ಸೋಮವಾರ, ಅಕ್ಟೋಬರ್ 14, 2019
29 °C

ಹೂಡಿಕೆದಾರರ ಸಮಾವೇಶ ಆಯೋಜನೆಗೆ ಒತ್ತಾಯ

Published:
Updated:
Prajavani

ರಾಯಚೂರು: ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯದ ಪ್ರತಿಯೊಂದು 5ಸಾವಿರ ಎಕರೆಯ ಭೂ ಬ್ಯಾಂಕ್‌ ಸ್ಥಾಪಿಸಲು ಹಾಗೂ ರಾಯಚೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು ಎಂದು ಬೆಂಗಳೂರಿನ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜಿಲ್ಲೆಗಳಲ್ಲಿ ಕೂಡ ಕೈಗಾರಿಕೆಗಳು ಸ್ಥಾಪನೆಯಾಗಿ ಪ್ರಗತಿ ಸಾಧನೆ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ. ಆದ್ದರಿಂದ ಈ ಭಾಗದಲ್ಲಿ ಕೂಡ ಬೃಹತ್ ಕೈಗಾರಿಕೆಗಳ ಸ್ಥಾಪನೆ ಅಗತ್ಯವಾಗಿದೆ. ಮಹತ್ವಾಕಾಂಕ್ಷೆ ಜಿಲ್ಲೆಯನ್ನಾಗಿ ಆಯ್ಕೆ ಮಾಡಿರುವುದರಿಂದ ಈ ಅಂಶವನ್ನು ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದರು.

ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ಕೈಗಾರಿಕೆ ನೀತಿ ರೂಪಿಸುವುದು ಅಗತ್ಯವಾಗಿದ್ದು, ಈಗಾಗಲೇ ಕೈಗಾರಿಕೆ ಸಚಿವರನ್ನು ಭೇಟಿ ಮಾಡಿ ಬಡ್ಡಿದರ ಇಳಿಕೆ, ₹ 3 ಸಾವಿರ ಕೋಟಿ ಅನುದಾನ ಒದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಲಾಗಿದೆ. ದೇಶದಲ್ಲಿ ಆಮದು ಹಾಗೂ ರಫ್ತಿನಲ್ಲಿ ಆಗುತ್ತಿರುವ ತೊಂದರೆಗಳನ್ನು ದೇಶದ ಹಿತಾಸಕ್ತಿ ಪರಿಗಣಿಸಿ ಸರಿಪಡಿಸಬೇಕು. ಕನಿಷ್ಠ ವೇತನ ಜಾರಿ ವಿಷಯದಲ್ಲೂ ಎಲ್ಲ ರಾಜ್ಯಗಳಿಗೆ ಒಂದೇ ನೀತಿ ಜಾರಿ ಮಾಡಬೇಕು. ಭೂಮಿಯ ಬೆಲೆ ಇಳಿಯಬೇಕು. ಅದಕ್ಕಾಗಿ ಸರ್ಕಾರಕ್ಕೆ ಯಾವುದೇ ಲಾಭ ಅಥವಾ ನಷ್ಟವಾಗದಂತೆ ಕೈಗಾರಿಕೆಗಳಿಗೆ ಭೂಮಿ ನೀಡಬೇಕು. ಸರ್ಕಾರ ಭೂ ಸ್ವಾಧೀನದಲ್ಲೂ ಲಾಭ ಮಾಡಿಕೊಳ್ಳುವುದನ್ನು ಬಿಡಬೇಕು. ಬಹಳಷ್ಟು ಸುಧಾರಣೆಗಳನ್ನು ಮಾಡಬೇಕಿದ್ದು, ಕೈಗಾರಿಕಾ ಸ್ನೇಹಿ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಮುಂದಿನ ಏಪ್ರಿಲ್‌ನಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗುತ್ತಿದ್ದು, ಅಲ್ಲಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಉದ್ಯಮಿ ಮುಖೇಶ ಅಂಬಾನಿ ಅವರನ್ನು ಆಹ್ವಾನ ಮಾಡಲಾಗುತ್ತದೆ ಎಂದು ತಿಳಿಸಿದರು.

Post Comments (+)