ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಚಿಕಿತ್ಸೆ ನೀಡಿ ಜೀವಗಳನ್ನು ರಕ್ಷಿಸಿ: ಡಾ.ವೆಂಕಟೇಶ

ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ
Last Updated 22 ಸೆಪ್ಟೆಂಬರ್ 2022, 12:43 IST
ಅಕ್ಷರ ಗಾತ್ರ

ರಾಯಚೂರು: ಅಪಘಾತ ಸಂಭವಿಸಿದ ತಕ್ಷಣ ಏನು ಮಾಡಬೇಕು ಎಂಬ ತಿಳುವಳಿಕೆ ಇಲ್ಲ. ಹೀಗಾಗಿ ಅಪಘಾತದಿಂದ ಹಲವಾರು ಜನ ಪ್ರಾಣಬಿಡುತ್ತಿದ್ದಾರೆ ಎಂದು ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ವೆಂಕಟೇಶ ವೈ. ನಾಯಕ ಹೇಳಿದರು.

ನಗರದ ಜಿಲ್ಲಾ ತರಬೇತಿ ಕೇಂದ್ರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಕೆಕೆಆರ್‌ಟಿಸಿ ಸಿಬ್ಬಂದಿಗೆ, ಹೋಂಗಾರ್ಡ್ ಸಿಬ್ಬಂದಿಗೆ ಹಾಗೂ ವೇದಾಂತ ಪದವಿ ಕಾಲೇಜು ಮತ್ತು ಎಸ್‌ಕೆಇ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವ ರಕ್ಷಕ ಪ್ರಥಮ ಚಿಕಿತ್ಸೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಜೀವ ರಕ್ಷಣಾ ತರಬೇತಿಯನ್ನು ಪಡೆದು ಅಪಘಾತವಾದವರಿಗೆ ಪ್ರಥಮ ಚಿಕಿತ್ಸೆ ನೀಡಿ, ಜೀವಗಳನ್ನು ರಕ್ಷಿಸಬಹುದಾಗಿದೆ ಎಂದರು.

ಅಪಘಾತ ಸಂಭವಿಸಿದಾಗ, ಹೃದಯಾಘಾತವಾದಾಗ, ಮೂರ್ಛೆ, ಲಕ್ವ ಹೊಡೆದಾಗ, ನೀರಿನಲ್ಲಿ ಮುಳುಗಿದ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯೊವ ಮೊದಲು ರೋಗಿಯನ್ನು ಪ್ರಥಮ ಚಿಕಿತ್ಸೆ ನೀಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪ್ರಾಣ ರಕ್ಷಿಸುವ ಕೌಶಲ್ಯ ತರಬೇತಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಸಾರ್ವಜನಿಕ ಸೇವೆಯ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವವರಿಗೆ ತರಬೇತಿ ಆರಂಭಿಸಲಾಗಿದೆ ಎಂದರು.

ಜಿಲ್ಲಾ ಗೃಹರಕ್ಷ ಕದಳದ ಜಿಲ್ಲಾ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿ ಮಾತನಾಡಿ, ಆರೋಗ್ಯ ಇಲಾಖೆಯು ಇಂತಹ ಒಂದು ಉಪಯುಕ್ತ ತರಬೇತಿಯನ್ನು ನೀಡಲು ಮುಂದಾಗಿದ್ದು ತುಂಬಾ ಪ್ರಶಂಸನೀಯ ಎಂದು ಹೇಳಿದರು.

ಅಪಘಾತ ಸಂಭವಿಸಿದಾಗ, ತೀವ್ರ ಹೃದಯಾಘಾತವಾದಾಗ, ನಾಯಿ-ಹಾವು ಕಚ್ಚಿದಾಗ, ಪೆಟ್ಟು-ಗಾಯವಾದಾಗ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ರಕ್ತ ಸೋರಿಕೆ ತಡೆಗಟ್ಟುವುದರಿಂದ ಪ್ರಾಣ ಹೋಗದಂತೆ ಪ್ರಥಮ ಚಿಕಿತ್ಸೆ ನೀಡಿ ರೋಗಿಯನ್ನು ಆಸ್ಪತ್ರೆಗೆ ತಲುಪುವವರೆಗೆ ರಕ್ಷಿಸುವುದು ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರೂ ಈ ಕೌಶಲ್ಯವನ್ನು ಹೊಂದಬೇಕು.ಎಲ್ಲರೂ ಜೀವ ರಕ್ಷಕ ಕಲೆಯನ್ನು ಕರಗತಗೊಳಿಸಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಅದರಲ್ಲೂ ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಇಂತಹ ತರಬೇತಿಯನ್ನು ಪಡೆದರೆ ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ ಜೀವ ರಕ್ಷಣೆ ಮಾಡಬಹುದು ಎಂದು ಹೇಳಿದರು.

ತರಬೇತಿಯಲ್ಲಿ ಕೆಕೆಆರ್‌ಟಿಸಿ ಚಾಲಕರು, ನಿರ್ವಾಹಕರು, ಕಾನ್‌ಸ್ಟೇಬಲ್‌ಗಳು ಹಾಗೂ ತಾಂತ್ರಿಕ ಸಹಾಯಕರು, ಜಿಲ್ಲಾ ಗೃಹ ರಕ್ಷಕದಳದಿಂದ ಹೋಂಗಾರ್ಡ್ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟು 50 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

ಜಿಲ್ಲಾ ತರಬೇತಿ ಕೇಂದ್ರದ ನುರಿತ ಸಿಬ್ಬಂದಿ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಪಡೆದ ಮರುಳ ಸಿದ್ದೇಶ್ವರ ದೇವೂರು, ವಿಜಯಕುಮಾರ ಎ.ಡಿ. ಹಾಗೂ ಕಿರಣ ಹೆಗಡೆ ಹಾಗೂ ಜಿಲ್ಲಾ ಸಂಯೋಜಕ ನಾವೇಲ್ ಟೋನಿ ಹುಗ್ಗಿ ಅವರು ತರಬೇತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT