ.ಶಿವರಾಜ ಪಾಟೀಲ

ರಾಯಚೂರು: ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರದ ಸವಲತ್ತುಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಶ್ರಮಿಸಬೇಕು. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡೆದುಕೊಂಡು ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸಬೇಕು ಎಂದು ಶಾಸಕ ಡಾ. ಶಿವರಾಜ ಪಾಟೀಲ ಸಲಹೆ ನೀಡಿದರು.
ನಗರದ ಪಂಡಿರ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ತಾಲ್ಲೂಕು ಸಮಿತಿಯ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಮಾದಿಗ ಸಮಾಜದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದಿಗ ಸಮಾಜ ಅನೇಕ ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದು, ಪ್ರಸ್ತುತ ರಾಜಕೀಯ ಮೀಸಲಾತಿಯಿಂದ ನೂತನ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರಿಗೆ ಸಿಕ್ಕ ಅವಕಾಶದ ಸದುಪಯೋಗ ಪಡೆಯಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರೆಯುವಂತೆ ಕೆಲಸ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಕಾಳಜಿ ವಹಿಸಿ ದೊಡ್ಡ ಗುರಿ, ಉದ್ದೇಶ ಹೊಂದಬೇಕು. ಸಮಾಜದ ಕಳಕಳಿಹೊಂದಿ ಯುವಕರನ್ನು ಶಿಕ್ಷಣ ದೊರೆಯುವಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯ ಘಟಕದ ವಕ್ತಾರ ವಸಂತಕುಮಾರ ಮಾತನಾಡಿ, ‘ಡಾ. ಬಿ.ಆರ್. ಅಂಬೇಡ್ಕರ್, ಬಾಬೂ ಜಗಜೀವನ್ ರಾಂ, ಕೃಷ್ಣಪ್ಪ ಸೇರಿದಂತೆ ಮಹಾನ್ ನಾಯಕರು ಹಾಕಿದ ಮಾರ್ಗದಲ್ಲಿ ನಡೆಯಬೇಕು. ಸಮಾಜದ ಅಭಿವೃದ್ಧಿಗೆ ರಾಜಕೀಯ ನಾಯಕರು, ಮುಖಂಡರು, ಪ್ರಗತಿಪರರು ವ್ಯವಸ್ಥಿತವಾಗಿ ಕೆಲಸ ಮಾಡಲು ವಿಫಲರಾಗಿದ್ದೇವೆ. ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಸಮಾಜದವರು ನಿರ್ಣಯಕರಾಗಿದ್ದರೂ ಚುನಾಯಿತರಾಗಿ ಆಯ್ಕೆಯಾಗುವುದು ಕಡಿಮೆ. ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.
ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಕೊಡ್ಲಿ, ಕಾರ್ಯಾಧ್ಯಕ್ಷ ರವೀಂದ್ರ ಜಲ್ದಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಮಾದಿಗ ಸಮಾಜದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನಿಸಲಾಯಿತು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ಜೆಡಿಎಸ್ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಿ, ಜಿಲ್ಲಾ ಕಾರ್ಯಾಧ್ಯಕ್ಷ ಎನ್, ಶಿವಶಂಕರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ. ಗೋಪಾಲರೆಡ್ಡಿ, ನಗರಸಭೆ ಅಧ್ಯಕ್ಷ ಈ.ವಿನಯಕುಮಾರ, ಸದಸ್ಯ ಹರೀಶ ನಾಡಗೌಡ, ಮಾದಿಗ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಯಲ್ಲಪ್ಪ, ಚಂದ್ರಶೇಖರ, ವೆಂಕಟೇಶ, ಹುಲಿಗೆಪ್ಪ, ಕಡಗೋಲ ಆಂಜಿನೇಯ ಮತ್ತಿತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.