ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ‌ ಹೆಚ್ಚಿದ ಅಬ್ಬರ

ನದಿ ಪಾತ್ರಗಳಲ್ಲಿ ಕಟ್ಟೆಚ್ಚರ ವಹಿಸಿರುವ ಅಧಿಕಾರಿಗಳು
Last Updated 11 ಆಗಸ್ಟ್ 2022, 13:25 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಪ್ರವಾಹದ ಅಬ್ಬರ ಗುರುವಾರದಿಂದ ಏರುಗತಿ ಪಡೆದುಕೊಂಡಿದೆ. ನದಿತೀರದ ಗ್ರಾಮಗಳಲ್ಲಿ ಹಾಗೂ ಸೇತುವೆಗಳಿರುವ ಕಡೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ 2.19 ಲಕ್ಷ ಕ್ಯುಸೆಕ್ ಅಡಿ ನೀರು‌ ಹೊರಬಿಡಲಾಗುತ್ತಿದೆ. ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಈಗ ಸುಮಾರು 50 ಕಿಮೀ ಸುತ್ತುವರೆದು ಜಲದುರ್ಗ ಮಾರ್ಗದ ಮೂಲಕ ಲಿಂಗಸುಗೂರಿಗೆ ತಲುಪಬೇಕಿದೆ.

ಮಹಾರಾಷ್ಟ್ರದ ಕೃಷ್ಣಾ ನದಿ ಕೊಳ್ಳಗಳಲ್ಲಿ ಮತ್ತೆ ಮಳೆ ಮುಂದುವರಿದಿದ್ದು, ಪ್ರವಾಹವು ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯದ ಬೆಳಗಾವಿ, ವಿಜಯಪುರದಲ್ಲೂ ಮಳೆ ಬೀಳುತ್ತಿರುವುದರಿಂದ ಕೃಷ್ಣಾನದಿಗೆ ಸತತವಾಗಿ ನೀರು ಹರಿದು ಬರುತ್ತಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಮಳೆನೀರು ಡೋಣಿ ನದಿಗೆ ಸೇರುತ್ತಿದ್ದು, ಡೋಣಿ ನದಿಯು ಲಿಂಗಸುಗೂರು ಪಕ್ಕದಲ್ಲಿ ಕೃಷ್ಣಾನದಿಯಲ್ಲಿ ಸಂಗಮವಾಗುತ್ತದೆ. ಅಲ್ಲದೆ, ಭೀಮಾನದಿ ಮೂಲಕ ಬರುವ ನೀರು ಕೂಡಾ ರಾಯಚೂರು ಪಕ್ಕದಲ್ಲಿ ಕೃಷ್ಣಾನದಿ ಸೇರಿಕೊಳ್ಳುತ್ತದೆ.

ಲಿಂಗಸುಗೂರು ತಾಲ್ಲೂಕು ನಂತರದಲ್ಲಿ ಕೃಷ್ಣಾನದಿಯಲ್ಲಿ ಹರಿಯುವ ನೀರಿನ ಪ್ರಮಾಣವು ಇನ್ನಷ್ಟು ಅಧಿಕವಿದೆ. ದೇವದುರ್ಗ, ರಾಯಚೂರು ತಾಲ್ಲೂಕುಗಳ ಮೂಲಕ ಹರಿಯುವ ಕೃಷ್ಣೆಯು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳತ್ತ ನದಿಯು ಪ್ರವಹಿಸುತ್ತದೆ. ಕರ್ನಾಟಕ–ತೆಲಂಗಾಣ ಗಡಿಭಾಗ ಕೃಷ್ಣಾನದಿಗೆ ನಿರ್ಮಿಸಿರುವ ಜುರಾಲಾ ಪ್ರಿಯದರ್ಶಿನಿ ಜಲಾಶಯದಿಂದ ಆಂಧ್ರದ ಕಡೆಗೆ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.

ಪ್ರವಾಹಮಟ್ಟ ಹೆಚ್ಚಳವಾಗುತ್ತಿದ್ದು, 2.5 ಲಕ್ಷ ಕ್ಯುಸೆಕ್ ಗಿಂತ ಹೆಚ್ಚು ನೀರು ಹರಿದುಬಂದರೆ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಲಿದೆ. ಇದರಿಂದ ಕಲಬುರಗಿ-ರಾಯಚೂರು ಪ್ರಮುಖ ಮಾರ್ಗದ ಸಂಪರ್ಕ ಕಡಿತವಾಗಲಿದೆ. ಈ ಮಾರ್ಗದಲ್ಲಿ ಬರುವ ವಾಹನಗಳು ತಿಂಥಣಿ ಬ್ರಿಡ್ಜ್‌ ಮೂಲಕ ಸಂಚರಿಸಬೇಕಾಗುತ್ತದೆ. ಇದರಿಂದ ಸುಮಾರು 50 ಕಿಮೀ ಹೆಚ್ಚಿನ ಸಂಚಾರ ಮಾಡುವುದು ಅನಿವಾರ್ಯವಾಗಲಿದೆ.

ತುಂಗಭದ್ರಾ ನದಿಯಲ್ಲೂ ಈ ವರ್ಷ ಪ್ರವಾಹಮಟ್ಟ ಕಳೆದ ವರ್ಷಕ್ಕಿಂತಲೂ ಅಧಿಕವಾಗಿದೆ. ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲ್ಲೂಕುಗಳ ಮೂಲಕ ಹರಿದು ಆಂಧ್ರದತ್ತ ಸಾಗುತ್ತಿದ್ದು, ನದಿತೀರದುದ್ದಕ್ಕೂ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನದಿಯತ್ತ ತೆರಳದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ತೆಲಂಗಾಣ, ಆಂಧಪ್ರದೇಶ ಮತ್ತು ಕರ್ನಾಟಕ ಗಡಿಭಾಗದ ರಾಜಲಬಂಡಾ ಸೇತುವೆ ಬಳಿಯೂ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಗುರುವಾರ ಸಂಜೆ ವರದಿ ಪ್ರಕಾರ, 1.80 ಲಕ್ಷ ಕ್ಯುಸೆಕ್ ಅಡಿ ತುಂಗಭದ್ರಾದಲ್ಲಿ ನೀರು ಹರಿದುಬರುತ್ತಿದೆ. ಮಾನ್ವಿ ತಾಲ್ಲೂಕಿನ ನದಿತೀರದ ಕೆಲವು ಗ್ರಾಮಗಳ ಕೃಷಿಬೆಳೆ ನೀರುಪಾಲಾಗಿವೆ. ಯಾವುದೇ ಜೀವ, ಆಸ್ತಿ ಹಾನಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT