ಸೋಮವಾರ, ಆಗಸ್ಟ್ 26, 2019
20 °C
ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿಸಿ

ರಾಯಚೂರು: ಪ್ರವಾಹ ಹಾನಿ ವರದಿ ತಯಾರಿ ಶೀಘ್ರ

Published:
Updated:
Prajavani

ರಾಯಚೂರು: ಜಿಲ್ಲೆಯಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಪ್ರವಾಹದಿಂದ ಹಾನಿಯಾದ ವರದಿ ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಜಿಲ್ಲಾಡಳಿತವು ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಾರಾಯಣಪುರ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳ ನದಿತೀರದ 72 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿತ್ತು. ಅದೇ ರೀತಿ ತುಂಗಭದ್ರಾ ನದಿತೀರದ 33 ಗ್ರಾಮಗಳಲ್ಲೂ ಪ್ರವಾಹದ ಪರಿಣಾಮ ಉಂಟಾಗುವುದನ್ನು ಗುರುತಿಸಲಾಗಿತ್ತು. ಇದೀಗ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳನ್ನು ಪ್ರವಾಹ ಎಂದು ಘೋಷಿಸುವುದಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು, ಪ್ರತಿಹಂತದಲ್ಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೃಷ್ಣಾನದಿ ನಡುಗಡ್ಡೆ ಪ್ರದೇಶಗಳಲ್ಲಿ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಲಾಗಿದೆ. 28 ಪರಿಹಾರ ಕೇಂದ್ರಗಳನ್ನು ಆರಂಭಿಸಿ, 5,576 ಸಂತ್ರಸ್ರರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರವಾಹ ಇಳಿಮುಖವಾಗುತ್ತಿದ್ದು, ಪರಿಹಾರ ಕೇಂದ್ರಗಳನ್ನು ಇನ್ನು ಎರಡು ದಿನಗಳವರೆಗೆ ಮುಂದುವರಿಸಿ, ಪರಿಸ್ಥಿತಿ ನೋಡಿಕೊಂಡು ಮತ್ತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲಾಡಳಿತದ ಕರೆಗೆ ಓಗೊಟ್ಟು ಭಾರತೀಯ ಸೇನೆ, ಎನ್‌ಡಿಆರ್‌ಎಫ್‌, ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗ ಕೆಲಸ ಮಾಡಿದ್ದಾರೆ ಎಂದು ನೆನಪಿಸಿಕೊಂಡರು.

ಜಿಲ್ಲೆಯಲ್ಲಿ ಎರಡು ಹೆಕ್ಟೇರ್‌ಗಿಂತಲೂ ಕಡಿಮೆ ಜಮೀನು ಹೊಂದಿರುವ ಪ್ರಧಾನಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ವಾರ್ಷಿಕ ₹6 ಸಾವಿರ ಸಹಾಯಧನ ಜಮಾಗೊಳಿಸಲಾಗುತ್ತಿದೆ. ಸಿರಿಧಾನ್ಯ ಸಂಸ್ಕರಣ ಘಟಕಗಳಿಗಾಗಿ ಗರಿಷ್ಠ ₹10 ಲಕ್ಷವರೆಗೂ ಸಹಾಯಧನ ನೀಡಲಾಗುವುದು ಎಂದರು.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2019–20ನೇ ಸಾಲಿನಲ್ಲಿ 73.73 ಲಕ್ಷ ಮಾನವ ದಿನಗಳ ಸೃಜನೆಯಾಗಿದ್ದು, ₹168.75 ಕೋಟಿ ವ್ಯಯಿಸಲಾಗಿದೆ. ಎಚ್‌ಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ ₹161 ಕೋಟಿ, ಮ್ಯಾಕ್ರೋ ಯೋಜನೆಯಡಿ ₹70 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ತಡೆಗಟ್ಟುವ ಉದ್ದೇಶದಿಂದ ಜನನಿ ಸುರಕ್ಷಾ ಯೋಜನೆ, ಮಡಿಲು ಕಿಟ್‌, ನಗು–ಮಗು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ 33 ಇಂಗ್ಲಿಷ್‌ ಮಾಧ್ಯಮ ಪ್ರಾಥಮಿಕ ಶಾಲೆಗಳು, ನಾಲ್ಕು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಸಕ್ತ ಸಾಲಿನಲ್ಲಿ ಮಂಜೂರು ಮಾಡಲಾಗಿದೆ. 882 ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರದಲ್ಲೆ ನಡೆಯಲಿದೆ ಎಂದು ಹೇಳಿದರು.

ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಮಾತೃಪೂರ್ಣ ಯೋಜನೆ ಜಾರಿಯಲ್ಲಿದೆ. 1,13,111 ಭಾಗ್ಯಲಕ್ಷ್ಮೀ ಯೋಜನೆಯಡಿ ಬಾಂಡ್‌ಗಳನ್ನು ವಿತರಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕೆನೆಸಹಿತ ಹಾಲು ಕೊಡಲಾಗುತ್ತಿದೆ ಎಂದರು.

ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. 15 ತಂಡಗಳಿಂದ ಪಥಸಂಚಲನ ನಡೆಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸಂಸದ ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್‌ ಸದಸ್ಯರಾದ ಎನ್‌.ಎಸ್‌. ಬೋಸರಾಜು, ಬಸವರಾಜ ಪಾಟೀಲ ಇಟಗಿ ಇದ್ದರು. 

Post Comments (+)